ಪೋಕ್ಸೊ ಪ್ರಕರಣ: ಆರೋಪಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದ್ದು ಏಕೆ?

ಬಡತನ ದೇಶದ ದೊಡ್ಡ ಸಮಸ್ಯೆಯಾಗಿದೆ. ಮದುವೆಯನ್ನು ನಿರ್ಧರಿಸಲು ಸಕಾರಣಗಳಿದ್ದು ಸದುದ್ದೇಶ ಇದರ ಹಿಂದಿದೆ ಎಂದ ನ್ಯಾಯಾಲಯ.
Aurangabad Bench with POCSO Act
Aurangabad Bench with POCSO Act
Published on

ಅಪ್ರಾಪ್ತೆ ಭಾವಿ ಪತ್ನಿಯನ್ನು ಗರ್ಭಿಣಿ ಮಾಡಿದ ಆರೋಪಿಗೆ ಬಾಂಬೆ ಹೈಕೋರ್ಟ್‌ ಈಚೆಗೆ ಜಾಮೀನು ನೀಡಿದ್ದು ಅವರಿಬ್ಬರ ವಿವಾಹ ಏರ್ಪಾಟು ಸದುದ್ದೇಶದಿಂದ ಕೂಡಿದ್ದು, ಬಡತನದ ಕಠೋರ ವಾಸ್ತವಗಳಿಗೆ ಪ್ರತಿಕ್ರಿಯೆಯಾಗಿದೆ ಎಂದಿದೆ [ಅನಾಮಿಕ ವ್ಯಕ್ತಿ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ಭಾರತೀಯ ನ್ಯಾಯ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ (ಪೋಕ್ಸೊ ಕಾಯಿದೆ) ಅಡಿಯಲ್ಲಿ ಅತ್ಯಾಚಾರದ ಅಪರಾಧಕ್ಕಾಗಿ ಬಂಧಿತನಾಗಿದ್ದ ಆರೋಪಿಗೆ ಜಾಮೀನು ನೀಡುವ ಸಂದರ್ಭದಲ್ಲಿ ನ್ಯಾಯಮೂರ್ತಿ ಎಸ್‌ ಜಿ ಮೆಹರೆ ಅವರು ಭಾರತದಲ್ಲಿನ ಬಾಲ್ಯ ವಿವಾಹಗಳಿಗೆ ಸಂಬಂಧಿಸಿದ ಮಹತ್ವದ ಸಾಮಾಜಿಕ ಸಮಸ್ಯೆಗಳನ್ನು ಒಪ್ಪಿಕೊಂಡರು.  

Also Read
ಪೋಕ್ಸೊ ಸಂತ್ರಸ್ತ ಬಾಲಕಿಗೆ 150 ಪ್ರಶ್ನೆ: ವಕೀಲರು ಮಾನವೀಯತೆಯಿಂದ ವರ್ತಿಸುವಂತೆ ಬುದ್ಧಿವಾದ ಹೇಳಿದ ಸುಪ್ರೀಂ ಕೋರ್ಟ್‌

"ಬಡತನ ನಮ್ಮ ದೇಶದ ದೊಡ್ಡ ಸಮಸ್ಯೆಯಾಗಿದೆ" ಎಂದ ನ್ಯಾಯಮೂರ್ತಿ ಮೆಹರೆ ಅವರು ಆರೋಪಿ ಮತ್ತು ಅಪ್ರಾಪ್ತ ಸಂತ್ರಸ್ತೆ ನಡುವಿನ ವಿವಾಹವನ್ನು ಏರ್ಪಡಿಸುವ ನಿರ್ಧಾರದ ಹಿಂದಿನ ಕಾರಣಗಳು ಸಮಂಜಸ ಮತ್ತು ಸದುದ್ದೇಶದಿಂದ ಕೂಡಿವೆ ಎಂದರು.

ಆರೋಪಿ ಮತ್ತು ಸಂತ್ರಸ್ತೆ ಸೋದರ ಸಂಬಂಧಿಗಳಾಗಿದ್ದರು. ಮದುವೆಗೂ ಮುನ್ನ ದೈಹಿಕ ಸಂಬಂಧ ಹೊಂದಿದ ಪರಿಣಾಮ ಸಂತ್ರಸ್ತೆ ಗರ್ಭ ಧರಿಸಿದ್ದರು. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಆಕೆ ಅಪ್ರಾಪ್ತ ವಯಸ್ಕಳು ಎಂದು ತಿಳಿದುಬಂದಿತ್ತು.

ಗಂಭೀರವಾದ ಹೃದಯ ಸಂಬಂಧಿ ಕಾಯಿಲೆಯಿಂದ ತನ್ನ ಪತ್ನಿ ಹಾಗೂ ಮೆದುಳಿನ ಕಾಯಿಲೆಯಿಂದ ತಾನು ಬಳಲುತ್ತಿದ್ದು, ಹೆಚ್ಚು ದಿನ ತಾವು ಬದುಕಿರುವುದಿಲ್ಲ ಎನ್ನುವ ಹಿನ್ನೆಲೆಯಲ್ಲಿ ಮಗಳ ಭವಿಷ್ಯವನ್ನು ಭದ್ರಪಡಿಸಲು ಅವಳು ಅಪ್ರಾಪ್ತೆಯಾಗಿರುವಾಗಲೇ ವಿವಾಹ ನಡೆಸಲು ಮುಂದಾದ ಬಗ್ಗೆ ಸಂತ್ರಸ್ತೆಯ ತಂದೆ ನ್ಯಾಯಾಲಯಕ್ಕೆ ವಿವರಿಸಿದರು. ಅಲ್ಲದೆ, ಪ್ರಕರಣದಲ್ಲಿ ಜಾಮೀನು ಕೋರಿ ಆರೋಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯುತ್ತಿರುವಾಗಲೇ, ತನ್ನ ಪತ್ನಿ (ಸಂತ್ರಸ್ತೆಯ ತಾಯಿ ತಾಯಿ ನಿಧನರಾಗಿದ್ದರು) ಎನ್ನುವ ಅಂಶವನ್ನೂ ನ್ಯಾಯಾಲಯದ ಗಮನಕ್ಕೆ ತಂದರು.

ಸಂತ್ರಸ್ತೆಯ ಕುಟುಂಬದ ಸಮಸ್ಯೆಗಳು, ಸಾಮಾಜಿಕ ಕಾರಣಗಳನ್ನು ನ್ಯಾಯಾಲಯವು ಗಣನೆಗೆ ತೆಗೆದುಕೊಂಡಿತು. ಸಾಮಾಜಿಕ ಒತ್ತಡಗಳಿಂದ ತಮ್ಮ ಮಗಳನ್ನು ರಕ್ಷಿಸುವ ಪೋಷಕರ ಉದ್ದೇಶಗಳನ್ನು ನ್ಯಾಯಾಲಯ ಪ್ರಸ್ತಾಪಿಸಿತು.

"ಸಮಾಜದ ಕೆಟ್ಟ ಕಣ್ಣುಗಳಿಂದ ಮಗಳನ್ನು ರಕ್ಷಿಸಲು ಅವರು ಬಯಸಿದ್ದರು. ತಮ್ಮ ಸಂಕಷ್ಟಕರ ಸನ್ನಿವೇಶಗಳ ಹಿನ್ನೆಲೆಯಲ್ಲಿ ಅರ್ಜಿದಾರರ ಮತ್ತು ಸಂತ್ರಸ್ತೆಯ ವಿವಾಹವನ್ನು ನಿರ್ಧರಿಸಿದರು. ನಮ್ಮ ದೇಶದ ಸಾಮಾಜಿಕ ವ್ಯವಸ್ಥೆಯ ಸಂದರ್ಭದಲ್ಲಿ ಇದು ನೈಜ ಕಾರಣವಾಗಿರಬಹುದಾಗಿದೆ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು..

ಆರೋಪಗಳ ಗಂಭೀರ ಸ್ವರೂಪದ ಹೊರತಾಗಿಯೂ, ನ್ಯಾಯಾಲಯವು ಪ್ರಕರಣದ ಸುತ್ತಲಿನ "ಬಲವಾದ ಸಂದರ್ಭಗಳನ್ನು" ಗುರುತಿಸಿ. ಈ ಅಂಶಗಳ ಹಿನ್ನೆಲೆಯಲ್ಲಿ ಆರೋಪಿಗೆ ಜಾಮೀನು ನೀಡಿತು.

Also Read
ಪೋಕ್ಸೊ ಪ್ರಕರಣ: ಮುರುಘಾ ಶರಣರ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಚಿತ್ರದುರ್ಗ ಪೊಲೀಸರಿಗೆ ಹೈಕೋರ್ಟ್‌ ಆದೇಶ

"ಮದುವೆಯನ್ನು ನಿರ್ಧರಿಸಲು ಸಕಾರಣವಿದ್ದು, ಉತ್ತಮ ಉದ್ದೇಶವಿದೆ. ಅಪರಾಧ ದಾಖಲಾಗಿದ್ದರು ಅರ್ಜಿದಾರರು ಸಂತ್ರಸ್ತೆ ಪ್ರಾಪ್ತ ವಯಸ್ಸಿಗೆ ಬಂದ ನಂತರ ಮದುವೆಯಾಗಲು ಸಿದ್ಧರಾಗಿದ್ದಾರೆ. ಈ ಬಲವಾದ ಸಂದರ್ಭಗಳನ್ನು ಪರಿಗಣಿಸಬೇಕಾಗಿದೆ. ಆದ್ದರಿಂದ, ಅರ್ಜಿದಾರನ್ನು ಕೆಲವು ಷರತ್ತುಗಳ ಮೇಲೆ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು,’’ ಎಂದು ನ್ಯಾಯಾಲಯ ಹೇಳಿದೆ.

ಜಾಮೀನು ಮೊತ್ತ ₹50,000ಕ್ಕೆ ನಿಗದಿಪಡಿಸಿದ ನ್ಯಾಯಾಲಯ, ಅವರು ಕಾನೂನುಬದ್ಧವಾಗಿ ಮದುವೆಯಾಗುವವರೆಗೆ ಸಂತ್ರಸ್ತೆಯೊಂದಿಗೆ ಮತ್ತೆ ದೈಹಿಕ ಸಂಬಂಧದಲ್ಲಿ ತೊಡಗಬಾರದು ಎಂಬ ಷರತ್ತಿನ ಮೇಲೆ ಆರೋಪಿಯನ್ನು ಬಿಡುಗಡೆಗೊಳಿಸಲು ಅವಕಾಶ ನೀಡಿತು.

Kannada Bar & Bench
kannada.barandbench.com