ಪೋಕ್ಸೊ ಸಂತ್ರಸ್ತ ಬಾಲಕಿಗೆ 150 ಪ್ರಶ್ನೆ: ವಕೀಲರು ಮಾನವೀಯತೆಯಿಂದ ವರ್ತಿಸುವಂತೆ ಬುದ್ಧಿವಾದ ಹೇಳಿದ ಸುಪ್ರೀಂ ಕೋರ್ಟ್‌

ಅಪ್ರಾಪ್ತ ವಯಸ್ಕ ಸಂತ್ರಸ್ತೆಗೆ ಪಾಟಿ ಸವಾಲಿನ ವೇಳೆ ಸುಮಾರು 150 ಪ್ರಶ್ನೆಗಳನ್ನು ಕೇಳಲಾಗಿದೆ ಎಂಬುದನ್ನು ಗಮನಿಸಿದ ಪೀಠ, ಅಂತಹ ಸಂದರ್ಭಗಳಲ್ಲಿ ವಕೀಲರು ವಿವೇಚನೆ ಹಾಗೂ ಮಾನವೀಯತೆಯಿಂದ ನಡೆದುಕೊಳ್ಳಬೇಕು ಎಂದಿದೆ.
Supreme Court, POCSO ACT
Supreme Court, POCSO ACT
Published on

ನಾಲ್ಕು ವರ್ಷ ವಯೋಮಾನದ ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಬಾಲಕಿಯನ್ನು ಪ್ರತಿವಾದಿ ಪರ ವಕೀಲರು ವಿಚಾರಣಾ ನ್ಯಾಯಾಲಯದಲ್ಲಿ ಪಾಟಿ ಸವಾಲಿಗೆ ಒಳಪಡಿಸಿದ ರೀತಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಅಪ್ರಾಪ್ತ ವಯಸ್ಕ ಸಂತ್ರಸ್ತೆಗೆ ಪಾಟಿ ಸವಾಲಿನ ವೇಳೆ ಸುಮಾರು 150 ಪ್ರಶ್ನೆಗಳನ್ನು ಕೇಳಲಾಗಿದೆ ಎಂಬುದನ್ನು ಗಮನಿಸಿದ, ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ಪೀಠ  ಅಂತಹ ಸಂದರ್ಭಗಳಲ್ಲಿ ವಕೀಲರು ವಿವೇಚನೆ ಹಾಗೂ ಮಾನವೀಯತೆಯಿಂದ ನಡೆದುಕೊಳ್ಳಬೇಕು ಎಂದಿದೆ.

Also Read
[ಪೋಕ್ಸೊ ಪ್ರಕರಣ] ಸುಪ್ರೀಂ ಕೋರ್ಟ್‌ ಆದೇಶದ ಅನುಪಾಲನೆ: ಚಿತ್ರದುರ್ಗ ಜೈಲಿನಿಂದ ಬಿಡುಗಡೆಯಾದ ಮುರುಘಾ ಶರಣರು

ವಕೀಲ ವರ್ಗದ ಸದಸ್ಯರು ತಮ್ಮೊಳಗೆ ಸ್ವಲ್ಪವಾದರೂ ಮಾನವೀಯತೆ ಇರಿಸಿಕೊಂಡಿರಬೇಕು. ನಾಲ್ಕು ವರ್ಷದ ಪುಟ್ಟ ಹುಡುಗಿಗೆ ಪಾಟಿ ಸವಾಲಿನ ವೇಳೆ 150 ಪ್ರಶ್ನೆಗಳನ್ನು ಕೇಳಲಾಗಿದೆ. ಅವುಗಳಲ್ಲಿ ಶೇ 80ರಿಂದ 90ರಷ್ಟು ಅಪ್ರಸ್ತುತ ಪ್ರಶ್ನೆಗಳಾಗಿವೆ. ವಿಚಾರಣಾರ್ಹತೆಗೆ ಸಂಬಂಧಿಸಿದಂತೆ ನೀವು ಉತ್ತಮ ವಾದ ಹೊಂದಿರಬಹುದಾದರೂ ಸ್ವಲ್ಪವಾದರೂ ಮಾನವೀಯತೆ ತೋರಬೇಕು ಎಂದು ನ್ಯಾ. ಓಕಾ ಅವರು ಪ್ರತಿವಾದಿ ವಕೀಲರನ್ನುದ್ದೇಶಿಸಿ ಅಸಮಾಧಾನ ವ್ಯಕ್ತಪಡಿಸಿದರು.

ನಾಲ್ಕು ವರ್ಷದ ವಿದ್ಯಾರ್ಥಿನಿ ಮೇಲೆ 2021ರ ಆಗಸ್ಟ್‌ನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿ ಶಿಕ್ಷಕನಿಗೆ ವಿಧಿಸಿದ್ದ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್‌ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಆತ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದ.

Also Read
ಪೋಕ್ಸೊ ಪ್ರಕರಣದಲ್ಲಿ ಬಿಎಸ್‌ವೈ ಜೈಲಿಗೆ ಹೇಳಿಕೆ: ಹೈಕೋರ್ಟ್‌ನಲ್ಲಿ ಹಿರಿಯ ವಕೀಲ ನಾಗೇಶ್‌ ಗಂಭೀರ ಆಕ್ಷೇಪ

ವಿಚಾರಣೆ ವೇಳೆ ಶಿಕ್ಷಕನ ಮೇಲ್ಮನವಿಗೆ ಸಂಬಂಧಿಸಿದಂತೆ ನೋಟಿಸ್‌ ನೀಡಿದ ನ್ಯಾಯಾಲಯ ಅಂತಹ ಪ್ರಕರಣಗಳಲ್ಲಿ ಪಾಟಿ ಸವಾಲು ನಡೆಸುವಾಗ ವಕೀಲರು ಮಾನವೀಯತೆಯಿಂದ ನಡೆದುಕೊಳ್ಳಬೇಕು ಎಂದಿತು.

ಆರೋಪಿ ಪರ ವಕೀಲರಾದ ನಿತಿನ್ ಸಲೂಜಾ, ನಿಶ್ಚಲ್ ತ್ರಿಪಾಠಿ, ಅನಿರ್ಬನ್ ಚಂದ್ರ, ಶಶಾಂಕ್ ಉಪಾಧ್ಯಾಯ ವಾದ ಮಂಡಿಸಿದ್ದರು.

Kannada Bar & Bench
kannada.barandbench.com