ವಿಡಿಯೋಕಾನ್ ಸಾಲದ ಪ್ರಕರಣದಲ್ಲಿ ಐಸಿಐಸಿಐ ಬ್ಯಾಂಕ್ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದಾ ಕೊಚ್ಚಾರ್, ಅವರ ಪತಿ ದೀಪಕ್ ಕೊಚ್ಚಾರ್ ಹಾಗೂ ವಿಡಿಯೋಕಾನ್ ಸಮೂಹ ಸಂಸ್ಥೆಗಳ ಅಧ್ಯಕ್ಷ ವೇಣುಗೋಪಾಲ್ ಧೂತ್ ಅವರನ್ನು ಜನವರಿ 10, 2023ರವರೆಗೆ ಮುಂಬೈ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 23ರಂದು ಬಂಧಿತರಾಗಿದ್ದ ಈ ಮೂವರ ಸಿಬಿಐ ಕಸ್ಟಡಿ ಅವಧಿ ಇಂದಿಗೆ ಮುಕ್ತಾಯಗೊಳ್ಳುತ್ತಿತ್ತು. ವಿಚಾರಣೆಗಾಗಿ ತಾನು ಈ ಮೂವರೂ ಆರೋಪಿಗಳನ್ನು ಮತ್ತೆ ಕಸ್ಟಡಿಗೆ ಕೋರುವುದಿಲ್ಲ. ಬದಲಿಗೆ ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸುವಂತೆ ವಿಶೇಷ ನ್ಯಾಯಾಧೀಶ ಎ ಎ ಸಯದ್ ಅವರಿಗೆ ಸಿಬಿಐ ಗುರುವಾರ ತಿಳಿಸಿತು. ಬಳಿಕ ನ್ಯಾಯಾಧೀಶರು ಜನವರಿ 10ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ನವದೆಹಲಿಯಲ್ಲಿ ಬಂಧಿತರಾಗಿದ್ದ ಕೊಚ್ಚಾರ್ ದಂಪತಿಯನ್ನು ಡಿಸೆಂಬರ್ 24ರಂದು ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯದೆದುರು ಹಾಜರುಪಡಿಸಲಾಗಿತ್ತು. ಆರೋಪಿಗಳಿಗೆ ನ್ಯಾಯಾಲಯ ಇಂದಿನವರೆಗೆ ಸಿಬಿಐ ಕಸ್ಟಡಿ ವಿಧಿಸಿತ್ತು. ಈ ನಡುವೆ ಡಿಸೆಂಬರ್ 26ರಂದು ಧೂತ್ ಅವರ ಬಂಧನವಾಗಿತ್ತು.
ಅನುತ್ಪಾದಕ ಆಸ್ತಿಯಾಗಿ ಬದಲಾಗಿದ್ದ ವಿಡಿಯೋಕಾನ್ ಸಮೂಹಕ್ಕೆ 2012ರಲ್ಲಿ ₹3,250 ಕೋಟಿ ಸಾಲ ನೀಡಿದ ಆರೋಪವನ್ನು ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಎದುರಿಸುತ್ತಿದ್ದಾರೆ. ಸಾಲ ಪಡೆದಿದ್ದ ಧೂತ್ ಅವರನ್ನು ಕೂಡ ಇದೇ ವೇಳೆ ಬಂಧಿಸಲಾಗಿತ್ತು.