ಭಾರಿ ಮಳೆಯಿಂದಾಗಿ 2020ರಲ್ಲಿ ಸೋಯಾಬೀನ್ ಬೆಳೆನಷ್ಟ ಅನುಭವಿಸಿದ ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ 3.5 ಲಕ್ಷಕ್ಕೂ ಹೆಚ್ಚು ರೈತರಿಗೆ ಪರಿಹಾರ ನೀಡುವಂತೆ ಬಜಾಜ್ ಅಲಯನ್ಸ್ ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್‌ಗೆ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠ ಇತ್ತೀಚೆಗೆ ಆದೇಶಿಸಿದೆ [ಪ್ರಶಾಂತ್ ಲೋಮೇಟ್ ಇನ್ನಿತರರು ಮತ್ತು ಭಾರತ ಒಕ್ಕೂಟ ಮತ್ತಿತರರು ಹಾಗೂ ಸಂಬಂಧಿತ ಅರ್ಜಿದಾರರ ನಡುವಣ ಪ್ರಕರಣ].
ವಿಮಾ ಕಂಪೆನಿ 6 ವಾರಗಳಲ್ಲಿ ಪರಿಹಾರ ಒದಗಿಸಬೇಕು. ವಿಫಲವಾದರೆ ಸರ್ಕಾರವೇ ಇನ್ನು ಆರು ವಾರಗಳಲ್ಲಿ ಅದನ್ನು ಪಾವತಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಆರ್ ಡಿ ಧನುಕಾ ಮತ್ತು ಎಸ್ ಜಿ ಮೆಹರೆ ಅವರಿದ್ದ ಪೀಠ ಆದೇಶಿಸಿತು.
ಮಹಾರಾಷ್ಟ್ರ ಸರ್ಕಾರ 2021ರ ಮಾರ್ಚ್‌ನಲ್ಲಿ ನೀಡಿದ್ದ ನಿರ್ದೇಶನಗಳನ್ನು ಪಾಲಿಸಬೇಕು. ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳು ಸಿದ್ಧಪಡಿಸಿದ ನಷ್ಟದ ವರದಿ ಆಧರಿಸಿ ಕೃಷಿಕರಿಗೆ ಪರಿಹಾರ ಒದಗಿಸಬೇಕು ಎಂದು ವಿಮಾ ಕಂಪೆನಿಗೆ ನ್ಯಾಯಾಲಯ ಸೂಚಿಸಿದೆ.
ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಪರಿಹಾರ ಒದಗಿಸದೇ ಇರುವುದನ್ನು ಪ್ರಶ್ನಿಸಿ ರೈತರು ನ್ಯಾಯಾಲಯದ ಮೊರೆ ಹೋಗಿದ್ದರು. ವಿಮಾ ರಕ್ಷಣೆಗಾಗಿ ವಿಮಾ ಕಂತು ಪಾವತಿಸಿದ್ದೇವೆ. ಪ್ರೀಮಿಯಂನ ಒಂದು ಭಾಗವನ್ನು ಕೃಷಿಕರ ಪರವಾಗಿ ರಾಜ್ಯ ಸರ್ಕಾರ ಕೂಡ ಪಾವತಿಸಿದೆ. ಪರಿಹಾರ ದೊರಕಿಸಿಕೊಡುವಂತೆ ವಿಮಾ ಕಂಪೆನಿಗೆ ನಿರ್ದೇಶನ ನೀಡಬೇಕು. ಒಟ್ಟು 3,57,287 ಕೃಷಿಕರಿಗೆ ಪರಿಹಾರ ನೀಡಲು ಕಂಪೆನಿ ನಿರಾಕರಿಸಿದರೆ ಆ ಹೊಣೆಯನ್ನು ಸರ್ಕಾರವೇ ಹೊರುವಂತೆ ಸೂಚಿಸಬೇಕು ಎಂದು ಕೋರಿದ್ದರು.
ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ ಎಲ್ಲಾ ಎಂಟು ತಾಲೂಕುಗಳಲ್ಲಿ ಸುಮಾರು 4,57,216 ಕೃಷಿಕರು ಬೆಳೆ ಹಾನಿಯಿಂದ ತೊಂದರೆಗೊಳಗಾಗಿದ್ದಾರೆ. ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿಯಲ್ಲಿ ವಿಮಾ ಕಂಪನಿ ರೈತರಿಂದ ₹ 500 ಕೋಟಿಗೂ ಹೆಚ್ಚು ಪ್ರೀಮಿಯಂ ಪಡೆದಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
ಆದರೆ ಕಂಪೆನಿಯ “ಒಟ್ಟು 72,325 ಕೃಷಿಕರಿಗೆ ₹ 87.87 ಕೋಟಿ ಪರಿಹಾರ ಮೊತ್ತ ಪಾವತಿಸಲಾಗಿದೆ. ಬೆಳೆನಷ್ಟದ ದಿನದಿಂದ 72 ಗಂಟೆಗಳ ಒಳಗೆ ಕೃಷಿಕರು ಯಾವುದೇ ಸೂಚನೆ ಅಥವಾ ದೂರು ನೀಡಿಲ್ಲ ಎಂಬ ಕಾರಣಕ್ಕೆ ಬಹಳಷ್ಟು ರೈತರಿಗೆ ಪರಿಹಾರ ಒದಗಿಸಲಾಗಿಲ್ಲ. ಪಿಎಂಎಫ್‌ಬಿವೈ ವ್ಯಾಪ್ತಿ ಮೀರಿ ಪರಿಹಾರ ಕೋರಲಾಗಿದೆ” ಎಂಬ ವಿಮಾ ಕಂಪೆನಿಯ ವಾದದಲ್ಲಿ ಹುರುಳಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
“ವಿಮಾ ಕಂಪನಿ ಕಾನೂನುಬಾಹಿರವಾಗಿ ಮತ್ತು ನಿರಂಕುಶವಾಗಿ ವರ್ತಿಸಿದೆ. ರಾಜ್ಯ ಸರ್ಕಾರ ನೀಡಿದ ನಿರ್ದೇಶನಗಳ ಅನುಸಾರವಾಗಿ ಯಾವುದೇ ಪರ್ಯಾಯ ಪರಿಹಾರ ಪಡೆಯದ ಬಹಳಷ್ಟು ಕೃಷಿಕರಿಗೆ ಕಂಪೆನಿ ಹಣ ಪಾವತಿಸಿದೆ. ಈ ಸ್ಥಿತಿಯಲ್ಲಿ ಪರ್ಯಾಯ ಪರಿಹಾರ ಎಂಬುದು ಉತ್ತಮ ಪರ್ಯಾಯ ಪರಿಹಾರವಾಗದು” ಎಂದಿದೆ ಆದೇಶ.