ಮಾನವ ಹಕ್ಕು ಉಲ್ಲಂಘನೆ: ಪರಿಹಾರ ನೀಡದ ಮಹಾರಾಷ್ಟ್ರ ಸರ್ಕಾರಕ್ಕೆ ₹3.60 ಕೋಟಿ ಠೇವಣಿ ಇಡಲು ಬಾಂಬೆ ಹೈಕೋರ್ಟ್‌ ಸೂಚನೆ

2013ರಿಂದ 2025ರ ಅವಧಿಯಲ್ಲಿ ಮಹಾರಾಷ್ಟ್ರ ರಾಜ್ಯ ಮಾನವ ಹಕ್ಕುಗಳ ಆಯೋಗ ಒಟ್ಟು 180 ಶಿಫಾರಸುಗಳನ್ನು ನೀಡಿದ್ದು, ಅವುಗಳಲ್ಲಿ ಕೇವಲ 44 (ಶೇ.24) ಶಿಫಾರಸುಗಳನ್ನು ಮಾತ್ರ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದೆ ಎಂದು ದೂರಿದೆ ಅರ್ಜಿ.
Bombay High Court
Bombay High Court
Published on

ಮಹಾರಾಷ್ಟ್ರ ರಾಜ್ಯ ಮಾನವ ಹಕ್ಕುಗಳ ಆಯೋಗ ನೀಡಿದ ಪರಿಹಾರ ಶಿಫಾರಸುಗಳನ್ನು ಪಾಲಿಸಲು ವಿಳಂಬವಾದ ಹಿನ್ನೆಲೆಯಲ್ಲಿ, ಮಹಾರಾಷ್ಟ್ರ ಸರ್ಕಾರ ಎರಡು ವಾರಗಳೊಳಗೆ ನ್ಯಾಯಾಲಯಕ್ಕೆ ₹3.60 ಕೋಟಿ ಠೇವಣಿ ಇಡುವಂತೆ ಬಾಂಬೆ ಹೈಕೋರ್ಟ್ ನಿರ್ದೇಶಿಸಿದೆ [ಸತ್ಯಂ ಅತುಲ್ ಸುರಾನಾ ಮತ್ತು ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕೆಂದು ಕೋರಿ ವಕೀಲ ಸತ್ಯಂ ಅತುಲ್ ಸುರಾನಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಹಾಗೂ ನ್ಯಾಯಮೂರ್ತಿ ಗೌತಮ್ ಎ. ಅಂಖಾಡ್ ಅವರನ್ನೊಳಗೊಂಡ ಪೀಠ  ಜನವರಿ 27ರಂದು ಈ ಆದೇಶ ಹೊರಡಿಸಿದೆ.

Also Read
ಮಕ್ಕಳ ಭಿಕ್ಷಾಟನೆ: ತಡೆ ಹಾಗೂ ಪುನರ್ವಸತಿಗೆ ಸಮಗ್ರ ಕ್ರಿಯಾ ಯೋಜನೆ, ನೋಡಲ್ ಅಧಿಕಾರಿ ನೇಮಿಸಲು ಹೈಕೋರ್ಟ್‌ ನಿರ್ದೇಶನ

ಮಹಾರಾಷ್ಟ್ರ ರಾಜ್ಯ ಮಾನವ ಹಕ್ಕುಗಳ ಆಯೋಗ (ಎಂಎಸ್‌ಎಚ್‌ಆರ್‌ಸಿ) ನೀಡಿದ ಶಿಫಾರಸುಗಳನ್ನು ಪಾಲಿಸುವಲ್ಲಿ ರಾಜ್ಯ ಸರ್ಕಾರವು ಉದ್ದೇಶಪೂರ್ವಕವಾಗಿ ತಡಮಾಡುತ್ತಿರುವುದು ಮತ್ತು ನಿರ್ಲಕ್ಷ್ಯ ವಹಿಸುತ್ತಿರುವುದರಿಂದ, ಮಾನವ ಹಕ್ಕುಗಳ ಉಲ್ಲಂಘನೆಗೆ ಒಳಗಾದ ಅನೇಕ ಬಾಧಿತರಿಗೆ ಭಾರೀ ತೊಂದರೆ ಉಂಟಾಗುತ್ತಿದೆ ಎಂದು ಸುರಾನಾ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ದೂರಲಾಗಿತ್ತು.

2013ರಿಂದ 2025ರ ಅವಧಿಯಲ್ಲಿ ಮಹಾರಾಷ್ಟ್ರ ರಾಜ್ಯ ಮಾನವ ಹಕ್ಕುಗಳ ಆಯೋಗ ಒಟ್ಟು 180 ಶಿಫಾರಸುಗಳನ್ನು ನೀಡಿದ್ದು, ಅವುಗಳಲ್ಲಿ ಕೇವಲ 44 (ಶೇ 24) ಶಿಫಾರಸುಗಳನ್ನು ಮಾತ್ರ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದೆ. ಉಳಿದ 136 ಶಿಫಾರಸುಗಳು (ಶೇಕಡಾ 76) ಇನ್ನೂ ಬಾಕಿಯೇ ಉಳಿದಿದ್ದು, ಅವುಗಳಿಗೆ ಸಂಬಂಧಿಸಿದ ಒಟ್ಟು ಪರಿಹಾರ ಮೊತ್ತ ₹3,39,24,000ರಷ್ಟಿದೆ. ಇದೊಂದು ಆಡಳಿತಾತ್ಮಕ ನಿರ್ಲಕ್ಷ್ಯ ಎಂದು ಅವರು ಹೇಳಿದ್ದರು.

Also Read
ಫೆಮಾ ಪ್ರಕರಣ: ಕೆಫೆ ಕಾಫಿ ಡೇ ವಿರುದ್ಧದ ವಿಚಾರಣೆ ಮುಂದೂಡಲು ಇ ಡಿಗೆ ನಿರ್ದೇಶಿಸಿದ ಹೈಕೋರ್ಟ್‌

ಕೆಲವು ಪ್ರಕರಣಗಳಲ್ಲಿ ಶಿಫಾರಸುಗಳನ್ನು ಪಾಲಿಸಲಾಗಿದೆ ಎಂದು ಸರ್ಕಾರ ವಿಚಾರಣೆ ವೇಳೆ ತಿಳಿಸಿತು. 15 ಪ್ರಕರಣಗಳ ಉಲ್ಲೇಖವುಳ್ಳ ಜನವರಿ 23ರ ಗೃಹ ಇಲಾಖೆ ಪತ್ರವನ್ನು ಅದು ಸಲ್ಲಿಸಿತು. ಆದರೆ, ಆಯೋಗದ ನಿರ್ದೇಶನಗಳನ್ನು ಪಾಲಿಸದಿರುವ ಪ್ರಕರಣಗಳ ನಿಖರ ಸಂಖ್ಯೆಯನ್ನು ನೀಡಲು ಸಾಧ್ಯವಾಗಲಿಲ್ಲ.

ರಾಜ್ಯ ಸರ್ಕಾರ ಸಂಪೂರ್ಣ ವಿವರ ಸಲ್ಲಿಸದ ಹಿನ್ನೆಲೆಯಲ್ಲಿ ಮುಂದಿನ ಎರಡು ವಾರಗಳೊಳಗೆ ₹3.60 ಕೋಟಿ ಹೈಕೋರ್ಟ್‌ಗೆ ಠೇವಣಿ ಇಡುವಂತೆ ಮತ್ತು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಈ ಕುರಿತು ನಿರ್ದೇಶನ ನೀಡುವಂತೆ ಪೀಠ ಸೂಚಿಸಿತು. ಠೇವಣಿಗೂ ಮುನ್ನ ಮುಖ್ಯ ಕಾರ್ಯದರ್ಶಿಯವರು ನೋಡಲ್ ಅಧಿಕಾರಿಯನ್ನು ನೇಮಕಮಾಡಿ, ಆಯೋಗದಿಂದ ಪರಿಹಾರ ಆದೇಶ ಪಡೆದ ಎಲ್ಲಾ ಬಾಧಿತರು ಅಥವಾ ಅವರ ಕಾನೂನು ವಾರಸುದಾರರಿಗೆ 10 ದಿನಗಳೊಳಗೆ ನೋಟಿಸ್ ತಲುಪುವಂತೆ ನೋಡಿಕೊಳ್ಳಬೇಕು ಎಂದು ಹೈಕೋರ್ಟ್‌ ಸೂಚಿಸಿದೆ. 

Kannada Bar & Bench
kannada.barandbench.com