
ಅದಾನಿ ಎಂಟರ್‌ಪ್ರೈಸಸ್ ಭಾಗಿಯಾಗಿದೆ ಎನ್ನಲಾದ ₹388 ಕೋಟಿ ಮೊತ್ತದ ಗಂಭೀರ ವಂಚನೆ ತನಿಖಾ ಕಚೇರಿ (ಎಸ್‌ಎಫ್‌ಐಒ) ಪ್ರಕರಣದಿಂದ ಉದ್ಯಮಿಗಳಾದ ಗೌತಮ್ ಅದಾನಿ ಮತ್ತು ರಾಜೇಶ್ ಅದಾನಿ ಅವರನ್ನು ಬಾಂಬೆ ಹೈಕೋರ್ಟ್ ಸೋಮವಾರ ಖುಲಾಸೆಗೊಳಿಸಿದೆ.
ಮಾರುಕಟ್ಟೆ ನಿಯಮಾವಳಿ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಕಂಪೆನಿಯನ್ನು ಮತ್ತು ಅದಾನಿದ್ವಯರನ್ನು ಖುಲಾಸೆಗೊಳಿಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತೀರ್ಪು ನೀಡಿತ್ತು. ಇದನ್ನು ರದ್ದುಗೊಳಿಸಿದ್ದ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ನ್ಯಾಯಮೂರ್ತಿ ಆರ್ ಎನ್ ಲಡ್ಡಾ ಅವರಿದ್ದ ಹೈಕೋರ್ಟ್ ಪೀಠ ರದ್ದುಗೊಳಿಸಿತು.
ಅದಾನಿದ್ವಯರ ಪರವಾಗಿ ಹಿರಿಯ ವಕೀಲರಾದ ಅಮಿತ್ ದೇಸಾಯಿ ಮತ್ತು ವಿಕ್ರಮ್ ನಂಕಾನಿ ವಾದ ಮಂಡಿಸಿದರು. ಅವರಿಗೆ ವಕೀಲರಾದ ಈಶ್ವರ್ ನಂಕಣಿ, ಪೃಥ್ವಿರಾಜ್ ಚೌಧರಿ, ಗೋಪಾಲಕೃಷ್ಣ ಶೆಣೈ, ರಿಯಾ ಸಿಂಕರ್ ಮತ್ತು ನಂಕಣಿ ಮತ್ತು ಅಸೋಸಿಯೇಟ್ಸ್‌ನ ಪ್ರಜಕ್ತಾ ಸರ್ವಡೇಕರ್ ಅವರು ನೆರವಾದರು.
ಸರ್ಕಾರದ ಪರವಾಗಿ ವಕೀಲೆ ಮನೀಷಾ ಆರ್ ಟಿಡ್ಕೆ ವಾದ ಮಂಡಿಸಿದರು. ಕೇಂದ್ರ ಸರ್ಕಾರವನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಎ ಸಿ ಸಿಂಗ್ ಮತ್ತು ವಕೀಲರಾದ ಡಿ ಪಿ ಸಿಂಗ್, ಆದರ್ಶ್ ವ್ಯಾಸ್, ಪ್ರದೀಪ್ ಯಾದವ್, ದಿವ್ಯಾ ಗೊಂಟಿಯಾ ಮತ್ತು ರುಚಿತಾ ವರ್ಮಾ ಪ್ರತಿನಿಧಿಸಿದ್ದರು.
ಸೆಷನ್ಸ್ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ಪಡೆಯುವಲ್ಲಿ ಯಶಸ್ವಿಯಾದ ಬಳಿಕ ಅದಾನಿ ಎಂಟರ್‌ಪ್ರೈಸಸ್ 2019ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಪ್ರಕರಣದ ವಿಚಾರಣೆಯ ಸಮಯದಲ್ಲಿಯೂ ತಡೆಯಾಜ್ಞೆ ಮುಂದುವರೆದಿತ್ತು.
ಮಾಧ್ಯಮ ವರದಿಗಳ ಪ್ರಕಾರ, ಪ್ರಕರಣ ಸುಮಾರು ₹388 ಕೋಟಿ ಕಾನೂನುಬಾಹಿರ ಲಾಭವನ್ನು ಒಳಗೊಂಡಿತ್ತು.