ಉಪರಾಷ್ಟ್ರಪತಿ, ಕಾನೂನು ಸಚಿವರ ನ್ಯಾಯಾಂಗ ವಿರೋಧಿ ಹೇಳಿಕೆ: ಪಿಐಎಲ್ ವಜಾಗೊಳಿಸಿದ ಬಾಂಬೆ ಹೈಕೋರ್ಟ್

ಸಾಂವಿಧಾನಿಕ ಹುದ್ದೆಗಳಲ್ಲಿರುವವರಿಂದ ಪ್ರಮಾಣವಚನದ ಉಲ್ಲಂಘನೆಯಾಗಿದೆ. ಇತರರೂ ಅದೇ ಮಾದರಿ ಅನುಸರಿಸಬಹುದು ಎಂದು ಆರೋಪಿಸಿ ಉಪರಾಷ್ಟ್ರಪತಿ ಹಾಗೂ ಕಾನೂನು ಸಚಿವರನ್ನು ವಜಾಗೊಳಿಸಲು ಕೋರಿದ್ದ ಅರ್ಜಿ.
Vice President Jagdeep Dhankhar and Law Minister Kiren Rijiju with Bombay High Court
Vice President Jagdeep Dhankhar and Law Minister Kiren Rijiju with Bombay High Court

ಕೊಲಿಜಿಯಂ, ನ್ಯಾಯಾಂಗ ಹಾಗೂ ಸುಪ್ರೀಂ ಕೋರ್ಟ್‌ ವಿರುದ್ಧ ಸಾರ್ವಜನಿಕ ಹೇಳಿಕೆ ನೀಡಿದ್ದ ಉಪರಾಷ್ಟ್ರಪತಿ ಜಗದೀಪ್ ಧನಕರ್‌ ಹಾಗೂ ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಬಾಂಬೆ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.

ಅರ್ಜಿಯನ್ನು ಪರಿಗಣಿಸುವ ಇಚ್ಛೆಯನ್ನು ನಾವು ಹೊಂದಿಲ್ಲ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್‌ ವಿ ಗಂಗಾಪುರವಾಲಾ ಮತ್ತು ನ್ಯಾಯಮೂರ್ತಿ ಸಂದೀಪ್ ಮಾರ್ನೆ ಅವರಿದ್ದ ವಿಭಾಗೀಯ ಪೀಠ ಹೇಳಿತು.

"ಪಿಐಎಲ್ ಪುರಸ್ಕರಿಸುವ ಒಲವು ನಮಗಿಲ್ಲ. ಅದನ್ನು ವಜಾಗೊಳಿಸಲಾಗಿದೆ" ಎಂದು ನ್ಯಾಯಾಲಯ ತಿಳಿಸಿತು. ಉಪರಾಷ್ಟ್ರಪತಿ ಅವರನ್ನು ಯಾವ ವಿಧಿಯಡಿ ಅನರ್ಹಗೊಳಿಸಬಹುದು ಎಂಬುದನ್ನು ವಿವರಿಸುವಂತೆ ಅರ್ಜಿ ಸಲ್ಲಿಸಿದ್ದ ವಕೀಲ ಅಹ್ಮದ್ ಅಬ್ದಿ ಅವರನ್ನು ನ್ಯಾಯಾಲಯ ಪ್ರಶ್ನಿಸಿತು.

ಆಗ ಅಬ್ದಿ ಅವರು “ಶಾಸಕಾಂಗ ತೆಗೆದುಕೊಳ್ಳಬಹುದಾದ ಕ್ರಮಗಳಿವೆ" ಎಂದು ಹೇಳಿದರು.”ನಿಬಂಧನೆಗಳು ಯಾವುವು? ಹಂತಗಳೇನು?” ಎಂದು ನ್ಯಾಯಾಲಯ ಪ್ರಶ್ನಿಸಿದಾಗ ಅಬ್ದಿ “ಸಾಂವಿಧಾನಿಕ ಹುದ್ದೆಗಳಲ್ಲಿರುವವರಿಂದ ಪ್ರಮಾಣವಚನದ ಉಲ್ಲಂಘನೆಯಾಗಿದೆ. ಇತರರೂ ಅದೇ ಮಾದರಿ ಅನುಸರಿಸಬಹುದು. ಇದೇನೂ ಯಾರಿಗೂ ಕಾಣದಂತೆ ಘಟಿಸಿರುವುದಲ್ಲ, ಹಾಡುಹಗಲೇ ಘಟಿಸಿದೆ” ಎಂದು ವಾದಿಸಿದರು. ಆದರೆ ಪೀಠ ಈ ಉತ್ತರದಿಂದ ತೃಪ್ತಗೊಳ್ಳದೆ ಮನವಿ ತಿರಸ್ಕರಿಸಿತು.

Also Read
ನ್ಯಾಯಾಂಗ ವಿರೋಧಿ ಹೇಳಿಕೆ: ಉಪರಾಷ್ಟ್ರಪತಿ, ಕಾನೂನು ಸಚಿವರ ವಿರುದ್ಧ ಬಾಂಬೆ ಹೈಕೋರ್ಟ್‌ಗೆ ಪಿಐಎಲ್

ಬಾಂಬೆ ವಕೀಲರ ಸಂಘದ ಅಧ್ಯಕ್ಷರೂ ಆಗಿರುವ ಅಬ್ದಿ ತಮ್ಮ ಅರ್ಜಿಯಲ್ಲಿ ಧನಕರ್‌ ಮತ್ತು ರಿಜಿಜು ಅವರು ನ್ಯಾಯಾಂಗದ ವಿರುದ್ಧವಾಗಿ ನೀಡಿದ ವಿವಿಧ ಹೇಳಿಕೆಗಳನ್ನು ಉಲ್ಲೇಖಿಸುತ್ತಾ ಶಿಕ್ಷೆಯ ಭಯವಿಲ್ಲದೆ ಇವರಿಬ್ಬರೂ ಸಂವಿಧಾನದ ಮೇಲೆ ಆಕ್ರಮಣ ಮಾಡಿದ್ದಾರೆ ಎಂದು ದೂರಿದ್ದರು.

ಇಂದಿನ ವಿಚಾರಣೆ ವೇಳೆ ಅಬ್ದಿ ಅವರು "ನಾವು ಮೌಖಿಕ ಚರ್ಚೆಗೆ ವಿರುದ್ಧವಾಗಿಲ್ಲ, ಆದರೆ ಅದನ್ನು ಸಂಸತ್ತಿನಲ್ಲಿ ನಡೆಸಬೇಕೆ ಅಥವಾ ಬೀದಿಗಳಲ್ಲಿ ನಡೆಸಬೇಕೆ (ಎಂಬ ಪ್ರಶ್ನೆ ಇದೆ). ಬೀದಿಗಳಲ್ಲಿ ನಡೆದಾಗ, ಅದು ಸಂವಿಧಾನವನ್ನು ನೆಲಸಮಗೊಳಿಸುತ್ತದೆ ಮತ್ತು ಸಂವಿಧಾನದಲ್ಲಿ ನಾಗರಿಕರು ಇರಿಸಿರುವ ನಂಬಿಕೆಯ ಮೇಲೆ ಪರಿಣಾಮ ಬೀರುತ್ತದೆ" ಎಂದು ವಾದ ಮಂಡಿಸಿದರು.

“ಸಾಂವಿಧಾನಿಕ ಹುದ್ದೆಯಲ್ಲಿರುವವರು ತಮ್ಮ ನಡವಳಿಕೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು, ಇದು ನಡೆದುಕೊಳ್ಳುವ ರೀತಿಯೇ? ಇದು ಸಾರ್ವಜನಿಕರ ಮೇಲೆ ದೊಡ್ಡ ಪರಿಣಾಮ ಬೀರಿ ಕ್ರಮೇಣ ಅರಾಜಕತೆಗೆ ಕಾರಣವಾಗುತ್ತದೆ. ಸಾಂವಿಧಾನಿಕ ಹುದ್ದೆಗಳಲ್ಲಿರುವವರು ಈ ರೀತಿ ಮಾತನಾಡುತ್ತಿದ್ದಾರೆ" ಎಂದರು.

ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಅವರು,  "ಇದು ಅತ್ಯಂತ ಕ್ಷುಲ್ಲಕ ಪಿಐಎಲ್‌ ಆಗಿದ್ದು ನ್ಯಾಯಾಲಯದ ಸಮಯ ವ್ಯರ್ಥ ಮಾಡುತ್ತಿದೆ. ಇದು ಪ್ರಚಾರದ ಹಿತಾಸಕ್ತಿಯ ಅರ್ಜಿಯಾಗಿದೆ. ಏಕೆಂದರೆ ಪ್ರಕರಣವನ್ನು ಆಲಿಸುವ ಮೊದಲೇ ಅದನ್ನು ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿ ಮಾಡಲಾಗಿದೆ" ಎಂದರು.

"ಮನವಿಯನ್ನೊಮ್ಮೆ ನೋಡಿ. ಇಂತಹ ಪ್ರಾರ್ಥನೆಯನ್ನು ನ್ಯಾಯಾಲಯವು ಹೇಗೆ ಅನುಮತಿಸಬಹುದು? ಇದು ಕುಲ್ಲಕವಾಗಿದೆ ಎಂದು ನಾನು ಹೇಳುತ್ತಿದ್ದು ಇದನ್ನು ವಜಾಗೊಳಿಸುವುದಷ್ಟೇ ಅಲ್ಲದೆ ದಂಡವನ್ನು ಕೂಡ ವಿಧಿಸಬೇಕು" ಎಂದು ಅವರು ನುಡಿದರು. ಸಾಂವಿಧಾನಿಕ ನಿಬಂಧನೆಗಳ ಪ್ರಕಾರ ಮಾತ್ರ ಉಪರಾಷ್ಟ್ರಪತಿ ಮತ್ತು ಸಚಿವರನ್ನು ಪದಚ್ಯುತಿ ಮಾಡಬಹುದು ಎಂದು ಅವರು ವಿವರಿಸಿದರು.

Kannada Bar & Bench
kannada.barandbench.com