
ಮಹಾರಾಷ್ಟ್ರದ ಪ್ರಮುಖ ರಾಜಕೀಯ ಪಕ್ಷ ಶಿವಸೇನೆಯ ಪರಮೋಚ್ಚ ನಾಯಕರಾಗಿದ್ದ ದಿವಂಗತ ಬಾಳಾ ಸಾಹೇಬ್ ಠಾಕ್ರೆ ಅವರ ಸ್ಮಾರಕ ನಿರ್ಮಾಣ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಬಾಂಬೆ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ದಾದರ್‌ನ ಶಿವಾಜಿ ಪಾರ್ಕ್‌ನಲ್ಲಿರುವ ಹಳೆಯ ಮೇಯರ್ ಬಂಗಲೆಯನ್ನು ಸ್ಮಾರಕವನ್ನಾಗಿ ಪರಿವರ್ತಿಸಲು 2017ರಲ್ಲಿ ಮಹಾರಾಷ್ಟ್ರ ಸರ್ಕಾರ ಕೈಗೊಂಡಿದ್ದ ನಿರ್ಧಾರ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಅರ್ಜಿಗಳನ್ನು ಸಲ್ಲಿಸಲಾಗಿತ್ತು.
ಸರ್ಕಾರ ಈ ಉದ್ದೇಶಕ್ಕಾಗಿ ಪಕ್ಕದ ಜಮೀನನ್ನು ಕೂಡ ಮಂಜೂರು ಮಾಡಿದ್ದು, ಅಭಿವೃದ್ಧಿ ಯೋಜನೆಯ ಪ್ರಕಾರ ಇದು 'ಹಸಿರು ವಲಯ'ಕ್ಕೆ ಸೇರಿದೆ ಎಂದು ಪಿಐಎಲ್ ಸಲ್ಲಿಸಿರುವ ಭಗವಾನ್‌ಜಿ ರಿಯಾನಿ ದೂರಿದ್ದರು.
ಸ್ಮಾರಕಕ್ಕಾಗಿ ₹100 ಕೋಟಿ ನಿಗದಿಪಡಿಸುವ ಸರ್ಕಾರದ ನಿರ್ಧಾರವನ್ನು ಕೂಡ ಅವರು ಪಿಐಎಲ್‌ನಲ್ಲಿ ಪ್ರಶ್ನಿಸಿದ್ದರು.
ಬೃಹನ್ಮುಂಬೈ ಮಹಾನಗರ ಪಾಲಿಕೆ ಮತ್ತು ಮುಂಬೈ ಪಾರಂಪರಿಕ ತಾಣಗಳ ರಕ್ಷಣಾ ಸಮಿತಿ ಸ್ಮಾರಕ ನಿರ್ಮಾಣ ನಿರ್ಧಾರವನ್ನು ಸಮರ್ಥಿಸಿಕೊಂಡವು. ಸ್ಮಾರಕಕ್ಕೆ ಭೂಮಿ ಮಂಜೂರು ಮಾಡುವ ಮುನ್ನ ಎಲ್ಲಾ ಅಗತ್ಯ ಅನುಮತಿಗಳನ್ನು ಪಡೆಯಲಾಗಿದ್ದು ಕಾರ್ಯ ವಿಧಾನ ಅನುಸರಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದವು.
ಅಲ್ಲದೆ, 2018ರಲ್ಲಿಯೇ ಈ ಭೂಮಿಯನ್ನು ಹಸಿರು ವಲಯದಿಂದ ವಸತಿ ವಲಯವನ್ನಾಗಿ ಪರಿವರ್ತಿಸಲಾಗಿದೆ. ಆನಂತರವಷ್ಟೇ ಸ್ಮಾರಕ ನಿರ್ಮಾಣಕ್ಕೆ ಅನುಮತಿಯನ್ನು ಕೋರಲಾಗಿದ್ದು, ಅದನ್ನು ನೀಡಲಾಗಿದೆ ಎನ್ನುವ ಮಾಹಿತಿಯನ್ನು ನೀಡಲಾಯಿತು.
ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಸಂದೀಪ್ ಮಾರ್ನೆ ಅವರಿದ್ದ ಪೀಠ ಅರ್ಜಿಗಳನ್ನು ವಜಾಗೊಳಿಸಿತು.