ಅನಿಲ್ ದೇಶಮುಖ್ ಅವರ ಇಡಿ ಕಸ್ಟಡಿ ಅವಧಿ ವಿಸ್ತರಿಸಿದ ಬಾಂಬೆ ಹೈಕೋರ್ಟ್: ಭಾನುವಾರವೂ ನಡೆದ ನ್ಯಾಯಾಲಯ ಕಲಾಪ

ರಜಾಕಾಲೀನ ಪೀಠದ ನ್ಯಾಯಮೂರ್ತಿ ಮಾಧವ್ ಜಾಮ್ದಾರ್ ಅವರು ನಿರ್ದೇಶನಾಲಯದ ಮನವಿ ತಿರಸ್ಕರಿಸಿದ್ದ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಬದಿಗೆ ಸರಿಸಿದರು.
ಅನಿಲ್ ದೇಶಮುಖ್ ಅವರ ಇಡಿ ಕಸ್ಟಡಿ ಅವಧಿ ವಿಸ್ತರಿಸಿದ ಬಾಂಬೆ ಹೈಕೋರ್ಟ್: ಭಾನುವಾರವೂ ನಡೆದ ನ್ಯಾಯಾಲಯ ಕಲಾಪ
Published on

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ಅವರ ಕಸ್ಟಡಿ ಅವಧಿ ವಿಸ್ತರಿಸುವಂತೆ ಜಾರಿ ನಿರ್ದೇಶನಾಲಯ ಮಾಡಿದ್ದ ಮನವಿಯನ್ನು ತಿರಸ್ಕರಿಸಿ ಸೆಷನ್ಸ್‌ ನ್ಯಾಯಾಲಯ ನೀಡಿದ್ದ ಆದೇಶವನ್ನು ಬಾಂಬೆ ಹೈಕೋರ್ಟ್‌ ಬದಿಗೆ ಸರಿಸಿದೆ.

ಭಾನುವಾರವೂ ನಡೆದ ವಿಚಾರಣೆ ವೇಳೆ ರಜಾಕಾಲೀನ ಪೀಠದ ನ್ಯಾಯಮೂರ್ತಿ ಮಾಧವ್‌ ಜಾಮ್ದಾರ್‌ ಅವರಿದ್ದ ಪೀಠ ದೇಶಮುಖ್‌ ಅವರ ಕಸ್ಟಡಿ ಅವಧಿಯನ್ನು ನ. 12ರವರೆಗೆ ವಿಸ್ತರಿಸಿದೆ.

ಕಸ್ಟಡಿ ಅವಧಿ ವಿಸ್ತರಿಸುವಂತೆ ಜಾರಿ ನಿರ್ದೇಶನಾಲಯ ಮಾಡಿದ್ದ ಮನವಿಯನ್ನು ನಿನ್ನೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪಿಆರ್ ಸಿತ್ರೆ ಅವರು ತಿರಸ್ಕರಿಸಿ ದೇಶಮುಖ್‌ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

Also Read
ಅನಿಲ್ ದೇಶಮುಖ್ ಅಕ್ರಮ ಹಣ ವರ್ಗಾವಣೆ ಪ್ರಕರಣ: ಇ ಡಿ ಕಸ್ಟಡಿ ವಿಸ್ತರಣೆಗೆ ಮುಂಬೈ ನ್ಯಾಯಾಲಯ ನಕಾರ

ಆದರೆ ಇದನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ಗೆ 32 ಪುಟಗಳ ಪರಿಷ್ಕರಣಾ ಅರ್ಜಿ ಸಲ್ಲಿಸಿದ ಜಾರಿ ನಿರ್ದೇಶನಾಲಯ ʼದೇಶಮುಖ್‌ ಅವರು ತನಿಖೆಗೆ ಸಹಕರಿಸಲು ನಿರಾಕರಿಸಿದರು. ತನಿಖಾಧಿಕಾರಿ ಕೇಳಿದ ಪ್ರಶ್ನೆಗಳಿಗೆ ಹಾರಿಕೆಯ ಉತ್ತರಗಳನ್ನು ನೀಡುತ್ತಿದ್ದಾರೆʼ ಎಂದಿತು. ವಂಚನೆಯ ಪ್ರಮಾಣ ಮತ್ತು ಅದು ಒಳಗೊಂಡಿರುವ ಸಮಸ್ಯೆಗಳ ಗಂಭೀರತೆ ಪರಿಗಣಿಸಿ 9 ದಿನಗಳ ಇಡಿ ವಶಕ್ಕೆ ಒಪ್ಪಿಸಬೇಕೆಂದು ಅದು ಕೋರಿತು. ಅಕ್ರಮ ಹಣ ವರ್ಗಾವಣೆ ತನಿಖೆಯನ್ನು ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ನಿರೀಕ್ಷಿಸಲಾಗದು. ಕೋಟ್ಯಂತರ ರೂಪಾಯಿಗಳನ್ನು ಒಳಗೊಂಡ ಇಂತಹ ಪ್ರಕರಣದ ತನಿಖೆಗಾಗಿ ದೇಶಮುಖ್‌ ಅವರನ್ನು ಕೇವಲ ಐದು ದಿನಗಳ ಇ ಡಿ ಕಸ್ಟಡಿಗೆ ಒಪ್ಪಿಸಲಾಗಿದೆ. ಅದರಲ್ಲಿ ಎರಡು ದಿನಗಳ ದೀಪಾವಳಿ ರಜೆ ಇದೆ ಎಂಬುದಾಗಿ ತಿಳಿಸಿತು.

ದೇಶಮುಖ್‌ ಪರ ವಾದ ಮಂಡಿಸಿದ ವಕೀಲರಾದ ವಿಕ್ರಮ್‌ ಚೌಧರಿ ಮತ್ತು ಅನಿಕೇತ್‌ ನಿಕಮ್‌ ಅವರು ʼಇ ಡಿ ಮನವಿಯನ್ನು ನಾವು ಆಕ್ಷೇಪಿಸುತ್ತಿದ್ದರೂ ದೇಶಮುಖ್‌ ಅವರು ಸ್ವಪ್ರೇರಣೆಯಿಂದ ಇ ಡಿ ವಿಚಾರಣೆಗೆ ಒಳಪಡಲು ನಿರ್ಧರಿಸಿದ್ದಾರೆʼ ಎಂದರು. ಸುಮಾರು ನಾಲ್ಕು ದಿನಗಳ ಕಾಲ ಕಸ್ಟಡಿ ತನಿಖೆ ಎದುರಿಸುವ ಇಚ್ಛೆ ದೇಶಮುಖ್‌ ಅವರಿಗೆ ಇದೆ ಎಂದರು.

ಪ್ರಸ್ತುತ ಅರ್ಜಿಯ ಸಿಂಧುತ್ವ ಮತ್ತು ಪ್ರಕರಣದ ಅರ್ಹತೆಯ ಬಗ್ಗೆ ಅವರು ತಕರಾರು ತೆಗೆಯಬಹುದಾದರೂ ಸೂಚನೆಗಳ ಮೇರೆಗೆ ಅವರು ಮೇಲಿನ ಹೇಳಿಕೆ ನೀಡುತ್ತಿದ್ದಾರೆ ಎಂದು ವಕೀಲರು ತಿಳಿಸಿದರು.

ಹೇಳಿಕೆಯ ಬೆಳಕಿನಲ್ಲಿ, ದೇಶಮುಖ್ ಅವರು ಆಕ್ಷೇಪಾರ್ಹ ಆದೇಶವನ್ನು ರದ್ದುಗೊಳಿಸಬಹುದು ಮತ್ತು ಒಪ್ಪಿಗೆ ಮೂಲಕ ತಿರಸ್ಕರಿಸಬಹುದಾಗಿದೆ. ಆದ್ದರಿಂದ ಯಾವುದೇ ವಿವರವಾದ ಕಾರಣಗಳನ್ನು ನೀಡಬೇಕಾಗಿಲ್ಲ ಎಂದರು.

ಅದರಂತೆ, ನ್ಯಾಯಮೂರ್ತಿ ಜಾಮ್ದಾರ್ ಅವರು ಸೆಷನ್ಸ್ ಕೋರ್ಟ್ ಆದೇಶವನ್ನು ರದ್ದುಗೊಳಿಸಿ ದೇಶಮುಖ್ ಅವರ ಇಡಿ ಕಸ್ಟಡಿ ಅವಧಿಯನ್ನು ನ. 12ರವರೆಗೆ ವಿಸ್ತರಿಸಿದರು.

Kannada Bar & Bench
kannada.barandbench.com