ಏಳು ವರ್ಷದ ಹೆಣ್ಣುಮಗುವಿಗೆ ಬರೆ ಹಾಕಿ ದೀರ್ಘಕಾಲ ಸೆರೆಯಲ್ಲಿದ್ದ ಮಹಿಳೆಗೆ ಬಾಂಬೆ ಹೈಕೋರ್ಟ್ ಜಾಮೀನು

ಮಹಿಳೆಯ ವಿರುದ್ಧ ಕೊಲೆ ಯತ್ನ, ಕ್ರಿಮಿನಲ್ ಬೆದರಿಕೆ ಮತ್ತು ಪೋಕ್ಸೊ ಕಾಯಿದೆ ಹಾಗೂ ಬಾಲನ್ಯಾಯ ಕಾಯಿದೆಯ ಉಲ್ಲಂಘನೆಯ ಆರೋಪ ಹೊರಿಸಲಾಗಿತ್ತು.
Bombay High Court
Bombay High Court
Published on

ದಿನಸಿ ಸಾಮಾನು ಖರೀದಿಸಲು ನೀಡಲಾದ 50 ರೂಪಾಯಿಯಲ್ಲಿ 10 ರೂಪಾಯಿಯನ್ನು ಚಾಕೊಲೇಟ್‌ ಕೊಳ್ಳಲು ಖರ್ಚು ಮಾಡಿದ ಏಳು ವರ್ಷದ ಮಗುವಿಗೆ ಬರೆ ಹಾಕಿದ ಆರೋಪ ಎದುರಿಸುತ್ತಿದ್ದ ಮಹಿಳೆಗೆ ಬಾಂಬೆ ಹೈಕೋರ್ಟ್ ಇತ್ತೀಚೆಗೆ ಜಾಮೀನು ನೀಡಿದೆ [ವಂದನಾ ಮಹಾದೇವ್ ಕಾಳೆ ಮತ್ತು ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಅರ್ಜಿದಾರರು 4 ವರ್ಷ 6 ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದಾರೆ, ಆದರೆ ವಿಚಾರಣೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಆಕೆಯೊಡನೆ ಆಕೆಯ 7 ವರ್ಷದ ಮಗಳೂ ಸಹ ಜೈಲಿನಲ್ಲಿದ್ದಾಳೆ. ಅರ್ಜಿದಾರರ ಸೆರೆವಾಸದ ಅವಧಿ ಪರಿಗಣಿಸಿ, ಅವರನ್ನು ಮತ್ತಷ್ಟು ದಿನ ಬಂಧಿಸುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ಎಸ್.ಜಿ. ಡಿಗೆ ಅವರಿದ್ದ ಪೀಠ ಹೇಳಿತು

Also Read
ಅವಧಿ ಮೀರಿದ ಆಹಾರ ಉತ್ಪನ್ನ ಮಾರಾಟ: ಸ್ವಯಂಪ್ರೇರಿತ ವಿಚಾರಣೆಗೆ ಮುಂದಾದ ದೆಹಲಿ ಹೈಕೋರ್ಟ್

ಆರೋಪಿ ವಂದನಾ ಕಾಳೆ ಸೆಪ್ಟೆಂಬರ್ 28, 2020ರಂದು ತಾಯಿಯಿಲ್ಲದ ತನ್ನ ಸಂಬಂಧಿಕರ ಏಳು ವರ್ಷದ ಹೆಣ್ಣು ಮಗುವಿಗೆ ಅಡುಗೆಗೆಂದು ಮಾಂಸ ತರಲು 50 ರೂಪಾಯಿ ನೀಡಿದ್ದಳು. ಮಗು ಹಿಂತಿರುಗಿದಾಗ, ಅವಳು ಚಾಕೊಲೇಟ್‌ಗಾಗಿ 10 ರೂಪಾಯಿ ಬಳಸಿರುವುದನ್ನು ಕಂಡು ಕುಪಿತಳಾದ ವಂದನಾ ಮಗುವಿನ ಕೈ ಕಾಲು ಕಟ್ಟಿಹಾಕಿ ಬಾಯಿಗೆ ಬಟ್ಟೆ ತಿರುಕಿ ಮಗುವಿನ ತೊಡೆ ಹಾಗೂ ಖಾಸಗಿ ಅಂಗಾಂಗಳನ್ನು ಬಿಸಿ ಚಮಚದಿಂದ ಬರೆ ಹಾಕಿದ್ದಳು ಎಂದು ಪ್ರಾಸಿಕ್ಯೂಷನ್‌ ಆರೋಪಿಸಿತ್ತು.

ಮಗುವಿಗೆ ತೀವ್ರವಾದ ಗಾಯಗಳಾಗಿ ಅದಕ್ಕೆ ನಡೆಯಲು ಸಾಧ್ಯವಾಗದಿರುವುದನ್ನು ಕಂಡ ನೆರೆಹೊರೆಯುವರು ಈ ವಿಷಯವನ್ನು ಮಗುವಿನ ಪೋಷಣೆಯ ಹೊಣೆ ಹೊತ್ತಿದ್ದ ಚಿಕ್ಕಮ್ಮನಿಗೆ ತಿಳಿಸಿದರು. ಆಕೆ ಪೊಲೀಸರಿಗೆ ದೂರು ನೀಡಿದ್ದರು.

ವಂದನಾ ವಿರುದ್ಧ ಭಾರತೀಯ ದಂಡ ಸಂಹಿತೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ ಮತ್ತು ಬಾಲ ನ್ಯಾಯ ಕಾಯಿದೆಯಡಿ ಪೊಲೀಸರು ದೂರು ದಾಖಲಿಸಿದ್ದರು. ನೇರ ಪ್ರತ್ಯಕ್ಷದರ್ಶಿಗಳು ಇಲ್ಲದ ಕಾರಣ, ಆರೋಪಗಳು ಮೇಲ್ನೋಟಕ್ಕೆ ಸಾಂದರ್ಭಿಕ ಸಾಕ್ಷ್ಯಗಳನ್ನು ಆಧರಿಸಿವೆ ಎಂದು ತನಿಖೆಯಿಂದ ತಿಳಿದುಬಂದಿತ್ತು.

ವಂದನಾರನ್ನು ಅಕ್ಟೋಬರ್ 2020ರಲ್ಲಿ ಬಂಧಿಸಲಾಗಿತ್ತು. ಮುಂಬೈನ ಪೋಕ್ಸೊ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದ ಹಿನ್ನೆಲೆಯಲ್ಲಿ ಆಕೆ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ವಂದನಾ ಪರ ವಾದ ಮಂಡಿಸಿದ ವಕೀಲರು ಆಕೆ ಮೂರು ವರ್ಷಗಳಿಗೂ ಹೆಚ್ಚು ಕಾಲ ಬಂಧನದಲ್ಲಿದ್ದು, ವಿಚಾರಣೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂದು ಒತ್ತಿ ಹೇಳಿದರು. ಇದಲ್ಲದೆ, ಜೈಲಿನಲ್ಲಿರುವ ಅವರ ಮಗಳು ಸೇರಿದಂತೆ ಆಕೆ ನಾಲ್ಕು ಅಪ್ರಾಪ್ತ ಮಕ್ಕಳಿದ್ದು ಆಕೆಯೇ ಪ್ರಾಥಮಿಕ ಆರೈಕೆದಾರೆಯಾಗಿದ್ದಾರೆ ಎನ್ನುವ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತಂದರು.

Also Read
ಪೋಕ್ಸೊ ಪ್ರಕರಣದ ಸಂತ್ರಸ್ತೆಯ ವ್ಯಾಸಂಗಕ್ಕಾಗಿ ₹1 ಲಕ್ಷ ಮಧ್ಯಂತರ ಪರಿಹಾರ ನೀಡಿದ ಸೋನಿಪತ್ ನ್ಯಾಯಾಲಯ

ಆದರೆ, ಇದನ್ನು ವಿರೋಧಿಸಿದ ಪ್ರಾಸಿಕ್ಯೂಷನ್‌ ವೈದ್ಯಕೀಯ ಪುರಾವೆಗಳು ಆರೋಪಿಯು ಹಿಂಸೆ ಎಸಗಿರುವುದನ್ನು ದೃಢಪಡಿಸುತ್ತವೆ ಮತ್ತು ವಂದನಾ ಸಂತ್ರಸ್ತೆ ಅಥವಾ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಂಭಾವ್ಯ ಅಪಾಯವಿದೆ ಎಂದು ಹೇಳಿ ಜಾಮೀನು ಮನವಿ ವಿರೋಧಿಸಿತು.

ಆದರೆ ವಂದನಾ ಜೈಲು ಶಿಕ್ಷೆ ಪೂರೈಸಿರುವ ಅವಧಿ ಮತ್ತು ಆಕೆ ತಮ್ಮ ಎಳೆಯ ಪ್ರಾಯದ ಮಗಳೊಂದಿಗೆ ಜೈಲಿನಲ್ಲಿರುವ ಅಂಶವನ್ನು ಪರಿಗಣಿಸಿದ ಹೈಕೋರ್ಟ್ ಆಕೆಗೆ ಜಾಮೀನು ಮಂಜೂರು ಮಾಡಿತು. ತನಿಖೆ ಪೂರ್ಣಗೊಂಡಿದ್ದು, ಆರೋಪ ಪಟ್ಟಿ ಸಲ್ಲಿಕೆಯಾಗಿದೆ ಎಂದ ಪೀಠ ವಂದನಾ ಈ ಹಿಂದೆ ಯಾವುದೇ ಕ್ರಿಮಿನಲ್‌ ಕೃತ್ಯ ಎಸಗಿಲ್ಲ ಎಂಬುದನ್ನು ಸಹ ಜಾಮೀನು ನೀಡುವ ವೇಳೆ ಉಲ್ಲೇಖಿಸಿತು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Vandana_Kale_v_State_of_Maharashtra
Preview
Kannada Bar & Bench
kannada.barandbench.com