ವಿವಾಹೇತರ ಸಂಬಂಧದಿಂದ ಜನಿಸಿದ್ದ ಅಪ್ರಾಪ್ತೆಯ ಪಾಲಕತ್ವವನ್ನು ಜೈವಿಕ ಪೋಷಕರಿಗೆ ನೀಡಿದ ಬಾಂಬೆ ಹೈಕೋರ್ಟ್

ತನ್ನ ತಪ್ಪಿಲ್ಲದಿರುವಾಗ ಅಪ್ರಾಪ್ತ ಬಾಲಕಿ ಸಂಕಷ್ಟ ಅನುಭವಿಸುವುದನ್ನು ಒಪ್ಪಲಾಗದು ಎಂದು ತಿಳಿಸಿದ ನ್ಯಾ. ಮನೀಶ್ ಪಿತಾಳೆ ಅವರಿದ್ದ ಪೀಠ.
Bombay High Court
Bombay High Court

ಅಪ್ರಾಪ್ತ ವಯಸ್ಸಿನ ಹೆಣ್ಣಮಗಳೊಬ್ಬಳನ್ನು ವಿವಾಹೇತರ ಸಂಬಂಧದಿಂದ ಜನಿಸಿದ ಮಗು ಎಂದು ಇತ್ತೀಚೆಗೆ ಪರಿಗಣಿಸಿದ ಬಾಂಬೆ ಹೈಕೋರ್ಟ್‌ ಆಕೆಯ ಪಾಲನೆಯ ಹೊಣೆಯನ್ನು ಜೈವಿಕ ಪೋಷಕರಿಗೆ ವಹಿಸಿದೆ [ಸುದೀಪ್‌ ಸುಹಾಸ್‌ ಕುಲಕರ್ಣಿ ಇನ್ನಿತರರು ಮತ್ತು ಅಬ್ಬಾಸ್‌ ಬಹದ್ದೂರ್‌ ಧನಾನಿ ನಡುವಣ ಪ್ರಕರಣ].

ತನ್ನ ತಪ್ಪಿಲ್ಲದಿರುವಾಗ ಅಪ್ರಾಪ್ತ ಬಾಲಕಿ ಸಂಕಷ್ಟ ಅನುಭವಿಸುವುದನ್ನು ಒಪ್ಪಲಾಗದು. ಆದ್ದರಿಂದ ಅಪ್ರಾಪ್ತ ಮಗುವಿನ ಹಿತಾಸಕ್ತಿಯನ್ನು ಪ್ರಮುಖವಾಗಿ ಪರಿಗಣಿಸಿ, ಅರ್ಜಿಯನ್ನು ಪುರಸ್ಕರಿಸಲಾಗುತ್ತಿದೆ ಎಂದು ನ್ಯಾಯಮೂರ್ತಿ ಮನೀಶ್ ಪಿತಾಳೆ ಹೇಳಿದರು. ಅಪ್ರಾಪ್ತ ಮಗುವಿನ ಜೈವಿಕ ಪೋಷಕರು ಮಗುವಿನ ಪಾಲಕತ್ವಕ್ಕೆ ಕೋರಿ ಅರ್ಜಿ ಸಲ್ಲಿಸಿದ್ದರು.

ಅಪ್ರಾಪ್ತ ಬಾಲಕಿಯ ತಾಯಿ ಹಿಂದೂ ಸಮುದಾಯಕ್ಕೆ ಸೇರಿದವರು. 2005ರಲ್ಲಿ ಅವರು ಇಸ್ಲಾಂಗೆ ಮತಾಂತರಗೊಂಡು ಪ್ರಕರಣದ ಪ್ರತಿವಾದಿಯನ್ನು ವರಿಸಿದ್ದರು. ಬಳಿಕ ಅವರಿಗೆ ಮಗು ಜನಿಸಿತ್ತು. ಪರಿಣಾಮ ಹೆಣ್ಣುಮಗುವನ್ನು ಮುಸ್ಲಿಂ ಸಮುದಾಯಕ್ಕೆ ಸೇರಿದವಳು ಎಂದು ಪರಿಗಣಿಸಿ ಜನನ ಪ್ರಮಾಣಪತ್ರದಲ್ಲಿಯೂ ಅದೇ ರೀತಿ ನೋಂದಾಯಿಸಲಾಗಿತ್ತು.  

ಆದರೆ ತಾನು ಮಗುವಿನ ಜೈವಿಕ ತಂದೆ ಅಲ್ಲ ಎಂದು ಪ್ರತಿವಾದಿಗೆ ನಂತರ ತಿಳಿದು ಬಂದಿದ್ದರಿಂದ ಅವರು ತಾಯಿ ಹಾಗೂ ಮಗುವಿನಿಂದ ದೂರು ಉಳಿದಿದ್ದರು. 2005ರಲ್ಲಿ ದಂಪತಿಗೆ ವಿಚ್ಛೇದನ ದೊರೆತಿತ್ತು.

Also Read
ಪತ್ನಿಗೆ ವಿವಾಹೇತರ ಸಂಬಂಧ ಇದ್ದರೂ ಗಂಡನಿಗೆ ಮಕ್ಕಳ ಪಾಲನೆ ಹೊಣೆ ನೀಡಲು ನಿರಾಕರಿಸಿದ ಗುಜರಾತ್ ಹೈಕೋರ್ಟ್ [ಚುಟುಕು]

ಮಗುವಿನ ಪಾಲನೆಯನ್ನು ತಾಯಿಗೆ ವಹಿಸಲಾಗಿತ್ತು. ಪ್ರತಿವಾದಿಯು ಮಗುವಿನ ಪಾಲನೆ ಪೋಷಣೆಯಲ್ಲಿ ಯಾವುದೇ ಆಸಕ್ತಿ ವ್ಯಕ್ತಪಡಿಸಿರಲಿಲ್ಲ. ಆದರೂ, ಅರ್ಜಿದಾರರು ಮತ್ತು ಪ್ರತಿವಾದಿಯ ವಿವಾಹದ ಸಮಯದಲ್ಲಿ ಮಗು ಜನಿಸಿದ ಕಾರಣ, ಶಿಯಾ ಕಾನೂನುಗಳು ಅವಳಿಗೆ ಅನ್ವಯಿಸುತ್ತವೆ. ಆದರೆ ಇಬ್ಬರು ಜೈವಿಕ ಪೋಷಕರಿದ್ದರೂ ಕೂಡ ಶಿಯಾ ಕಾನೂನು ವಿವಾಹೇತರ ಸಂಬಂಧದಿಂದ ಜನಿಸಿದ ಮಕ್ಕಳಿಗೆ ಸ್ಥಾನಮಾನ, ಆಸ್ತಿ ಹಕ್ಕು, ಉತ್ತರಾಧಿಕಾರವನ್ನು ನೀಡುವುದಿಲ್ಲ. ಅವರನ್ನು ಅನಾಥರಿಗೆ ಸರಿಸಮನಾಗಿ ಕಾಣಲಾಗುತ್ತದೆ.

ಈ ಅಂಶಗಳನ್ನು ಪ್ರಶ್ನಿಸಿದ್ದ ಅರ್ಜಿದಾರರ ಪರ ವಕೀಲರು, ಇದು ಅಪ್ರಾಪ್ತ ವಯಸ್ಕರ ಹಕ್ಕುಗಳ ಉಲ್ಲಂಘನೆ. ಅಲ್ಲದೆ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳ ಹಲವು ತೀರ್ಪುಗಳು ವಿವಾಹೇತರ ಸಂಬಂಧದಿಂದ ಜನಿಸಿದ ಅಪ್ರಾಪ್ತರ ಪರವಾಗಿಯೇ ನಿಲ್ಲುತ್ತವೆ. ಇಂತಹ ಸಂದರ್ಭಗಳಲ್ಲಿ ವೈಯಕ್ತಿಕ ಕಾನೂನುಗಳಿಗಿಂತ ಹೆಚ್ಚಿನ ಮಹತ್ವ ಅಪ್ರಾಪ್ತರ ಕ್ಷೇಮಾಭಿವೃದ್ಧಿಗೆ ಸಲ್ಲುತ್ತದೆ ಎಂದು ವಾದಿಸಿದ್ದರು. ಹಾಗಾಗಿ, ಪಾಲಕರು ಮತ್ತು ಪೋಷಿತರ ಕಾಯಿದೆ - 1890ರ ಕಾಯಿದೆಯ ಸೆಕ್ಷನ್‌ 7 ಮತ್ತು ಸೆಕ್ಷನ್ 15ರ ಅಡಿಯ ಅಧಿಕಾರವನ್ನು ನ್ಯಾಯಾಲಯವು ಬಳಸಿ ಅರ್ಜಿದಾರರನ್ನು ಅಪ್ರಾಪ್ತೆಯ ಪಾಲಕರು ಎಂದು ಘೋಷಿಸಲು ಕೋರಿದ್ದರು. ಇದಕ್ಕೆ ಪ್ರತಿವಾದಿಯು ಸಹ ಒಪ್ಪಿಗೆ ನೀಡಿ ತನ್ನ ನಿರಾಕ್ಷೇಪಣಾ ಅಫಿಡವಿಟ್‌ ಸಲ್ಲಿಸಿದ್ದರು.

ಅಂತಿಮವಾಗಿ ನ್ಯಾಯಾಲಯವು, ವೈಯಕ್ತಿಕ ಕಾನೂನಿನ ನಿಬಂಧನೆಗಳು ಮತ್ತು ಪಾಲಕರು ಮತ್ತು ಪೋಷಿತರ ಕಾಯಿದೆಯ ನಿಬಂಧನೆಗಳ ನಡುವೆ ಸಂಘರ್ಷ ಏರ್ಪಟ್ಟಾಗ ಅಪ್ರಾಪ್ತ ಮಗುವಿನ ಹಿತಾಸಕ್ತಿಯನ್ನು ಅತ್ಯಂತ ಪ್ರಮುಖವಾಗಿ ಗಮನದಲ್ಲಿರಿಸಿಕೊಂಡು ವೈಯಕ್ತಿಕ ಕಾನೂನಿನ ನಿಬಂಧನೆಗಳನ್ನು ಮೀರಿ ಪಾಲಕರು ಮತ್ತು ಪೋಷಿತರ ಕಾಯಿದೆಯ ನಿಬಂಧನೆಗಳನ್ನು ನ್ಯಾಯಾಲಯ ಅನುಸರಿಸಬಹುದು ಎಂದು ಹೇಳಿದ್ದ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಪರಿಗಣಿಸಿತು [ಅಥರ್‌ ಹುಸೇನ್‌ ವರ್ಸಸ್‌ ಸೈಯಕ್‌ ಸಿರಾಜ್‌ ಅಹಮದ್‌ ಮತ್ತು ಇತರರು].

ಈ ಹಿನ್ನೆಲೆಯಲ್ಲಿ ಮಹಮ್ಮದೀಯ ಕಾನೂನನ್ನು (ಶಿಯಾ ಕಾನೂನು) ಕಟ್ಟುನಿಟ್ಟಾಗಿ ಜಾರಿಗೆ ತರುವುದರಿಂದ ಅಪ್ರಾಪ್ತ ವಯಸ್ಸಿನ ಮಗುವಿನ ಉತ್ತರಾಧಿಕಾರ ಮತ್ತು ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಂತಾಗುತ್ತದೆ. ಹೀಗಾಗಿ ಅರ್ಜಿಯ ಮನವಿಗಳನ್ನು ಪರಿಗಣಿಸದಿದ್ದರೆ ಅದು ನ್ಯಾಯದ ಅಪಹಾಸ್ಯವಾಗುತ್ತದೆ ಎಂದು ಅದು ಹೇಳಿ ಅಪ್ರಾಪ್ತ ವಯಸ್ಕಳ ಪಾಲಕತ್ವವನ್ನು ಅವಳ ಜೈವಿಕ ಪೋಷಕರಿಗೆ ವಹಿಸಿತು.

Related Stories

No stories found.
Kannada Bar & Bench
kannada.barandbench.com