ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್‌ಗೆ ಬಾಂಬೆ ಹೈಕೋರ್ಟ್ ಸೋಮವಾರ ವೈದ್ಯಕೀಯ ಜಾಮೀನು ಮಂಜೂರು ಮಾಡಿದೆ.
ಈ ಹಿಂದೆ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಲು ಗೋಯಲ್ ಅವರಿಗೆ ಮಧ್ಯಂತರ ವೈದ್ಯಕೀಯ ಜಾಮೀನು ನೀಡಿದ್ದ ನ್ಯಾಯಮೂರ್ತಿ ಎನ್ ಜೆ ಜಾಮದಾರ್ ಅವರಿದ್ದ ಏಕಸದಸ್ಯ ಪೀಠ. ಸೋಮವಾರ ಮಧ್ಯಂತರ ಆದೇಶವನ್ನು ಶಾಶ್ವತಗೊಳಿಸಿತು.
ಗೋಯಲ್ ಅವರ ದೇಹದಲ್ಲಿ ಮಾರಣಾಂತಿಕ ಗಡ್ಡೆಗಳು ಬೆಳೆದಿರುವುದು ವೈದ್ಯಕೀಯ ವರದಿಗಳಲ್ಲಿ ಕಂಡುಬಂದಿದ್ದರಿಂದ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಲು ಗೋಯಲ್ ಅವರಿಗೆ ಎರಡು ತಿಂಗಳ ಅವಧಿಗೆ ಮಧ್ಯಂತರ ವೈದ್ಯಕೀಯ ಜಾಮೀನು ನೀಡಲಾಗಿತ್ತು. ಶಸ್ತ್ರಚಿಕಿತ್ಸೆಗೆಂದು ಹೆಚ್ಚುವರಿ ಒಂದು ತಿಂಗಳ ಕಾಲ ಈ ಜಾಮೀನು ಅವಧಿಯನ್ನು ಬಳಿಕ ವಿಸ್ತರಿಸಲಾಗಿತ್ತು.
ಆರಂಭದಲ್ಲಿ ಜಾಮೀನಿಗಾಗಿ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದ ಅವರಿಗೆ ವೈದ್ಯಕೀಯ ತಪಾಸಣೆಯಿಂದ ಕಾಯಿಲೆಯ ತೀವ್ರತೆ ಅರಿವಿಗೆ ಬಂದಿತ್ತು. ಹೀಗಾಗಿ ಅವರು ವೈದ್ಯಕೀಯ ಜಾಮೀನಿಗೆ ಮನವಿ ಸಲ್ಲಿಸಿದ್ದರು.
ಎರಡು ತಿಂಗಳ ಕಾಲ ಮಧ್ಯಂತರ ಜಾಮೀನು ನೀಡಿದ್ದ ವಿಶೇಷ ನ್ಯಾಯಾಲಯ ವೈದ್ಯಕೀಯ ಆಧಾರದ ಮೇಲೆ ಶಾಶ್ವತ ಜಾಮೀನು ಕೋರಿ ಅವರು ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡಿತ್ತು.
ಈ ಹಿನ್ನೆಲೆಯಲ್ಲಿ ಅವರು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. ಅಲ್ಲಿ ಅವರಿಗೆ ಎರಡು ತಿಂಗಳ ಅವಧಿಗೆ ಮಧ್ಯಂತರ ವೈದ್ಯಕೀಯ ಜಾಮೀನು ನೀಡಲಾಗಿತ್ತು. ಶಸ್ತ್ರಚಿಕಿತ್ಸೆಗೆಂದು ಹೆಚ್ಚುವರಿ ಒಂದು ತಿಂಗಳ ಕಾಲ ಈ ಜಾಮೀನು ಅವಧಿಯನ್ನು ಬಳಿಕ ವಿಸ್ತರಿಸಲಾಗಿತ್ತು. ಇದೀಗ ವೈದ್ಯಕೀಯ ಜಾಮೀನನ್ನು ಶಾಶ್ವತಗೊಳಿಸಲಾಗಿದೆ.