ಹುಲಿ ಸಂರಕ್ಷಿತ ಪ್ರದೇಶವಾಗಿ ಮಹದಾಯಿ ವನ್ಯಜೀವಿ ಅಭಯಾರಣ್ಯ: ಆದೇಶ ನೀಡುವಾಗ ಮಹಾಭಾರತ ನೆನೆದ ಬಾಂಬೆ ಹೈಕೋರ್ಟ್

ಗೋವಾದ ಮಹದಾಯಿ ಅಭಯಾರಣ್ಯವನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿತು.
Tiger and Goa Bench of Bombay High Court
Tiger and Goa Bench of Bombay High Court

ಮಹಾದಾಯಿ ವನ್ಯಜೀವಿ ಅಭಯಾರಣ್ಯವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ಗೋವಾ ಸರ್ಕಾರಕ್ಕೆ ಇತ್ತೀಚೆಗೆ ಆದೇಶ ನೀಡಿದ ಗೋವಾದ ಬಾಂಬೆ ಹೈಕೋರ್ಟ್‌ ಆ ಸಂದರ್ಭದಲ್ಲಿ ದೇಶದ ಮಹಾಕಾವ್ಯ ಮಹಾಭಾರತವನ್ನು ನೆನೆದಿದೆ [ಗೋವಾ ಪ್ರತಿಷ್ಠಾನ ಮತ್ತು ಗೋವಾ ಸರ್ಕಾರ ನಡುವಣ ಪ್ರಕರಣ].

ಕರ್ನಾಟಕಕ್ಕೆ ಸಂಬಂಧಿಸಿದಂತೆಯೂ ಮಹತ್ವದ್ದಾಗಿರುವ ಈ ಆದೇಶ ನೀಡುವಾಗ ನ್ಯಾಯಮೂರ್ತಿಗಳಾದ ಮಹೇಶ್ ಸೋನಕ್ ಮತ್ತು ಭರತ್ ದೇಶಪಾಂಡೆ ಅವರಿದ್ದ ವಿಭಾಗೀಯ ಪೀಠ ಹುಲಿಗಳನ್ನು ರಕ್ಷಿಸುವ ಅಗತ್ಯವನ್ನು ಒತ್ತಿಹೇಳಲು ಮಹಾಭಾರತದ ಶ್ಲೋಕವನ್ನು ಪ್ರಸ್ತಾಪಿಸಿತು.

ʼनिर्व र्वध्यते व्या घ्रो निर्व्याघ्रंनि द्यते र्वम्। तेस्मा द्व्या घ्रो र्व रक्षे द्वयं व्या घ्रंच पा लयं ते|| "ಅರಣ್ಯವಿಲ್ಲದಿದ್ದರೆ ಹುಲಿ ಸಾಯುತ್ತದೆ; ಹುಲಿ ಇಲ್ಲದಿದ್ದರೆ ಕಾಡು ನಾಶವಾಗುತ್ತದೆ. ಆದ್ದರಿಂದ, ಹುಲಿ ಅರಣ್ಯವನ್ನು ರಕ್ಷಿಸುತ್ತದೆ ಮತ್ತು ಅರಣ್ಯವು ಹುಲಿಯನ್ನು ಕಾಪಾಡುತ್ತದೆ ”ಎಂಬ ಶ್ಲೋಕವನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Also Read
ಕಳಸಾ-ಬಂಡೂರಿ ನಾಲಾ ಯೋಜನೆ: ಅಗತ್ಯವಿರುವ ಕಡೆ ಅನುಮತಿ ಪಡೆದು ಮುಂದುವರಿಯುವುದಾಗಿ ತಿಳಿಸಿದ ಕರ್ನಾಟಕ, ಸುಪ್ರೀಂ ಸಮ್ಮತಿ

ವನ್ಯಜೀವಿಗಳಿಗೆ ನೀಡಿದ ರಕ್ಷಣೆಯನ್ನು ಸುಧಾರಿಸುವ ಅಗತ್ಯವಿದೆ ಎಂದ ನ್ಯಾಯಾಲಯ ದೇಶದಲ್ಲಿಅನೇಕ ಪ್ರಭೇದಗಳು ಅಳಿವಿನಂಚಿನಲ್ಲಿವೆ ಇಲ್ಲವೇ ವಿನಾಶದಂಚಿಗೆ ಸರಿಯುವ ಅಪಾಯದಲ್ಲಿವೆ ಎಂದಿರುವ ನ್ಯಾಯಾಲಯ 3 ತಿಂಗಳೊಳಗೆ ಮಹಾದಾಯಿ ವನ್ಯಜೀವಿ ಅಭಯಾರಣ್ಯವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸುವಂತೆ ಆದೇಶ ನೀಡಿದೆ.  

ಮಹದಾಯಿ ವನ್ಯಜೀವಿ ಅಭಯಾರಣ್ಯ, ಭಗವಾನ್ ಮಹಾವೀರ ವನ್ಯಜೀವಿ ಅಭಯಾರಣ್ಯ, ಭಗವಾನ್ ಮಹಾವೀರ ರಾಷ್ಟ್ರೀಯ ಉದ್ಯಾನವನ, ನೇತ್ರಾವಳಿ ವನ್ಯಜೀವಿ ಅಭಯಾರಣ್ಯ ಮತ್ತು ಕೋಟಿಗಾವ್ ವನ್ಯಜೀವಿಗಳನ್ನು ಒಳಗೊಂಡಿರುವ ಗೋವಾದ ಮಹದಾಯಿ ಅಭಯಾರಣ್ಯ ಸಂಕೀರ್ಣವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು  ಘೋಷಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನಡೆಸುವಾಗ ಈ ಆದೇಶ ನೀಡಲಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಹರಡಿಕೊಂಡಿರುವ ಈ ಸಂರಕ್ಷಿತ ಪ್ರದೇಶಗಳು ಸುಮಾರು 750 ಚದರ ಕಿಲೋಮೀಟರ್‌ಗಳಷ್ಟು ವಿಸ್ತಾರದ್ದಾಗಿವೆ.

ಪರಿಸರ ವ್ಯವಸ್ಥೆಯ ಆರೋಗ್ಯ ಕಾಪಾಡುವಲ್ಲಿ ಮತ್ತು ವೈವಿಧ್ಯತೆ ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವ ವಿಶಿಷ್ಟ ಪ್ರಾಣಿ ಹುಲಿ ಎಂದು ಭಾರತದ ವಿಶ್ವ ವನ್ಯಜೀವಿ ನಿಧಿ (ಡಬ್ಲ್ಯುಡಬ್ಲ್ಯುಎಫ್)  ತಿಳಿಸಿರುವುದನ್ನು ಹೈಕೋರ್ಟ್‌ ಪ್ರಸ್ತಾಪಿಸಿದ್ದು “ಹುಲಿ ಆಹಾರ ಸರಪಳಿಯ ಶೃಂಗದಲ್ಲಿ ಅಗ್ರ ಸ್ಥಾನ ಪಡೆದ ಪರಭಕ್ಷಕ ಎನಿಸಿಕೊಂಡಿದೆ. ಹೀಗಾಗಿ ಕಾಡಿನಲ್ಲಿ ಹುಲಿಗಳ ಉಪಸ್ಥಿತಿ ಪರಿಸರ ವ್ಯವಸ್ಥೆಯ ಯೋಗಕ್ಷೇಮದ ಸೂಚಕವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಪ್ರಾಜೆಕ್ಟ್‌ ಟೈಗರ್‌ ಯೋಜನೆ ದೇಶದಲ್ಲಿ ಮೂರು ದಶಕಗಳಿಂದ ಅಸ್ತಿತ್ವದಲ್ಲಿದ್ದರೂ ಹುಲಿಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ. ಇದೇ ವೇಳೆ   ಪರಿಶಿಷ್ಟ ಪಂಗಡ ಮತ್ತಿತರ ಅರಣ್ಯವಾಸಿಗಳ ಹಕ್ಕುಗಳನ್ನು ಸಾಧ್ಯವಾದಷ್ಟು ತ್ವರಿತವಾಗಿ ಅಂದರೆ 12 ತಿಂಗಳೊಳಗೆ ಇತ್ಯರ್ಥಗೊಳಿಸಲು ಗೋವಾ ಸರ್ಕಾರಕ್ಕೆ ಅದು ನಿರ್ದೇಶನ ನೀಡಿದೆ.

ಆದರೆ ನ್ಯಾಯಾಲಯ ನೀಡಿರುವ ಆದೇಶದಿಂದ ಕರ್ನಾಟಕದ ಕಳಸಾ ಬಂಡೂರಿ ಯೋಜನೆ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ವಿಶ್ಲೇಷಣೆಗಳಿವೆ.

Related Stories

No stories found.
Kannada Bar & Bench
kannada.barandbench.com