ಸರ್ಕಾರಿ ಅಧಿಕಾರಿಗಳ ವಿರುದ್ಧ ವಿವಿಧ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಿ ಅವುಗಳನ್ನು ʼತೂಗುಗತ್ತಿʼಯಂತೆ ಬಾಕಿ ಇರಿಸುವ ಅರ್ಜಿದಾರರ ವಿರುದ್ಧ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠ ಈಚೆಗೆ ಅಸಮಾಧಾನ ವ್ಯಕ್ತಪಡಿಸಿದೆ [ಶರದ್ ಕುಲಕರ್ಣಿ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].
ಅರ್ಜಿದಾರ ಶರದ್ ಕುಲಕರ್ಣಿ ಅವರು ಸರ್ಕಾರಿ ಅಧಿಕಾರಿಗಳ ವಿರುದ್ಧ 2013ರಿಂದ ಏಳು ಮೊಕದ್ದಮೆಗಳನ್ನು ಹೂಡಿ ಅವುಗಳನ್ನು ಬಾಕಿ ಇರಿಸಿದ್ದಾರೆ. ಆದರೆ ಅವರು ಪ್ರಕರಣ ದಾಖಲಿಸಿರುವುದರ ಹಿಂದಿನ ಉದ್ದೇಶವನ್ನು ಅದರಲ್ಲಿಯೂ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಗಳ ಹಿಂದಿನ ಆಶಯವನ್ನು ನ್ಯಾಯಮೂರ್ತಿಗಳಾದ ರವೀಂದ್ರ ವಿ ಘುಗೆ ಮತ್ತು ವೈ ಜಿ ಖೋಬ್ರಗಡೆ ಅವರಿದ್ದ ವಿಭಾಗೀಯ ಪೀಠ ಜುಲೈ 21ರಂದು ನೀಡಿದ ಆದೇಶದಲ್ಲಿ ಪ್ರಶ್ನಿಸಿದೆ.
ಈ ಹಿನ್ನೆಲೆಯಲ್ಲಿ ವಿಚಾರಣೆ ಪೂರ್ವ ಷರತ್ತಾಗಿ ಹೈಕೋರ್ಟ್‌ನಲ್ಲಿ ಬಾಕಿ ಇರುವ ಪ್ರತಿಯೊಂದು ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಪ್ರತಿಯೊಬ್ಬ ಅಧಿಕಾರಿಗೆ ತಲಾ ₹ 50,000 ಠೇವಣಿ ಇಡುವಂತೆ ಕುಲಕರ್ಣಿ ಅವರಿಗೆ ಸೂಚಿಸಿದೆ.
ಕುಲಕರ್ಣಿ ಪರ ವಾದ ಮಂಡಿಸಿದ ವಕೀಲ ಅನಿರುದ್ಧ ನಿಂಬಾಳ್ಕರ್ ಅವರು ಜು.21ರಿಂದ 60 ದಿನದೊಳಗೆ ₹ 7.5 ಲಕ್ಷ ಠೇವಣಿ ಇಡುವುದಾಗಿ ನ್ಯಾಯಾಲಯಕ್ಕೆ ಭರವಸೆ ನೀಡಿದರು.
ಈ ಠೇವಣಿ ಆಧರಿಸಿ ಪಿಐಎಲ್‌ಗಳನ್ನು ಆಲಿಸಲಾಗುವುದು, ವಿಫಲವಾದರೆ ಪಿಐಎಲ್‌ಗಳನ್ನು ವಜಾಗೊಳಿಸಲಾಗುವುದು ಮತ್ತು ದಂಡ ವಿಧಿಸಲೂಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಕುಲಕರ್ಣಿ ಅವರು ವಿವಿಧ ಇಲಾಖೆಗಳ ಹಲವು ಅಧಿಕಾರಿಗಳ ವಿರುದ್ಧ ಏಳು ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿದ್ದಾರೆ ಎಂದು ತಿಳಿದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿತು.