ವೈದ್ಯಕೀಯ ಆಧಾರದ ಮೇಲೆ ಜಾಮೀನು ಕೋರಿ ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ತೆಲುಗು ಕವಿ ಡಾ. ವರವರ ರಾವ್ ಅವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಸೋಮವಾರ ಬೆಳಿಗ್ಗೆ 11 ಗಂಟೆಗೆ ತೀರ್ಪು ನೀಡಲಿದೆ.
ಜಾಮೀನು ಕೋರಿರುವುದಷ್ಟೇ ಅಲ್ಲದೆ ರಾವ್ ಅವರ ಆರೋಗ್ಯದ ಮೂಲಭೂತ ಹಕ್ಕನ್ನು ಉಲ್ಲಂಘಿಸಲಾಗಿದ್ದು ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಎಂದು ಅವರ ಪತ್ನಿ ಪೆಂಡ್ಯಾಲ ಹೇಮಲತಾ ಅವರು ಕೋರಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯ ತೀರ್ಪು ಪ್ರಕಟಿಸುತ್ತಿದೆ.
ವಿಶೇಷ ಪ್ರಕರಣವಾಗಿ ರಾವ್ ಅವರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ರಾಜ್ಯ ಗೃಹ ಸಚಿವರು ಸಿದ್ಧರಿದ್ದಾರೆ ಎಂದು ಮುಖ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ದೀಪಕ್ ಠಾಕ್ರೆ ನ್ಯಾಯಾಲಯಕ್ಕೆ ತಿಳಿಸಿದ್ದರು. ಅವರನ್ನು ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ರಾಜ್ಯ ಸರ್ಕಾರ ರಾವ್ ಆರೋಗ್ಯಕ್ಕೆ ಸಂಬಂಧಿಸಿದ ನೂತನ ವೈದ್ಯಕೀಯ ವರದಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಅದರ ಆಧಾರದ ಮೇಲೆ ಸಲ್ಲಿಸಲಾದ ಅರ್ಜಿಯನ್ನು ನ್ಯಾಯಾಲಯ ಆಲಿಸಿತ್ತು. ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಮನೀಶ್ ಪಿಟಾಲೆ ಅವರಿದ್ದ ಪೀಠ ಪ್ರಕರಣವನ್ನು ಆಲಿಸಿತ್ತು. ರಾವ್ ಅವರನ್ನು ಹಿರಿಯ ನ್ಯಾಯವಾದಿಗಳಾದ ಆನಂದ್ ಗ್ರೋವರ್, ಇಂದಿರಾ ಜೈಸಿಂಗ್ ಪ್ರತಿಪಾದಿಸಿದ್ದರು. ಎನ್‌ಐಎ ಪರವಾಗಿ ಹಿರಿಯ ವಕೀಲ ಅನಿಲ್ ಸಿಂಗ್ ವಾದ ಮಂಡಿಸಿದ್ದರು.