
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ವಿಶ್ವಾಸದ್ರೋಹಿ ಎಂದು ಕರೆದ ಹಿನ್ನೆಲೆಯಲ್ಲಿ ಹಾಸ್ಯ ಕಲಾವಿದ ಕುನಾಲ್ ಕಮ್ರಾ ಅವರನ್ನು ಬಂಧಿಸದಂತೆ ಬಾಂಬೆ ಹೈಕೋರ್ಟ್ ಶುಕ್ರವಾರ ರಕ್ಷಣೆ ನೀಡಿದೆ.
ಆದರೆ ಕುನಾಲ್ ವಿರುದ್ಧದ ತನಿಖೆಗೆ ತಡೆ ನೀಡಲು ನ್ಯಾಯಮೂರ್ತಿಗಳಾದ ಸಾರಂಗ್ ಕೊತ್ವಾಲ್ ಮತ್ತು ಎಸ್ ಎಂ ಮೋದಕ್ ಅವರಿದ್ದ ಪೀಠ ನಿರಾಕರಿಸಿತು. ಇದೇ ವೇಳೆ ಪೊಲೀಸರು ಕಮ್ರಾ ಅವರ ವಿಚಾರಣೆ ನಡೆಸಲು ಬಯಸಿದರೆ, ಅವರು ತಮಿಳುನಾಡಿನಲ್ಲಿ ವಾಸಿಸುತ್ತಿರುವುದರಿಂದ ಚೆನ್ನೈನಲ್ಲಿ ವಿಚಾರಣೆ ನಡೆಸಬೇಕಾಗುತ್ತದೆ ಎಂದು ಹೇಳಿತು.
ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಕುನಾಲ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ನಿರ್ದೇಶನಗಳನ್ನು ನೀಡಲಾಗಿದೆ.
ಕುನಾಲ್ ಅವರ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವಾಗ ಮುಂಬೈ ಪೊಲೀಸರು ಆರೋಪಪಟ್ಟಿ ಸಲ್ಲಿಸಿದರೆ, ವಿಚಾರಣಾ ನ್ಯಾಯಾಲಯ ಕಮ್ರಾ ವಿರುದ್ಧ ವಿಚಾರಣೆ ನಡೆಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಏಪ್ರಿಲ್ 16ರಂದು ನ್ಯಾಯಾಲಯ ಕಮ್ರಾಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿತ್ತು. ಅದನ್ನು ಶುಕ್ರವಾರ ಖಾಯಂಗೊಳಿಸಲಾಗಿದೆ.
ಕುನಾಲ್ ಅವರ ಸುರಕ್ಷತೆ ಕುರಿತಂತೆ ನ್ಯಾಯಾಲಯ ಇದೇ ವೇಳೆ ಆತಂಕ ವ್ಯಕ್ತಪಡಿಸಿತು. ಕುನಾಲ್ ಭದ್ರತೆ ಕೋರಿದರೆ ಅದನ್ನು ವಿಸ್ತರಿಸಲಾಗುವುದು ಎಂದು ಪ್ರಾಸಿಕ್ಯೂಟರ್ ಭರವಸೆ ನೀಡಿದರು.
ಮುಂಬೈನಲ್ಲಿ ಈಚೆಗೆ ನಡೆದ ಹಾಸ್ಯ ಕಾರ್ಯಕ್ರಮದ ವೇಳೆ 2022ರಲ್ಲಿ ಆಗಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಶಿಂಧೆ ರಾಜಕೀಯ ಬಂಡಾಯ ಎದ್ದಿದ್ದನ್ನು ಪ್ರಸ್ತಾಪಿಸಿ ಶಿಂಧೆ ವಿಶ್ವಾಸದ್ರೋಹಿ ಎಂದು ಕಮ್ರಾ ಹೀಗಳೆದಿದ್ದರು. ಶಿಂಧೆ ಬಂಡಾಯದ ನಂತರ ಶಿವಸೇನೆ ಹೋಳಾಗಿತ್ತು. ಶಿಂಧೆ ಅವರ ಆಲೋಚನೆ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರೊಂದಿಗಿನ ಮೈತ್ರಿಯನ್ನು ಅಣಕಿಸಿ ಬಾಲಿವುಡ್ ಚಲನಚಿತ್ರ ದಿಲ್ ತೋ ಪಾಗಲ್ ಹೈ ಚಿತ್ರದ 'ಬೊಲೀಸಿ ಸೂರತ್' ಹಾಡನ್ನು ವಿಡಂಬನಾತ್ಮಕವಾಗಿ ಕಮ್ರಾ ಪ್ರಸ್ತುತಪಡಿಸಿದ್ದರು.
ಶಿವಸೇನಾ ಶಾಸಕ ಮುರಾಜಿ ಪಟೇಲ್ ಸಲ್ಲಿಸಿದ ದೂರಿನ ಆಧಾರದ ಮೇಲೆ ಕಮ್ರಾ ವಿರುದ್ಧ ಸೆಕ್ಷನ್ 353(1)(b), 353(2) (ಸಾರ್ವಜನಿಕ ಕಿರುಕುಳ) ಮತ್ತು 356(2) (ಮಾನನಷ್ಟ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಕಮ್ರಾ ತಮಿಳುನಾಡಿನ ವಿಲ್ಲುಪುರಂ ನಿವಾಸಿಯಾಗಿದ್ದರೂ, ಅವರ ವಿರುದ್ಧದ ಎಫ್‌ಐಆರ್ ಮುಂಬೈನಲ್ಲಿ ದಾಖಲಾಗಿತ್ತು.