ಹಾಸ್ಯ ಕಲಾವಿದ ಕುನಾಲ್, ವ್ಯಂಗ್ಯಚಿತ್ರಕಾರ್ತಿ ರಚಿತಾ ವಿರುದ್ಧದ ನ್ಯಾಯಾಂಗ ನಿಂದನೆ ಮೊಕದ್ದಮೆ: ನಾಳೆ ಸುಪ್ರೀಂ ಆದೇಶ

ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ವಕೀಲ ನಿಶಾಂತ್ ಕಾತ್ನೇಶ್ವರ್ಕರ್ ಅವರ ವಾದ ಆಲಿಸಿದ ನ್ಯಾಯಾಲಯ ಶುಕ್ರವಾರ ಆದೇಶ ಪ್ರಕಟಿಸುವುದಾಗಿ ತಿಳಿಸಿತು.
ಹಾಸ್ಯ ಕಲಾವಿದ ಕುನಾಲ್, ವ್ಯಂಗ್ಯಚಿತ್ರಕಾರ್ತಿ ರಚಿತಾ ವಿರುದ್ಧದ ನ್ಯಾಯಾಂಗ ನಿಂದನೆ ಮೊಕದ್ದಮೆ: ನಾಳೆ ಸುಪ್ರೀಂ ಆದೇಶ

ಸುಪ್ರೀಂಕೋರ್ಟನ್ನು ಟೀಕಿಸಿ ಟ್ವೀಟ್‌ ಮಾಡಿದ ಕಾರಣಕ್ಕಾಗಿ ಹಾಸ್ಯ ಕಲಾವಿದ ಕುನಾಲ್‌, ವ್ಯಂಗ್ಯಚಿತ್ರಕಾರ್ತಿ ರಚಿತಾ ವಿರುದ್ಧ‌ ಹೂಡಲಾಗಿರುವ ನ್ಯಾಯಾಂಗ ನಿಂದನೆ ಮೊಕದ್ದಮೆ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೇ ಬೇಡವೇ ಎನ್ನುವುದಕ್ಕೆ ಸಂಬಂಧಿಸಿದಂತೆ ಶುಕ್ರವಾರ ಆದೇಶ ಪ್ರಕಟಿಸುವುದಾಗಿ ಸುಪ್ರೀಂಕೋರ್ಟ್‌ ತಿಳಿಸಿದೆ.

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಂ ಆರ್ ಶಾ ಅವರಿದ್ದ ತ್ರಿಸದಸ್ಯ ಪೀಠ ವಕೀಲ ನಿಶಾಂತ್ ಕಾತ್ನೇಶ್ವರ್ಕರ್‌ ಅವರ ವಾದವನ್ನು ಒಂದು ನಿಮಿಷಕ್ಕಿಂತ ಕಡಿಮೆ ಕಾಲ ಆಲಿಸಿ ಈ ನಿರ್ಧಾರ ಪ್ರಕಟಿಸಿದೆ. ಕಮ್ರಾ ಪರ ವಕೀಲರು ಗುರುವಾರ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಕಮ್ರಾ ಮತ್ತು ತನೇಜಾ ವಿರುದ್ಧ ನ್ಯಾಯಾಲಯ ನಿಂದನೆ ಪ್ರಕ್ರಿಯೆ ಪ್ರಾರಂಭಿಸಲು ಕೋರಿ ಸಲ್ಲಿಸಲಾಗಿದ್ದ ವಿವಿಧ ಅರ್ಜಿಗಳ ವಿಚಾರಣೆಯನ್ನು ಪೀಠವು ಆಲಿಸುತ್ತಿತ್ತು.

Also Read
ನನ್ನ ವಿರುದ್ಧದ ನಿಂದನಾ ಮನವಿಗೆ ಬದಲಾಗಿ ಚುನಾವಣಾ ಬಾಂಡ್, 370ನೇ ವಿಧಿ ರದ್ದತಿ ಪ್ರಶ್ನಿಸಿರುವ ಮನವಿ ಆಲಿಸಿ: ಕಮ್ರಾ
Also Read
ಹಾಸ್ಯ ಕಲಾವಿದ ಕಮ್ರಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಎಜಿ ಅನುಮತಿ ನೀಡಿದ್ದೇಕೆ? ಇಲ್ಲಿದೆ ವಿವರ

ಕಮ್ರಾ ಮಾಡಿದ್ದ ನಾಲ್ಕು ಟ್ವೀಟ್‌ಗಳಿಗೆ ಸಂಬಂಧಿಸಿದಂತೆ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರ ಗಮನ ಸೆಳೆದಿದ್ದ ವಿವಿಧ ಕಾನೂನು ವಿದ್ಯಾರ್ಥಿಗಳು ಮತ್ತು ವಕೀಲರು ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ಕೋರಿದ್ದರು. ಇತ್ತ ಸುಪ್ರೀಂಕೋರ್ಟನ್ನು ಗುರಿಯಾಗಿಸಿ ರಚಿತಾ ತನೇಜಾ ಅವರು ರಚಿಸಿದ್ದ ವ್ಯಂಗ್ಯಚಿತ್ರ ವಿರೋಧಿಸಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ಕೋರಲಾಗಿತ್ತು.

ರಿಪಬ್ಲಿಕ್‌ ಟಿವಿ ಪತ್ರಕರ್ತ ಅರ್ನಾಬ್‌ ಗೋಸ್ವಾಮಿ ಅವರಿಗೆ ಸುಪ್ರೀಂಕೋರ್ಟ್‌ ಜಾಮೀನು ನೀಡಿದ್ದನ್ನು ಇಬ್ಬರೂ ಕಲಾವಿದರು ಟೀಕಿಸಿದ್ದರು. ಅರ್ಜಿದಾರರ ಮನವಿಯಂತೆ ಅಟಾರ್ನಿ ಜನರಲ್‌ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲು ಅನುಮತಿ ನೀಡಿದ್ದರು. ಬಳಿಕ ಕಮ್ರಾ, “ಈ ನಿಂದನಾ ಮನವಿಗೆ ಬದಲಾಗಿ ಚುನಾವಣಾ ಬಾಂಡ್‌, ಸಂವಿಧಾನದ 370ನೇ ವಿಧಿ ರದ್ದತಿ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ಆಲಿಸಿ” ಎಂದು ನುಡಿದಿದ್ದರು.

Related Stories

No stories found.
Kannada Bar & Bench
kannada.barandbench.com