ದತ್ತಾಂಶ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋ ಫಸ್ಟ್ ಏರ್‌ಲೈನ್ಸ್‌ನ (ಹಿಂದಿನ ಗೋಏರ್) ಮಾಜಿ ವ್ಯವಸ್ಥಾಪಕ ನಿರ್ದೇಶಕ ವುಲ್ಫ್‌ಗಂಗ್ ಪ್ರಾಕ್-ಸ್ಚೌರ್ ಅವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಬಾಂಬೆ ಹೈಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದೆ.
ಪ್ರಕರಣ ಮುಂದುವರಿಸಲು ಸಾಕಷ್ಟು ಸಾಕ್ಷ್ಯಾಧಾರಗಳ ಕೊರತೆ ಇದೆ. ಅರ್ಜಿದಾರರ ವಿರುದ್ಧದ ಪ್ರಕ್ರಿಯೆಗಳ ಮುಂದುವರಿಕೆ ಕೇವಲ ಕಾರ್ಯವಿಧಾನದ ಅಸಂಬದ್ಧ ನಿರೂಪಣೆಗಿಂತಲೂ ಕಡಿಮೆ ಎನಿಸದು ಎಂದು ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಮತ್ತು ಮಂಜೂಷಾ ದೇಶಪಾಂಡೆ ಅವರನ್ನೊಳಗೊಂಡ ಪೀಠ ಹೇಳಿದೆ.
ಅರ್ಜಿದಾರರ ವಿರುದ್ಧದ ಪ್ರಕ್ರಿಯೆಗಳ ಮುಂದುವರಿಕೆ ವಿಚಾರಣೆಯ ಅಸಂಬದ್ಧ ನಿರೂಪಣೆಗಿಂತಲೂ ಕಡಿಮೆ ಎನಿಸದು ಎಂದು ನ್ಯಾಯಾಲಯ ಹೇಳಿದೆ.
ಆಗಸ್ಟ್ 2017 ರಲ್ಲಿ ರಾಜೀನಾಮೆ ನೀಡಿದ್ದ ಗೋ ಫಸ್ಟ್ ವ್ಯವಸ್ಥಾಪಕ ನಿರ್ದೇಶಕ ವುಲ್ಫ್‌ಗಂಗ್ ಪ್ರಾಕ್-ಸ್ಚೌರ್ ಅವರು ತಮ್ಮ ಅಧಿಕಾರಾವಧಿಯಲ್ಲಿ ವೈಯಕ್ತಿಕ ಮತ್ತು ಮೂರನೇ ವ್ಯಕ್ತಿಯ ಇಮೇಲ್ಗೆ ಗೌಪ್ಯ ಮಾಹಿತಿ ರವಾನಿಸಿದ ಆರೋಪ ಎದುರಿಸುತ್ತಿದ್ದರು.
ಅವರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 408 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 43 (ಬಿ) ಮತ್ತು 66ನ್ನೂ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಸೂಕ್ಷ್ಮ ಮಾಹಿತಿ ಹಂಚಿಕೊಂಡಿದ್ದ ವುಲ್ಫ್‌ಗಂಗ್ ಅವರು ಐಪ್ಯಾಡ್ ಫಾರ್ಮ್ಯಾಟ್ ಮಾಡಿದ್ದಾರೆ. ಇದರಿಂದ ಇದರಿಂದಾಗಿ ಕಂಪನಿಗೆ ಆರ್ಥಿಕ ನಷ್ಟ ಉಂಟಾಗಿದೆ ಎಂಬುದು ಗೋ ಫಸ್ಟ್ ಆರೋಪವಾಗಿತ್ತು.
ತನ್ನ ಇಮೇಲ್‌ಗೆ ಕಳಿಸಿಕೊಂಡ ದಾಖಲೆಗಳು ಗೋ ಫಸ್ಟ್‌ನೊಂದಿಗಿನ ಮಾತುಕತೆಗಳಿಗೆ ಸಂಬಂಧಿಸಿದ್ದಾಗಿದ್ದು ವ್ಯಾಪಾರ ಪ್ರವಾಸಗಳ ಸಮಯದಲ್ಲಿ ಅಧಿಕೃತ ಪ್ರಸ್ತುತಿಗಳನ್ನು ತಯಾರಿಸಲು ಹಾಗೆ ಇಮೇಲ್ ಕಳಿಸಿಕೊಳ್ಳುವುದು ಅವಶ್ಯಕವಾಗಿತ್ತು ಎಂದು ಪ್ರಾಕ್-ಶೌಯರ್ ಪ್ರತಿವಾದ ಮಂಡಿಸಿದ್ದರು. ತಾನು ಕಂಪನಿಯಿಂದ ನಿರ್ಗಮಿಸುವ ಕುರಿತಂತೆ ಕಾನೂನು ಸಲಹೆ ಪಡೆಯಲೆಂದಷ್ಟೇ ಆಸ್ಟ್ರಿಯಾದಲ್ಲಿರುವ ತಮ್ಮ ವಕೀಲರೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾಗಿ ಅವರು ಹೇಳಿದ್ದರು.
ವಾದ ಆಲಿಸಿದ ನ್ಯಾಯಾಲಯ ದತ್ತಾಂಶ ಕಳ್ಳತನದ ಆರೋಪಗಳನ್ನು ಬೆಂಬಲಿಸುವ ಸಾಕ್ಷ್ಯಗಳಿವೆಯೇ ಎಂದು ತನಿಖಾಧಿಕಾರಿಯನ್ನು ಪ್ರಶ್ನಿಸಿತು. ಅಲ್ಲದೆ ವುಲ್ಫ್‌ಗಂಗ್ ಅವರು ಕಾನೂನುಬಾಹಿರವಾಗಿ ದುರುದ್ದೇಶದಿಂದ ಮಾಹಿತಿ ಡೌನ್‌ಲೋಡ್ ಮಾಡಿದ್ದಾರೆ ಎಂಬುದನ್ನು ಸಾಬೀತುಪಡಿಸುವಂತಹ ದೃಢ ಪುರಾವೆಯನ್ನು ಸಂಗ್ರಹಿಸಲಾಗಿಲ್ಲ ಎಂದು ನ್ಯಾಯಾಲಯ ತಿಳಿಸಿತು.
ಅಂತಿಮವಾಗಿ ಐಪಿಸಿಯ ಸೆಕ್ಷನ್ 408 ರ ಅಡಿಯಲ್ಲಿ ಆರೋಪಗಳನ್ನು ಕೈಬಿಡಲು ನಿರ್ಧರಿಸಿದ ಪ್ರಾಸಿಕ್ಯೂಷನ್ ಮಾಹಿತಿ ತಂತ್ರಜ್ಞಾನ ಕಾಯಿದೆಯ ಮೇಲೆ ಕೇಂದ್ರೀಕರಿಸಿತು.
ಮೋಸ ನಡೆದಿದೆ ಎಂಬುದನ್ನು ನಿರೂಪಿಸಬೇಕಾದರೆ ತಪ್ಪಾಗೆ ಲಾಭ ಪಡೆದಿದ್ದಾರೆ ಅಥವಾ ನಷ್ಟ ಉಂಟುಮಾಡಿದ್ದಾರೆ ಎಂಬುದನ್ನು ಹೇಳುವಂತಹ ಸ್ಪಷ್ಟ ಪುರಾವೆಗಳ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿತು. ಆದರೆ ಇಲ್ಲಿ ಅಂತಹ ಸಾಕ್ಷ್ಯ ದೊರೆತಿಲ್ಲ ಎಂದು ಹೇಳಿತು.
ವುಲ್ಫ್‌ಗಂಗ್ ವಿರುದ್ಧ ಮಾನ್ಯವಾದ ವಾದವನ್ನು ಎಫ್‌ಐಆರ್ ಮಂಡಿಸಿಲ್ಲ. ಮೇಲ್ನೋಟಕ್ಕೆ ಕಾಣುವಂತಹ ಯಾವುದೇ ಅಪರಾಧವನ್ನು ಅದು ಒಳಗೊಂಡಿಲ್ಲ. ಆದ್ದರಿಂದ ಪ್ರಕರಣ ರದ್ದುಗೊಳಿಸಿದ ನ್ಯಾಯಾಲಯ ವುಲ್ಫ್‌ಗಂಗ್ ಅವರ ಅರ್ಜಿ ಪುರಸ್ಕರಿಸಿತು.