ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ದೂರು ಆಧರಿಸಿ ಅವರ ಮಾಜಿ ಕಾರ್ಯದರ್ಶಿ ಪ್ರಕಾಶ್ ಜಾಜು ವಿರುದ್ಧ ದಾಖಲಿಸಲಾಗಿದ್ದ ಎಫ್‌ಐಆರ್‌ಅನ್ನು ಬಾಂಬೆ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಪಿ ಕೆ ಚವಾಣ್ ಅವರ ನೇತೃತ್ವದ ವಿಭಾಗೀಯ ಪೀಠವು ಜಾಜು ಬೇಷರತ್ ಕ್ಷಮೆಯಾಚಿಸಿದ್ದನ್ನು ಪರಿಗಣಿಸಿ ಹಾಗೂ ಪ್ರಿಯಾಂಕಾ ಚೋಪ್ರಾ ಅವರ ಅಫಿಡವಿಟ್ ಆಧರಿಸಿ ಈ ಆದೇಶ ಮಾಡಿತು.
ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳುವ ನಿಟ್ಟಿನಲ್ಲಿ ಜಾಜು ಸಂಪರ್ಕಿಸಿದ್ದು, ಸುದೀರ್ಘ ಸಮಾಲೋಚನೆಯ ಬಳಿಕ ಪ್ರಕರಣಕ್ಕೆ ಇತಿಶ್ರೀ ಹಾಡಲು ಪ್ರಿಯಾಂಕಾ ನಿರ್ಧರಿಸಿರುವುದಾಗಿ ವಕೀಲ ರಾಹುಲ್ ಅಗರ್‌ವಾಲ್ ಅವರ ಮೂಲಕ ಸಲ್ಲಿಸಲಾದ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ಅಮೆರಿಕದಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದ ಪ್ರಿಯಾಂಕಾ ಚೋಪ್ರಾ ಅವರು ಅಫಿಡವಿಟ್ ಮೂಲಕ ಒಪ್ಪಿಗೆ ನೀಡಿರುವುದನ್ನು ಪುನರುಚ್ಚರಿಸಿದರು. ಎಫ್‌ಐಆರ್ ರದ್ದುಪಡಿಸಿದ ನ್ಯಾಯಾಲಯವು ಪೊಲೀಸ್ ಕಲ್ಯಾಣ ನಿಧಿಗೆ ₹50,000 ಠೇವಣಿ ಇಡಲು ಜಾಜುಗೆ ನಿರ್ದೇಶಿಸಿತು.
ವ್ಯಾವಹಾರಿಕ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ 2008ರ ಜುಲೈನಲ್ಲಿ ಜಾಜು ತನಗೆ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿದ್ದಾಗಿ ಆತನ ವಿರುದ್ಧ ನಟಿ ದೂರು ದಾಖಲಿಸಿದ್ದರು. ಇದನ್ನು ಆಧರಿಸಿ ಮುಂಬೈ ಪೊಲೀಸರು ಜಾಜು ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 506(2) (ಕ್ರಿಮಿನಲ್ ಬೆದರಿಕೆ) ಮತ್ತು 509 (ಮಹಿಳೆಯ ಘನತೆಗೆ ಧಕ್ಕೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಅಡಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಸಿದ ಬಳಿಕ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪ್ಲೆನೇಡ್‌ನ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಕ್ರಿಮಿನಲ್ ದೂರನ್ನು ಸಹ ಪ್ರಿಯಾಂಕ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಎಫ್‌ಐಆರ್ ಮತ್ತು ಕ್ರಿಮಿನಲ್ ಪ್ರಕ್ರಿಯೆ ವಜಾ ಮಾಡುವಂತೆ ಜಾಜು ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.