
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಅವಮಾನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಹಾಸ್ಯ ಕಲಾವಿದ ಕುನಾಲ್ ಕಮ್ರಾ ಅವರ ವಿಡಿಯೋವನ್ನು ಹಂಚುವ ಇಲ್ಲವೇ ಮರು ಟ್ವೀಟ್ ಮಾಡುವವರ ವಿರುದ್ಧ ಅಧಿಕಾರಿಗಳು ಕ್ರಿಮಿನಲ್ ಕ್ರಮಕ್ಕೆ ಮುಂದಾಗದಂತೆ ನಿರ್ದೇಶಿಸಲು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಅರ್ಜಿಯನ್ನು ಬಾಂಬೆ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಕಮ್ರಾ ಅವರ ಕೃತ್ಯವನ್ನು ರೀಟ್ವೀಟ್ ಮಾಡುವ ಯಾರ ವಿರುದ್ಧವೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದನ್ನು ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಎಂ ಎಸ್ ಕಾರ್ಣಿಕ್ ಅವರಿದ್ದ ವಿಭಾಗೀಯ ಪೀಠ ಗಮನಿಸಿತು.
ಕಮ್ರಾ ಅವರಿಗೆ ಮದ್ರಾಸ್ ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದ್ದು ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಅವರು ಸಲ್ಲಿಸಿರುವ ಅರ್ಜಿ ಬಾಂಬೆ ಹೈಕೋರ್ಟ್‌ನಲ್ಲಿ ಬಾಕಿ ಇದೆ ಎಂಬುದನ್ನು ಪೀಠ ಒತ್ತಿ ಹೇಳಿತು.
ಸಂವಿಧಾನದ 19ನೇ ವಿಧಿಯಡಿ ಕಮ್ರಾ ಅವರ ನಿಲುವನ್ನು ವಾಕ್ ಸ್ವಾತಂತ್ರ್ಯದ ರೂಪದಲ್ಲಿ ರಕ್ಷಿಸಲಾಗಿದೆ ಎಂದು ಘೋಷಿಸಬೇಕೆಂದು ಕೋರಿ ಕಾನೂನು ವಿದ್ಯಾರ್ಥಿ ಹರ್ಷವರ್ಧನ್ ನವನಾಥ್ ಖಂಡೇಕರ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.
2022ರಲ್ಲಿ ಆಗಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಶಿಂಧೆ ರಾಜಕೀಯ ಬಂಡಾಯ ಎದ್ದಿದ್ದನ್ನು ಪ್ರಸ್ತಾಪಿಸಿ ಶಿಂಧೆ ದೇಶದ್ರೋಹಿ ಎಂದು ಕಮ್ರಾ ಹಾಸ್ಯ ಕಾರ್ಯಕ್ರಮ ʼನಯಾ ಭಾರತ್ʼನಲ್ಲಿ ಬಣ್ಣಿಸಿದ್ದರು. ಶಿಂಧೆ ಬಂಡಾಯದ ನಂತರ ಶಿವಸೇನೆ ಹೋಳಾಗಿತ್ತು. ಶಿಂಧೆ ಅವರ ಆಲೋಚನೆ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರೊಂದಿಗಿನ ಮೈತ್ರಿಯನ್ನು ಅಣಕಿಸಿ ಬಾಲಿವುಡ್ ಚಲನಚಿತ್ರ ದಿಲ್ ತೋ ಪಾಗಲ್ ಹೈ ಚಿತ್ರದ 'ಬೊಲೀಸಿ ಸೂರತ್' ಹಾಡನ್ನು ವಿಡಂಬನಾತ್ಮಕವಾಗಿ ಕಮ್ರಾ ಪ್ರಸ್ತುತಪಡಿಸಿದ್ದರು.
ಶಿವಸೇನಾ ಶಾಸಕ ಮುರಾಜಿ ಪಟೇಲ್ ಸಲ್ಲಿಸಿದ ದೂರಿನ ಆಧಾರದ ಮೇಲೆ ಕಮ್ರಾ ವಿರುದ್ಧ ಸೆಕ್ಷನ್ 353(1) (b), 353 (2) (ಸಾರ್ವಜನಿಕ ಕಿರುಕುಳ) ಮತ್ತು 356 (2) (ಮಾನನಷ್ಟ) ಅಡಿಯಲ್ಲಿ ಅಪರಾಧ ದಾಖಲಿಸಲಾಗಿತ್ತು. ಇದನ್ನು ಕಮ್ರಾ ಅವರು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.