ದೇಶದ್ರೋಹಿ ಹೇಳಿಕೆ: ಕುನಾಲ್ ಕಮ್ರಾ ಅರ್ಜಿ ನಾಳೆ‌ ವಿಚಾರಣೆ ನಡೆಸಲಿರುವ ಬಾಂಬೆ ಹೈಕೋರ್ಟ್‌

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಮದ್ರಾಸ್ ಹೈಕೋರ್ಟ್ ಕಮ್ರಾಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿತ್ತು.
ದೇಶದ್ರೋಹಿ ಹೇಳಿಕೆ: ಕುನಾಲ್ ಕಮ್ರಾ ಅರ್ಜಿ ನಾಳೆ‌ ವಿಚಾರಣೆ ನಡೆಸಲಿರುವ ಬಾಂಬೆ ಹೈಕೋರ್ಟ್‌
Published on

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಅವಮಾನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮುಂಬೈನಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಹಾಸ್ಯ ಕಲಾವಿದ ಕುನಾಲ್ ಕಮ್ರಾ‌ ಸಲ್ಲಿಸಿರುವ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ನಾಳೆೆ (ಮಂಗಳವಾರ) ವಿಚಾರಣೆ ನಡೆಸಲಿದೆ.

ರಾಜಕೀಯ ಪಕ್ಷವೊಂದರ ಕಾರ್ಯಕರ್ತರಿಂದ ದೈಹಿಕ ಹಿಂಸೆಯ ಬೆದರಿಕೆ ಇರುವುದರಿಂದ ಕಮ್ರಾ ಮಹಾರಾಷ್ಟ್ರದ ನ್ಯಾಯಾಲಯಗಳ ಮೆಟ್ಟಿಲೇರಲು ಆಗುತ್ತಿಲ್ಲ ಎಂಬುದನ್ನು ಗಮನಿಸಿದ್ದ ಮದ್ರಾಸ್‌ ಹೈಕೋರ್ಟ್‌ ಈ ಹಿಂದೆ ಕಮ್ರಾಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿತ್ತು.

Also Read
ಹಾಸ್ಯ ಕಲಾವಿದ ಕಮ್ರಾಗೆ ಮದ್ರಾಸ್ ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು

ಅವರಿಗೆ ನೀಡಲಾಗಿದ್ದ ಬಂಧನದಿಂದ ರಕ್ಷಿಸುವ ಮಧ್ಯಂತರ ಆದೇಶದ ಅವಧಿ ಇಂದು ಮುಕ್ತಾಯಗೊಳ್ಳಲಿದೆ.

ಹಾಸ್ಯ ಕಾರ್ಯಕ್ರಮವೊಂದರಲ್ಲಿ 2022ರಲ್ಲಿ ಆಗಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಶಿಂಧೆ ರಾಜಕೀಯ ಬಂಡಾಯ ಎದ್ದಿದ್ದನ್ನು ಪ್ರಸ್ತಾಪಿಸಿ ಶಿಂಧೆ ದೇಶದ್ರೋಹಿ ಎಂದು ಕಮ್ರಾ ಬಣ್ಣಿಸಿದ್ದರು. ಶಿಂಧೆ ಬಂಡಾಯದ ನಂತರ ಶಿವಸೇನೆ ಹೋಳಾಗಿತ್ತು. ಶಿಂಧೆ ಅವರ ಆಲೋಚನೆ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರೊಂದಿಗಿನ ಮೈತ್ರಿಯನ್ನು ಅಣಕಿಸಿ  ಬಾಲಿವುಡ್ ಚಲನಚಿತ್ರ ದಿಲ್ ತೋ ಪಾಗಲ್ ಹೈ ಚಿತ್ರದ 'ಬೊಲೀಸಿ ಸೂರತ್‌' ಹಾಡನ್ನು ವಿಡಂಬನಾತ್ಮಕವಾಗಿ ಕಮ್ರಾ ಪ್ರಸ್ತುತಪಡಿಸಿದ್ದರು.

Also Read
ಕುನಾಲ್‌ ಕಮ್ರಾ ಹಾಸ್ಯ ಕಾರ್ಯಕ್ರಮ ವಿವಾದ: ದಾಂಧಲೆ ಎಸಗಿದ 12 ಮಂದಿಗೆ ಮುಂಬೈ ನ್ಯಾಯಾಲಯ ಜಾಮೀನು

ಶಿವಸೇನಾ ಶಾಸಕ ಮುರಾಜಿ ಪಟೇಲ್ ಸಲ್ಲಿಸಿದ ದೂರಿನ ಆಧಾರದ ಮೇಲೆ ಕಮ್ರಾ ವಿರುದ್ಧ ಸೆಕ್ಷನ್ 353(1)(b), 353(2) (ಸಾರ್ವಜನಿಕ ಕಿರುಕುಳ) ಮತ್ತು 356(2) (ಮಾನನಷ್ಟ) ಅಡಿಯಲ್ಲಿ ಅಪರಾಧಗಳನ್ನು ದಾಖಲಿಸಲಾಗಿತ್ತು.

ಕಮ್ರಾ ತಮಿಳುನಾಡಿನ ವಿಲ್ಲುಪರಂ ನಿವಾಸಿಯಾಗಿದ್ದರೂ, ಅವರ ವಿರುದ್ಧದ ಎಫ್‌ಐಆರ್ ಮುಂಬೈನಲ್ಲಿ ದಾಖಲಾಗಿದೆ.

Kannada Bar & Bench
kannada.barandbench.com