ಸಮೀರ್ ವಾಂಖೆಡೆ ಮತ್ತು ಕುಟುಂಬದ ವಿರುದ್ಧ ನವಾಬ್ ಮಲಿಕ್ ಹೇಳಿಕೆ ಪ್ರಕಟಿಸದಂತೆ ತಡೆಯಲು ಬಾಂಬೆ ಹೈಕೋರ್ಟ್ ನಕಾರ

ಸಮೀರ್ ಅವರ ತಂದೆ ಧ್ಯಾನದೇವ್ ವಾಂಖೆಡೆ ಅವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಾಧವ್ ಜಾಮ್‌ದಾರ್‌ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿದರು.
ಸಮೀರ್ ವಾಂಖೆಡೆ ಮತ್ತು ಕುಟುಂಬದ ವಿರುದ್ಧ ನವಾಬ್ ಮಲಿಕ್ ಹೇಳಿಕೆ ಪ್ರಕಟಿಸದಂತೆ ತಡೆಯಲು ಬಾಂಬೆ ಹೈಕೋರ್ಟ್ ನಕಾರ
Published on

ಎನ್‌ಸಿಬಿ ಅಧಿಕಾರಿ ಸಮೀರ್‌ ವಾಂಖೆಡೆ ಮತ್ತವರ ಕುಟುಂಬದ ವಿರುದ್ಧ ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರು ಸಾರ್ವಜನಿಕ ತಾಣಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಹೇಳಿಕೆ ನೀಡದಂತೆ ತಡೆಯಲು ಬಾಂಬೆ ಹೈಕೋರ್ಟ್‌ ಸೋಮವಾರ ನಿರಾಕರಿಸಿದೆ.

ಸಮೀರ್‌ ಅವರ ತಂದೆ ಧ್ಯಾನದೇವ್‌ ವಾಂಖೆಡೆ ಅವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಾಧವ್‌ ಜಾಮ್‌ದಾರ್ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿದರು.

Also Read
ಎನ್‌ಸಿಪಿ ನಾಯಕ ನವಾಬ್ ಮಲಿಕ್ ವಿರುದ್ಧ ಬಾಂಬೆ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ ವಾಂಖೆಡೆ ತಂದೆ

ಖಾಸಗಿತನದ ಹಕ್ಕು ಫಿರ್ಯಾದಿಗೆ ಇದ್ದರೂ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಪ್ರತಿವಾದಿ ಹೊಂದಿದ್ದು ಮೂಲಭೂತ ಹಕ್ಕುಗಳ ಸಮತೋಲನ ಕಾಯ್ದುಕೊಳ್ಳಬೇಕಿದೆ. ಸಮೀರ್‌ ವಿರುದ್ಧ ಸಂಬಂಧಪಟ್ಟ ವಿಷಯಗಳನ್ನು ಮಲಿಕ್‌ ಎತ್ತಿದ್ದು ಅವರು ದುರುದ್ದೇಶಪೂರ್ವಕವಾಗಿ ವರ್ತಿಸಿದ್ದಾರೆ ಎನ್ನಲಾಗದು ಎಂದು ಪೀಠ ಅಭಿಪ್ರಾಯಪಟ್ಟಿತು. ಆದರೂ, ಮಲಿಕ್ ಅವರು ಸಾರ್ವಜನಿಕ ತಾಣಗಳಲ್ಲಿ ಅಂತಹ ಹೇಳಿಕೆಗಳನ್ನು ಪ್ರಕಟಿಸುವ ಮೊದಲು ದಾಖಲೆಗಳ ಸಾಕಷ್ಟು ಪ್ರಮಾಣದಲ್ಲಿ ಪರಿಶೀಲನೆ ನಡೆಸಬೇಕು ಎಂದು ನ್ಯಾಯಾಲಯ ಹೇಳಿದೆ.

ಬಹುಮುಖ್ಯವಾಗಿ, ಸಾರ್ವಜನಿಕ ಅಧಿಕಾರಿಗಳ ಕೃತ್ಯಗಳ ಬಗ್ಗೆ ಪರಿಶೀಲಿಸುವ ಹಕ್ಕು ಸಾರ್ವಜನಿಕರಿಗಿದೆ. ಆದರೆ, ಅದನ್ನು ಮಾಡುವ ಮುನ್ನ ಸತ್ಯಾಂಶಗಳ ಯುಕ್ತಾಯುಕ್ತ ಪರಿಶೀಲನೆ ಅಗತ್ಯ ಎಂದು ನ್ಯಾಯಾಲಯ ಹೇಳಿತು.

ಧ್ಯಾನದೇವ್‌ ಅವರು ಸಲ್ಲಿಸಿದ್ದ ಮಧ್ಯಂತರ ಅರ್ಜಿಯಲ್ಲಿ ತಮ್ಮ ಬಗ್ಗೆ ಭವಿಷ್ಯದಲ್ಲಿ ಯಾವುದೇ ಹೇಳಿಕೆ ನೀಡದಂತೆ ಮಲಿಕ್‌ ಅವರಿಗೆ ತಾತ್ಕಾಲಿಕ ತಡೆಯಾಜ್ಞೆ ನೀಡುವಂತೆ ಕೋರಲಾಗಿತ್ತು. ಸಮೀರ್‌ ಅವರ ವಿವಾದಿತ ಜನನ ಪ್ರಮಾಣಪತ್ರವನ್ನು ಮಲಿಕ್‌ ಅವರು ಟ್ವಿಟರ್‌ನಲ್ಲಿ ಪ್ರಕಟಿಸಿದ ಬಳಿಕ ಸಮೀರ್‌ ತಂದೆ ಈ ದಾವೆ ಹೂಡಿದ್ದರು. ಸಮೀರ್‌ ಅವರ ತಂದೆ ಧ್ಯಾನಚಂದ್‌ ಮೂಲತಃ ಮುಸ್ಲಿಮರಾಗಿದ್ದು ಅವರ ಹೆಸರು ದಾವೂದ್ ಎಂಬ ವಿಚಾರವನ್ನು ಮಲಿಕ್‌ ಬಹಿರಂಗಪಡಿಸಿದ್ದರು.

Kannada Bar & Bench
kannada.barandbench.com