
ರ‍್ಯಾಪಿಡೊದಂತಹ ಅಗ್ರಿಗೇಟರ್‌ಗಳು ನಿರ್ವಹಿಸುವ ಬೈಕ್ ಟ್ಯಾಕ್ಸಿಗಳು ನಗರದಲ್ಲಿ ಸಾರಿಗೆ ರಹಿತ ನಂಬರ್ ಪ್ಲೇಟ್‌ಗಳನ್ನು ಬಳಸಿಕೊಂಡು ಅಕ್ರಮವಾಗಿ ಸಂಚರಿಸುತ್ತಿದ್ದು, ಇದರಿಂದಾಗಿ ತಮ್ಮ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿ ಥಾಣೆಯ ನಾಲ್ವರು ಆಟೋ ರಿಕ್ಷಾ ಚಾಲಕರು ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ [ಅಮರ್‌ಜೀತ್ ರಾಜನಾಥ್ ಗುಪ್ತಾ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ]
ಬೈಕ್ ಟ್ಯಾಕ್ಸಿಗಳ ಅಸ್ತಿತ್ವದಿಂದಾಗಿ ಅರ್ಜಿದಾರರ ಮೂಲಭೂತ ಜೀವನೋಪಾಯದ ಹಕ್ಕು ಉಲ್ಲಂಘನೆಯಾಗಿಲ್ಲ ಎಂಬುದಾಗಿ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ನೀಲಾ ಗೋಖಲೆ ಅವರಿದ್ದ ಪೀಠ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಮನವಿ ಹಿಂಪಡೆದರು.
ವಿಚಾರಣೆ ವೇಳೆ ನ್ಯಾಯಾಲಯ "ಇದು ನಿಮ್ಮ ಜೀವನೋಪಾಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ನೀವು ಜನರನ್ನು ಕರೆದೊಯ್ಯಲು ಒಪ್ಪದೆ ಇರುವುದನ್ನು ನಿಲ್ಲಿಸಿದಾಗ ಮಾತ್ರ ಇದು ನಿಲ್ಲುತ್ತದೆ. ಟ್ಯಾಕ್ಸಿ ಚಾಲಕರು ಮತ್ತು ರಿಕ್ಷಾ ಚಾಲಕರು ಗ್ರಾಹಕರನ್ನು ಹೇಗೆ ನಡೆಸಿಕೊಳ್ಳುತ್ತಾರೆ, ಅವರ ಏರುಧ್ವನಿ, ಅವರ ಉದ್ಧಟತನವನ್ನು ನಾವು ಬೀದಿಗಳಲ್ಲಿ ನೋಡಿದ್ದೇವೆ. ನಮ್ಮಲ್ಲಿ ಪ್ರತಿಯೊಬ್ಬರೂ ಇದನ್ನು ಎದುರಿಸಿದ್ದೇವೆ" ಎಂದಿತು.
ಮುಂದುವರೆದು ಪೀಠವು "ನಿಮ್ಮ ಮೂಲಭೂತ ಹಕ್ಕಿಗೆ ಯಾವುದೇ ಧಕ್ಕೆಯಾಗಿಲ್ಲ. ಪ್ರತಿ ವರ್ಷ ಹಲವಾರು ಟ್ಯಾಕ್ಸಿಗಳು ಮಾರುಕಟ್ಟೆಗೆ ಬರುತ್ತವೆ. ನಾಳೆ, ನೀವು ಟ್ಯಾಕ್ಸಿ ಚಾಲಕರು ಓಡಾಡಲೇಬಾರದು ಅಥವಾ ಮೆಟ್ರೋ ಬರಲೇಬಾರದು ಎಂದು ಹೇಳುತ್ತೀರಿ. ನಿರ್ಧಾರ ತೆಗೆದುಕೊಳ್ಳಲು ಸರ್ಕಾರ ಸಮರ್ಥವಾದುದು" ಎಂದು ಹೇಳಿತು.
ಪ್ರಸ್ತುತ ಕಾನೂನುಗಳ ಅಡಿಯಲ್ಲಿ, ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಆರ್‌ಟಿಒ) ವಾಣಿಜ್ಯ ವಾಹನಗಳಾಗಿ ನೋಂದಾಯಿಸಲಾದ ಮತ್ತು ಹಳದಿ ನಂಬರ್ ಪ್ಲೇಟ್‌ಗಳನ್ನು ಪ್ರದರ್ಶಿಸುವ ವಾಹನಗಳನ್ನು ಮಾತ್ರ ಟ್ಯಾಕ್ಸಿಗಳಾಗಿ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದರು.
ತಾವು ರ‍್ಯಾಪಿಡೊ ಅಪ್ಲಿಕೇಶನ್ ಮೂಲಕ ರೈಡ್ ಬುಕ್ ಮಾಡಿದಾಗ, ಬಂದ ಬೈಕ್‌ಗಳು ಖಾಸಗಿ ಬೈಕ್‌ಗಳಾಗಿದ್ದು, ಸಾರಿಗೆಯೇತರ ವಾಹನಗಳನ್ನು ಸೂಚಿಸುವ ಬಿಳಿ ನಂಬರ್ ಪ್ಲೇಟ್ ಹೊಂದಿದ್ದವು” ಎಂದು ಹೇಳಿಕೊಂಡರು. ಇದು ಸಂವಿಧಾನದ 14, 19(1) (ಜಿ), ಮತ್ತು 21 ನೇ ವಿಧಿಗಳ ಅಡಿಯಲ್ಲಿ ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂಬುದು ಅವರ ವಾದವಾಗಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ, ರಾಜ್ಯ ಸರ್ಕಾರದ ಹೆಚ್ಚುವರಿ ಸರ್ಕಾರಿ ವಕೀಲ ಪ್ರಾಚಿ ಟಾಟಕೆ, ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಬೈಕ್ ಟ್ಯಾಕ್ಸಿಗಳ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ರಾಜ್ಯದ ಕ್ರಮವನ್ನು ಗಮನಿಸಿದ ನ್ಯಾಯಾಲಯವು, ಅರ್ಜಿಯನ್ನು ಪರಿಗಣಿಸಲು ಯಾವುದೇ ಕಾರಣವಿಲ್ಲ ಎಂದು ಹೇಳಿತು.
ಇದೇ ವೇಳೆ ನ್ಯಾಯಾಲಯವು,"ಸರ್ಕಾರಿ ಅಧಿಸೂಚನೆಯ ಅನುಷ್ಠಾನದಲ್ಲಿ ಯಾವುದೇ ಅಕ್ರಮವಿದ್ದರೆ, ಕ್ರಮ ಕೈಗೊಳ್ಳಲಿ" ಎಂದು ಸೂಚಿಸಿತು.