ಭೀಮಾ ಕೋರೆಗಾಂವ್‌ ಪ್ರಕರಣ: ಗೌತಮ್‌ ನವಲಾಖಗೆ ಜಾಮೀನು ನಿರಾಕರಿಸಿದ ಬಾಂಬೆ ಹೈಕೋರ್ಟ್‌

ರಾಷ್ಟ್ರೀಯ ತನಿಖಾ ದಳವು ಸಿಆರ್‌ಪಿಸಿಯ ಸೆಕ್ಷನ್‌ 167(2)ರ ಅಡಿ ಗರಿಷ್ಠ 90 ದಿನಗಳ ಒಳಗೆ ಆರೋಪ ಪಟ್ಟಿ ಸಲ್ಲಿಸಿಲ್ಲ ಎಂಬ ಆಧಾರದಲ್ಲಿ ಗೌತಮ್‌ ನವಲಾಖ ಜಾಮೀನು ಕೋರಿದ್ದರು.
Gautam Navlakha and Bombay High Court
Gautam Navlakha and Bombay High Court

ಭೀಮಾ ಕೋರೆಗಾಂವ್‌ ಪ್ರಕರಣದಲ್ಲಿ ಆರೋಪಿಯಾಗಿರುವ ಗೌತಮ್‌ ನವಲಾಖ ಅವರ ಜಾಮೀನು ಮನವಿಯನ್ನು ಬಾಂಬೆ ಹೈಕೋರ್ಟ್‌ ಸೋಮವಾರ ವಜಾಗೊಳಿಸಿದೆ. ಆರು ವಾರಗಳ ಹಿಂದೆ ಜಾಮೀನು ಮನವಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿಗಳಾದ ಎಸ್‌ ಎಸ್‌ ಶಿಂಧೆ ಮತ್ತು ಎಂ ಎಸ್‌ ಕಾರ್ನಿಕ್‌ ಅವರಿದ್ದ ವಿಭಾಗೀಯ ಪೀಠವು ತೀರ್ಪು ಪ್ರಕಟಿಸಿದೆ.

ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 167(2)ರ ಅಡಿ ಗರಿಷ್ಠ 90 ದಿನಗಳ ಒಳಗೆ ಆರೋಪ ಪಟ್ಟಿ ಸಲ್ಲಿಸಿಲ್ಲ; ಹೀಗಾದಾಗ ಆರೋಪಿಯು ಪೂರ್ವನಿಗದಿಯನ್ವಯದ ಜಾಮೀನಿಗೆ (ಡಿಫಾಲ್ಟ್‌ ಬೇಲ್‌) ಅರ್ಹರಾಗಿರುತ್ತಾರೆ ಎಂದು ನವಲಾಖಾ ಪರ ವಕೀಲರು ವಾದಿಸಿದ್ದರು.

ಆರೋಪಪಟ್ಟಿ ಸಲ್ಲಿಸದೇ ಅಥವಾ ತನಿಖೆಯ ಸಮಯದ ವಿಸ್ತರಣೆ ಮಾಡದೇ ನವಲಾಖ ಅವರ ಒಟ್ಟು ಬಂಧನ ಅವಧಿ 90 ದಿನಗಳನ್ನು ಮೀರಿದೆ. ಈ ಹಿನ್ನೆಲೆಯಲ್ಲಿ ನವಲಾಖ ಅವರು ಜಾಮೀನಿಗೆ ಅರ್ಹರು ಎಂದು ನವಲಾಖ ಅವರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಕಪಿಲ್‌ ಸಿಬಲ್‌ ವಾದ ಮಂಡನೆ ಮಾಡಿದರು. ಆದರೆ, ಮತ್ತೊಂದೆಡೆ ನವಲಾಖ ಅವರ ಗೃಹ ಬಂಧನ ಅವಧಿಯೂ ಬಂಧನ ಅವಧಿಗೆ ಸೇರುತ್ತದೆಯೇ ಎಂಬ ಪ್ರಶ್ನೆ ನ್ಯಾಯಾಲಯದ ಮುಂದೆ ಪ್ರಮುಖವಾಗಿ ಇತ್ತು. ಹಾಗಾದ ಪಕ್ಷದಲ್ಲಿ ಸಿಆರ್‌ಪಿಸಿಯ ಸೆಕ್ಷನ್‌ 167(2)ರ ಅಡಿ ಅವರು ಜಾಮೀನಿಗೆ ಅರ್ಹರಾಗಲಿದ್ದರು.

ಬಂಧನದ ಅವಧಿಯನ್ನು ಲೆಕ್ಕಹಾಕುವಾಗ 34 ದಿನಗಳ ನವಲಾಖ ಅವರ ಗೃಹ ಬಂಧನವನ್ನು ಕೈಬಿಡುವ ಮೂಲಕ ವಿಶೇಷ ಎನ್‌ಐಎ ನ್ಯಾಯಾಲಯವು ಎಡವಿದೆ ಎಂದು ಸಿಬಲ್‌ ಪ್ರತಿಪಾದಿಸಿದ್ದರು.

ಭದ್ರತಾ ನಿಗಾದಡಿ ನವಲಾಖ ಅವರು ತಮ್ಮ ಮನೆಗೆ ಸೀಮಿತವಾಗಿದ್ದರು. ನ್ಯಾಯಾಲಯದ ಆದೇಶದಂತೆ ಯಾವುದೇ ವ್ಯಕ್ತಿಯನ್ನು ಬಂಧನಕ್ಕೆ ಒಳಪಡಿಸುವ ಆದೇಶವು ನ್ಯಾಯಾಂಗ ಬಂಧನವೆಂದೇ ಪರಿಗಣಿತವಾಗುತ್ತದೆ ಎನ್ನುವ ವಾದ ಸಿಬಲ್‌ ಅವರದಾಗಿತ್ತು. “ಬಂಧನವು ಕಾನೂನಿನ ವಿಷಯವಾದರೆ, ವಶಕ್ಕೆ ಪಡೆಯುವುದು ವಾಸ್ತವದ ವಿಚಾರವಾಗಿದೆ” ಎಂದು ಸಿಬಲ್‌ ತಮ್ಮ ವಾದ ಪೂರ್ಣಗೊಳಿಸಿದ್ದರು.

Also Read
ಗೃಹ ಬಂಧನವು ಬಂಧನ ಅವಧಿಯ ಭಾಗ, ಗೌತಮ್‌ ನವಲಾಖ ಪರ ಕಪಿಲ್‌ ಸಿಬಲ್‌ ವಾದ: ತೀರ್ಪು ಕಾಯ್ದಿರಿಸಿದ ಬಾಂಬೆ ಹೈಕೋರ್ಟ್‌

ನವಲಾಖ ಅವರ ಗೃಹ ಬಂಧನವು ಬಂಧನದ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ವಿಶೇಷ ಎನ್‌ಐಎ ನ್ಯಾಯಾಲಯವು ಸರಿಯಾಗಿ ಹೇಳಿದೆ ಎಂದು ಅರ್ಜಿದಾರರ ಮನವಿಯನ್ನು ಎನ್‌ಐಎ ಪ್ರತಿನಿಧಿಸುತ್ತಿರುವ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ವಿರೋಧಿಸಿದರು. ಸಾಮಾನ್ಯವಾಗಿ ವಶಕ್ಕೆ ಪಡೆದಾಗ ಆರೋಪಿಯ ವಿಚಾರಣೆಗೆ ಅವಕಾಶವಿರುತ್ತದೆ. ಆದರೆ, ಗೃಹ ಬಂಧನದ ಸಂದರ್ಭದಲ್ಲಿ ನವಲಾಖ ಅವರು ವಿಚಾರಣೆ ಸಾಧ್ಯವಾಗುವುದಿಲ್ಲ ಎಂದರು.

ನವಲಾಖ ಅವರ ಬಂಧನವನ್ನು ವಜಾಗೊಳಿಸಿದ್ದ ದೆಹಲಿ ಹೈಕೋರ್ಟ್‌ ಆದೇಶವನ್ನು ಉಲ್ಲೇಖಿಸಿರುವ ರಾಜು ಅವರು, ಆದೇಶ ವಜಾಗೊಳಿಸಿದ ಬಳಿಕ ನವಲಾಖ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಇದು ಅವರು ಬಂಧನದಲ್ಲಿರಲಿಲ್ಲ ಎನ್ನುವುದನ್ನು ಸೂಚಿಸುತ್ತದೆ. ಸಿಆರ್‌ಪಿಸಿ ಸೆಕ್ಷನ್‌ 167(2)ರ ಅಡಿ ಗೃಹ ಬಂಧನವು ಬಂಧನವಲ್ಲ ಎಂದರು. ಮುಂದುವರೆದ, ಹಾಗಾಗಿ ನವಲಾಖಾ, "ಅವರು (ಈ ವೇಳೆ) ವಶದಲ್ಲೂ ಇರಲಿಲ್ಲ ಅಥವಾ ಜಾಮೀನಿನ ಮೇಲೆ ಹೊರಗೂ ಇರಲಿಲ್ಲ, ಅವರು ಸ್ವತಂತ್ರವಾಗಿದ್ದರು” ಎಂದು ರಾಜು ವಾದಿಸಿದ್ದರು.

Related Stories

No stories found.
Kannada Bar & Bench
kannada.barandbench.com