ಅಕ್ರಮವಾಗಿ ಸಾಗಣೆ ಮಾಡುತ್ತಿದ್ದಾಗ ಜಪ್ತಿ ಮಾಡಲಾದ 14 ಎಮ್ಮೆಗಳನ್ನು ತಮ್ಮ ವಶದಲ್ಲಿಯೇ ಉಳಿಸಿಕೊಳ್ಳಲು ಕೋರಿದ್ದ ನಂದೂರ್‌ಬಾರ್ ಮೂಲದ ಗೋಶಾಲೆಯ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠವು ಈಚೆಗೆ ತಿರಸ್ಕರಿಸಿದೆ.
ಜಾನುವಾರುಗಳನ್ನು ಮತ್ತು ಅವುಗಳನ್ನು ಸಾಗಿಸಲು ಬಳಕೆ ಮಾಡಿದ್ದ ಟ್ರಕ್ ಅನ್ನು ಮಾಲೀಕತ್ವ ಹೊಂದಿರುವ ಹಕ್ಕುದಾರರು ವಿಚಾರಣೆಯಲ್ಲಿ ಸಾಬೀತುಪಡಿಸಿ ಸ್ವಾಧೀನ ಪಡೆದುಕೊಳ್ಳಲು ಅರ್ಹರಾಗಿದ್ದಾರೆ ಎಂದು ನ್ಯಾಯಮೂರ್ತಿ ವೈ ಜಿ ಖೋಬ್ರಗದೆ ಆದೇಶಿಸಿದ್ದಾರೆ.
ಪ್ರಾಣಿಗಳ ಮೇಲಿನ ಕ್ರೌರ್ಯ ನಿಷೇಧ ಕಾಯಿದೆಯ ನಿಬಂಧನೆ ಮತ್ತು ಸಿಆರ್‌ಪಿಸಿ ಸೆಕ್ಷನ್ 457ರ ಅನ್ವಯ ಹಾಗೂ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಜಪ್ತಿ ಮಾಡಿರುವ ಜಾನುವಾರುಗಳು ಮತ್ತು ಅವುಗಳ ಸಾಗಣೆಗೆ ಬಳಕೆ ಮಾಡಿದ್ದ ಟ್ರಕ್ ಅವುಗಳ ಮಾಲೀಕರಿಗೆ ದಕ್ಕಲಿದೆ. ಇದು ಕಾನೂನುಬಾಹಿರವಾಗಲಿ, ನ್ಯಾಯಕ್ಕೆ ವಿರುದ್ಧವಾಗಲಿ ಅಲ್ಲ” ಎಂದು ನ್ಯಾಯಾಲಯ ಹೇಳಿದೆ.
ಅಲ್ಲದೇ, ಮಾಲ್ತಿದೇವಿ ಮೇವಾಲಾಲ್‌ಜಿ ಜೈಸ್ವಾಲ್‌ಜಿ ಗೋಶಾಲೆಯು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ಈ ಹಿಂದೆ ಅದೇ ಗೋಶಾಲೆಯ ವಶಕ್ಕೆ ಜಪ್ತಿ ಮಾಡಿದ್ದ ಗೋವುಗಳನ್ನು ನೀಡಿ ನ್ಯಾಯಾಲಯವು ಮಧ್ಯಂತರ ಆದೇಶ ಮಾಡಿತ್ತು.
ಮಹಾರಾಷ್ಟ್ರದ ನಂದೂರ್‌ಬಾರ್‌ನ ವಿಸರ್ಬಾಡಿ ಠಾಣೆಯ ಪೊಲೀಸರು 2023ರ ಆಗಸ್ಟ್ 28ರಂದು ಭದ್ವಾಡ್ ಗ್ರಾಮದ ಬಳಿ ತಲೋಡಾದಿಂದ ಮಾಲೇಗಾಂವ್‌ಗೆ 14 ಎಮ್ಮೆಗಳನ್ನು ಅನುಮತಿ ಇಲ್ಲದೇ ಸಾಗಿಸುತ್ತಿದ್ದ ಟ್ರಕ್ ಜಪ್ತಿ ಮಾಡಿದ್ದರು. ಇವುಗಳ ಮಧ್ಯಂತರ ಕಸ್ಟಡಿಯನ್ನು ಮಾಲ್ತಿದೇವಿ ಗೋಶಾಲೆಗೆ ನೀಡಲಾಗಿತ್ತು. ಆನಂತರ ಎಮ್ಮೆಗಳ ಮೂಲ ಮಾಲೀಕರು ತಾವು ಕಾನೂನುಬದ್ಧ ಮಾಲೀಕರು ಎಂದು ಸಲ್ಲಿಸಿದ್ದ ಅರ್ಜಿಯನ್ನು ನವಪುರದ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪುರಸ್ಕರಿಸಿದ್ದರು. ಅಲ್ಲದೇ, ಇದುವರೆಗೆ ಅವುಗಳನ್ನು ನೋಡಿಕೊಳ್ಳಲು ತಗುಲಿರುವ ವೆಚ್ಚವನ್ನು ಗೋಶಾಲೆಗೆ ಪಾವತಿಸುವಂತೆ ನ್ಯಾಯಾಲಯವು ಆದೇಶಿಸಿತ್ತು. ಈ ಆದೇಶವನ್ನು ನಂದೂರ್‌ಬಾರ್‌ನ ಹೆಚ್ಚುವರಿ ಸತ್ರ ನ್ಯಾಯಾಧೀಶರು ಎತ್ತಿ ಹಿಡಿದಿದ್ದರು. ಇದನ್ನು ಪ್ರಶ್ನಿಸಿ ಗೋಶಾಲೆಯು ಹೈಕೋರ್ಟ್ ಮೆಟ್ಟಿಲೇರಿತ್ತು.