ಎಸ್‌ಸಿ, ಎಸ್‌ಟಿಯೇತರ ವಿಕಲಚೇತನರು ನಾಗರಿಕ ಸೇವಾ ಪರೀಕ್ಷೆ ಬರೆಯುವ ಯತ್ನದ ಮಿತಿ ತೆರವುಗೊಳಿಸದ ಬಾಂಬೆ ಹೈಕೋರ್ಟ್

ಅಂಗವಿಕಲ ವರ್ಗದಡಿ ಬರುವ ಎಸ್‌ಸಿ ಎಸ್‌ಟಿ ಅಭ್ಯರ್ಥಿಗಳಿಗೆ ಅನಿಯಮಿತವಾಗಿ ಪರೀಕ್ಷೆ ಬರೆಯಲು ಅವಕಾಶ ಇರುವುದರಿಂದ ತಮಗೆ ವಿಧಿಸಿರುವ ನಿರ್ಬಂಧ ತಾರತಮ್ಯ ಉಂಟುಮಾಡುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.
Bombay High Court
Bombay High Court
Published on

ಸಾಮಾನ್ಯ ವರ್ಗ, ಆರ್ಥಿಕ ದುರ್ಬಲ ವರ್ಗ (ಇಡಬ್ಲ್ಯೂಎಸ್‌) ಹಾಗೂ ಇತರ ಹಿಂದುಳಿದ ವರ್ಗಗಳಡಿ (ಒಬಿಸಿ) ಬರುವ ಗುರುತರ ಅಂಗವೈಕಲ್ಯ (ಪಿಡಬ್ಲ್ಯೂಬಿಡಿ) ಹೊಂದಿರುವ ವ್ಯಕ್ತಿಗಳಿಗೆ ಒಂಬತ್ತು ಬಾರಿ ಪರೀಕ್ಷೆ ಬರೆಯಲಷ್ಟೇ ಅನುಮತಿಸುವ ನಾಗರಿಕ ಸೇವೆಗಳ ಪರೀಕ್ಷಾ ನಿಯಮಾವಳಿ- 2024ರ ನಿಯಮ 3ಅನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಈಚೆಗೆ ವಜಾಗೊಳಿಸಿದೆ [ಧರ್ಮೇಂದ್ರ ಕುಮಾರ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಅಂಗವಿಕಲ ವರ್ಗದಡಿ ಬರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್‌ಸಿ/ಎಸ್‌ಟಿ) ಅಭ್ಯರ್ಥಿಗಳಿಗೆ ಅನಿಯಮಿತವಾಗಿ ಪರೀಕ್ಷೆ ಬರೆಯಲು ಅವಕಾಶ ಇರುವುದರಿಂದ ತಮಗೆ ವಿಧಿಸಿರುವ ನಿರ್ಬಂಧ ತಾರತಮ್ಯ ಉಂಟುಮಾಡುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.

Also Read
ಎಲ್ಲಾ ವಿಕಲಚೇತನ ಅಭ್ಯರ್ಥಿಗಳೂ ಲಿಪಿಕಾರರನ್ನು ಆಯ್ಕೆ ಮಾಡಿಕೊಳ್ಳಲು ಸುಪ್ರೀಂ ಕೋರ್ಟ್‌ ಅನುಮತಿ

ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗಗಳಲ್ಲಿ ಬರುವ ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳ ನಡುವಿನ ವರ್ಗೀಕರಣವು ಮನಸೋಇಚ್ಛೆಯಿಂದ ಕೂಡಿರುವಂಥದ್ದಲ್ಲ ಏಕೆಂದರೆ ಇವು ಸಂವಿಧಾನದ ಅಡಿಯಲ್ಲಿ ಪ್ರತ್ಯೇಕ ಮಾನದಂಡಗಳನ್ನು ಹೊಂದಿರುವ ವಿಭಿನ್ನ ವರ್ಗಗಳಾಗಿವೆ ಎಂದು ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಮತ್ತು ಅಶ್ವಿನ್ ಡಿ ಭೋಬೆ ಅವರಿದ್ದ ಪೀಠ ತಿಳಿಸಿತು.

ನಾಗರಿಕ ಸೇವಾ ಪರೀಕ್ಷಾ ನಿಯಮಾವಳಿ 2024ರ ನಿಯಮ 3ರ ವಿರುದ್ಧ ಅರ್ಜಿಯಲ್ಲಿ ಎತ್ತಲಾದ ಸವಾಲು ವಿಫಲವಾಗಬೇಕು ಎಂಬ ತೀರ್ಮಾನಕ್ಕೆ ನಾವು ಬಂದಿದ್ದೇವೆ. ಏಕೆಂದರೆ ಅರ್ಜಿದಾರರು ಪಿಡಬ್ಲ್ಯೂಬಿಡಿಯಲ್ಲಿ ಒಬಿಸಿ ವರ್ಗಕ್ಕೆ ಸೇರಿದವರು ಎಂಬ ಕಾರಣದಿಂದಾಗಿ, ಅವರು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗೆ ಲಭ್ಯವಿರುವ ಅನಿಯಮಿತವಾಗಿ ಪರೀಕ್ಷೆಯ ಬರೆಯುವ ಯತ್ನಗಳಿಗೆ ಅರ್ಹರಾಗುವುದಿಲ್ಲ ಮತ್ತು ಪಿಡಬ್ಲ್ಯೂಬಿಡಿ ವರ್ಗದಡಿ ಬರುವ ಎಸ್‌ಸಿ/ಎಸ್‌ಟಿ ಅಭ್ಯರ್ಥಿ ಒಬಿಸಿ ಅಭ್ಯರ್ಥಿಗಿಂತ ಭಿನ್ನ ಸ್ಥಾನಮಾನ ಹೊಂದಿದ್ದಾರೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಮುಂಬೈ ನಿವಾಸಿ 38 ವರ್ಷದ ವಿಕಲಚೇತನ ಧರ್ಮೇಂದ್ರ ಕುಮಾರ್ ಅರ್ಜಿ ಸಲ್ಲಿಸಿದ್ದರು.  ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಒಂಬತ್ತು ಬಾರಿ ವಿಫಲರಾಗಿದ್ದ ಅವರು  ಸಾಮಾನ್ಯ, ಇಡಬ್ಲ್ಯೂಎಸ್ ಮತ್ತು ಒಬಿಸಿ ವರ್ಗಗಳಲ್ಲಿ ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ಒಂಬತ್ತು ಬಾರಿ ಪರೀಕ್ಷೆ ಬರೆಯಲಷ್ಟೇ ಇರುವ ಮಿತಿಯನ್ನು ಪ್ರಶ್ನಿಸಿದ್ದರು.

Also Read
ಶೇ 40ಕ್ಕಿಂತ ಹೆಚ್ಚು ಅಂಗವೈಕಲ್ಯ ಎಂಬಿಬಿಎಸ್ ಪ್ರವೇಶಕ್ಕೆ ಅಡ್ಡಿಯಾಗದು: ಸುಪ್ರೀಂ ಕೋರ್ಟ್

ಪಿಡಬ್ಲ್ಯೂಬಿಡಿ ವರ್ಗದ ಅಡಿಯಲ್ಲಿ ತಮ್ಮ ವಯಸ್ಸಿನ ಸಡಿಲಿಕೆಗೆ ಅರ್ಹತೆ ಇದ್ದರೂ, ತಮ್ಮ ಪರೀಕ್ಷೆ ಬರೆಯುವ ಯತ್ನಗಳಿಗೆ ಮಿತಿ ಹೇರುವ ಈ ನಿಯಮ ತಾರತಮ್ಯದಿಂದ ಕೂಡಿದೆ ಎಂದು ಅವರು ಪ್ರತಿಪಾದಿಸಿದ್ದರು. ಎಸ್‌ಸಿ/ಎಸ್‌ಟಿ ವರ್ಗದ ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ನೀಡಲಾದಂತೆಯೇ ಸಾಮಾನ್ಯ, ಇಡಬ್ಲ್ಯೂಸ್‌ ಹಾಗೂ ಒಬಿಸಿ ಅಭ್ಯರ್ಥಿಗಳಿಗೂ ಅನಿಯಮಿತವಾಗಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವಂತೆ ಕೋರಿದ್ದರು.   

ಆದರೆ ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಷ್ಟೇ ಸಂಖ್ಯೆಯ ಪ್ರಯತ್ನಗಳಿಗೆ ಅರ್ಹರಾಗಿರಬೇಕು ಎಂಬ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂದ ನ್ಯಾಯಾಲಯ ಅಂತಿಮವಾಗಿ ಅರ್ಜಿ ವಜಾಗೊಳಿಸಿತು.

[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Dharmendra_Kumar_v_UOI
Preview
Kannada Bar & Bench
kannada.barandbench.com