ಪಾಕಿಸ್ತಾನದಲ್ಲಿ ತನ್ನ ಬಗ್ಗೆ ವೆಬ್ ಸರಣಿ: ಮುಂಬೈ ನ್ಯಾಯಾಲಯದಲ್ಲಿ ಮಾಲೆಗಾಂವ್ ಪ್ರಕರಣದ ಆರೋಪಿ ಪುರೋಹಿತ್ ಅಳಲು

ಈ ಮಧ್ಯೆ ಪ್ರಕರಣದ ಪ್ರಮುಖ ಆರೋಪಿ, ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ʼಎನ್ಐಎ ಉದ್ದೇಶಪೂರ್ವಕವಾಗಿ ವಿಚಾರಣೆಯನ್ನು ವಿಳಂಬಗೊಳಿಸುತ್ತಿದ್ದು ವಿಚಾರಣೆಯನ್ನು ತ್ವರಿತಗೊಳಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
Col Purohit and Mumbai Sessions Court
Col Purohit and Mumbai Sessions Court
Published on

ಮಾಧ್ಯಮಗಳು ನೀಡಿದ ಮಾಹಿತಿ ಆಧರಿಸಿ ಪಾಕಿಸ್ತಾನದಲ್ಲಿ ತನ್ನ ಬಗ್ಗೆ ವೆಬ್‌ ಸರಣಿ ಪ್ರಸಾರ ಮಾಡಲಾಗುತ್ತಿದೆ ಎಂದು ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್‌ ಮುಂಬೈ ನ್ಯಾಯಾಲಯದಲ್ಲಿ ಮಂಗಳವಾರ ಅಳಲು ತೋಡಿಕೊಂಡಿದ್ದಾರೆ.

ಸೇವೆಯಲ್ಲಿರುವ ಸೇನಾಧಿಕಾರಿಯಾದ ಅವರು ವೆಬ್‌ ಸರಣಿಗೆ ಸಂಬಂಧಿಸಿದ ವೀಡಿಯೊ ತುಣುಕೊಂದನ್ನು ಎನ್‌ಐಎ ವಿಶೇಷ ನ್ಯಾಯಾಧೀಶರಿಗೆ ತೋರಿಸಿದರು. ಮಾಧ್ಯಮಗಳು ಹಂಚಿಕೊಳ್ಳುತ್ತಿರುವ ಮಾಹಿತಿಯನ್ನು ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಸಂಘಟನೆಗಳು ದುರುಪಯೋಗಪಡಿಸಿಕೊಳ್ಳಬಹುದು. ಹೀಗಾಗಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಪ್ರಕರಣದ ಗೌಪ್ಯ ವಿಚಾರಣೆ ನಡೆಸಬೇಕು ಮತ್ತು ದೇಶದ ದೊಡ್ಡಮಟ್ಟದ ಹಿತಕ್ಕಾಗಿ ನ್ಯಾಯಾಲಯದ ಒಳಗೆ ಮಾಧ್ಯಮಗಳಿಗೆ ಪ್ರವೇಶ ನೀಡಬಾರದು ಎಂದಿದ್ದಾರೆ.

“ದೇಶವಿರೋಧಿ ಅವಕಾಶವಾದಿಗಳು ವಿಚಾರಣೆಯನ್ನು ಹೈಜಾಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ, ಆ ಮೂಲಕ ನ್ಯಾಯಯುತ ವಿಚಾರಣೆ ಎದುರಿಸುವ ತಮ್ಮ ಹಕ್ಕಿನ ಮೇಲೆ ಪರಿಣಾಮ ಬೀರುತ್ತಿದ್ದಾರೆ. ಮಾಧ್ಯಮಗಳ ಮೂಲಕ ತನ್ನ ವಿರುದ್ಧ ಇಡೀ ಸ್ಫೋಟ ಪ್ರಕರಣವನ್ನು ಮರುಸೃಷ್ಟಿಸಲಾಗಿದೆ. ತಾವಾಗಲೀ ತಮ್ಮ ವಕೀಲಾರಾಗಲೀ ಯಾವುದೇ ಸಮಯದಲ್ಲಿ ಮಾಧ್ಯಮಗಳೊಂದಿಗೆ ಸಂವಾದ ನಡೆಸಿಲ್ಲ. ತನ್ನ ಬಗ್ಗೆ ಗೌಪ್ಯ ವರದಿಗಳು ಮಾಧ್ಯಮಗಳಿಗೆ ಸೋರಿಕೆಯಾಗಿರಬಹುದು. ನನ್ನ ಸಂಗತಿಗಳನ್ನು ಬಹಿರಂಗಪಡಿಸಲಾಗಿದೆ. ಇದು ದೇಶಕ್ಕೆ ಒಳಿತಲ್ಲ” ಎಂದು ಮಂಗಳವಾರದ ವಿಚಾರಣೆ ವೇಳೆ ತಿಳಿಸಿದ್ದಾರೆ.

Also Read
ಸೇನಾಧಿಕಾರಿ ಪುರೋಹಿತ್‌ಗೆ ಮಾಲೆಗಾಂವ್ ಸ್ಫೋಟದ ಬಗ್ಗೆ ತಿಳಿದಿದ್ದರೆ ಅದನ್ನೇಕೆ ತಡೆಯಲಿಲ್ಲ? ಬಾಂಬೆ ಹೈಕೋರ್ಟ್ ಪ್ರಶ್ನೆ

ಎನ್‌ಐಎ ಪರ ವಾದ ಮಂಡಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವಿನಾಶ್ ರಸಲ್ ಅವರು ಗೌಪ್ಯ ವಿಚಾರಣೆಗೆ ಕೋರಿ ಸಲ್ಲಿಸಿದ ಎರಡನೇ ಅರ್ಜಿಯಾಗಿದೆ ಎಂದು ತಿಳಿಸಿದರು.ಈ ಮೊದಲು ನ್ಯಾಯಾಲಯ ಗೌಪ್ಯ ವಿಚಾರಣೆಗೆ ಒಪ್ಪಿರಲಿಲ್ಲ ಎಂದರು.

ವಿಚಾರಣಾ ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಯಾವುದೇ ನಿರ್ದಿಷ್ಟ ಉದಾಹರಣೆಯನ್ನು ಪುರೋಹಿತ್ ಎತ್ತಿ ತೋರಿಸಿಲ್ಲ ಎಂದು ತಿಳಿಸಿದ ಪ್ರಕರಣದ ಸಹ ಆರೋಪಿ ಸಮೀರ್ ಕುಲಕರ್ಣಿ ಪುರೋಹಿತ್‌ ಮನವಿಯನ್ನು ವಿರೋಧಿಸಿದರು. ವಾದಗಳನ್ನು ಆಲಿಸಿದ ಬಳಿಕ ನ್ಯಾಯಾಲಯ ತೀರ್ಪು ಕಾಯ್ದಿರಿಸಿತು.

ಈ ಮಧ್ಯೆ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಎನ್‌ಐಎ ಉದ್ದೇಶಪೂರ್ವಕವಾಗಿ ವಿಚಾರಣೆಯನ್ನು ವಿಳಂಬಗೊಳಿಸುತ್ತಿದ್ದು ವಿಚಾರಣೆಯನ್ನು ತ್ವರಿತಗೊಳಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪುರೋಹಿತ್‌ ಅರ್ಜಿಯೊಡನೆ ಈ ಅರ್ಜಿಯ ಕುರಿತೂ ಎನ್‌ಐಎ ನ್ಯಾಯಾಧೀಶರು ನಿರ್ಧರಿಸಲಿದ್ದಾರೆ.

Kannada Bar & Bench
kannada.barandbench.com