ಅರ್ನಾಬ್ ಜಾಮೀನು ಪ್ರಕರಣ: “ನಿಮಗೆ ಪರಿಹಾರ ನೀಡಿದರೆ, ಎಲ್ಲರೂ ಹೈಕೋರ್ಟ್‌ಗೆ ಲಗ್ಗೆ ಇಡುತ್ತಾರೆ” ಎಂದ ಬಾಂಬೆ ಹೈಕೋರ್ಟ್

ಗೋಸ್ವಾಮಿ ಅವರಿಗೆ ಮಧ್ಯಂತರ ಜಾಮೀನು ನಿರಾಕರಿಸಿರುವ ಬಾಂಬೆ ಹೈಕೋರ್ಟ್, ಸೆಷನ್ಸ್‌ ನ್ಯಾಯಾಲಯದಲ್ಲಿ ಸಿಆರ್‌ಪಿಸಿ ಸೆಕ್ಷನ್ 439ರ ಅಡಿ ಜಾಮೀನು ಪಡೆಯಲು ಹೈಕೋರ್ಟ್ ಆದೇಶ ಅಡ್ಡಿಯಾಗಿದೆ ಎಂದು ಭಾವಿಸಬಾರದು ಎಂದು ಹೇಳಿದೆ.
Arnab Goswami, Bombay High Court
Arnab Goswami, Bombay High Court
Published on

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ರಿಪಬ್ಲಿಕ್‌ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್‌ ಗೋಸ್ವಾಮಿ ಅವರ ಹೇಬಿಯಸ್‌ ಕಾರ್ಪಸ್‌ ಮತ್ತು ಜಾಮೀನು ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಶನಿವಾರ ಬಾಂಬೆ ಹೈಕೋರ್ಟ್‌ ಕಾಯ್ದಿರಿಸಿದೆ.

ಪ್ರಕರಣದಲ್ಲಿ ಉಳಿದ ಪಕ್ಷಕಾರರ ವಾದವನ್ನು ಆಲಿಸಲು ಸಮ್ಮತಿಯನ್ನು ಶುಕ್ರವಾರ ಪಡೆದಿದ್ದ ನ್ಯಾಯಮೂರ್ತಿಗಳಾದ ಎಸ್‌ ಎಸ್‌ ಶಿಂಧೆ ಮತ್ತು ಎಂ ಎಸ್‌ ಕಾರ್ನಿಕ್‌ ಅವರಿದ್ದ ಪೀಠವು ಶನಿವಾರ ಪ್ರಕರಣದ ವಿಚಾರಣೆ ನಡೆಸಿತು.

ಗೋಸ್ವಾಮಿ ಅವರಿಗೆ ಮಧ್ಯಂತರ ಜಾಮೀನು ನಿರಾಕರಿಸಿರುವ ಬಾಂಬೆ ಹೈಕೋರ್ಟ್‌, ಸೆಷನ್ಸ್‌ ನ್ಯಾಯಾಲಯದಲ್ಲಿ ಕ್ರಿಮಿನಲ್ ಅಪರಾಧ ದಂಡ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್‌ 439ರ ಅಡಿ ಜಾಮೀನು ಪಡೆಯಲು ಹೈಕೋರ್ಟ್‌ ಆದೇಶ ಅಡ್ಡಿಯಾಗಿದೆ ಎಂದು ಭಾವಿಸಬಾರದು ಎಂದು ಹೇಳಿದೆ. ನಿರ್ದಿಷ್ಟ ಕೆಳಹಂತದ ನ್ಯಾಯಾಲಯಗಳನ್ನು ಸಂಪರ್ಕಿಸಿದರೆ ಅವುಗಳು ನಾಲ್ಕೇ ದಿನಗಳಲ್ಲಿ ನಿರ್ಧಾರ ಕೈಗೊಳ್ಳುತ್ತವೆ ಎಂದು ಹೈಕೋರ್ಟ್‌ ಹೇಳಿತು.

ರಾಜ್ಯ ಸರ್ಕಾರ ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಅಮಿತ್‌ ದೇಸಾಯಿ ಅವರು ಗೋಸ್ವಾಮಿ ಅವರ ಬಿಡುಗಡೆಗೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು ನೇರವಾಗಿ ಒಪ್ಪಿಕೊಂಡಿರುವ ಹೈಕೋರ್ಟ್‌ ಕ್ರಮವನ್ನು ವಿರೋಧಿಸಿ ವಾದಿಸಿದರು. ವಿಶಿಷ್ಟ ಸನ್ನಿವೇಶ ಹೊರತುಪಡಿಸಿ ನ್ಯಾಯಾಲಯಗಳ ಶ್ರೇಣಿಗೆ ಅಡ್ಡಿಪಡಿಸಬಾರದು ಎಂದು ಹೇಳಿದರು.

“ಮಧ್ಯಂತರ ಪರಿಹಾರ ನೀಡುವಂಥ ಪ್ರಕರಣ ಇದಲ್ಲ. ಇದಕ್ಕೆ ವಿಚಾರಣಾಧೀನ ನ್ಯಾಯಾಲಯದಲ್ಲಿ ಪರಿಹಾರವಿದೆ. ಜಾಮೀನು ನೀಡಬಹುದು ಎಂದು ವಿಚಾರಣಾಧೀನ ನ್ಯಾಯಾಲಯಕ್ಕೆ ಅನ್ನಿಸಿದಾಗ ಅವರಿಗೆ ಅವರಿಗೆ ಜಾಮೀನು ದೊರೆಯುತ್ತದೆ. ಈ ವ್ಯಾಪ್ತಿಗೆ ಕೈಹಾಕಿದರೆ ಅರ್ಜಿಗಳ ಪ್ರವಾಹವೇ ಹರಿದುಬರಲಿದೆ” ಎಂದು ದೇಸಾಯಿ ಹೇಳಿದರು.

ಪ್ರಕರಣವು ನ್ಯಾಯಾಲಯದ ವಿಚಾರಣೆಗೆ ಒಳಪಟ್ಟಿರುವುದರಿಂದ ಅದರ ಬಗ್ಗೆ ಗೋಸ್ವಾಮಿ ಅವರು ಸರ್ಕಾರವು ದ್ವೇಷದಿಂದ ನಡೆದುಕೊಳ್ಳುತ್ತಿದೆ ಎಂದು ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದಿರುವ ದೇಸಾಯಿ ಅವರು ತನಿಖೆಯ ಮರು ಆರಂಭಕ್ಕೆ ಸಮಂಜಸವಾದ ಪ್ರಕ್ರಿಯೆ ಅನುಸರಿಸಲಾಗಿದೆ ಎಂದು ಹೇಳಿದರು.

ಪ್ರಕರಣದಲ್ಲಿ ಆರೋಪಿಗಳಾಗಿರುವ ನಿತೇಶ್‌ ಶಾರ್ದಾ ಹಾಗೂ ಫಿರೋಜ್‌ ಶೇಖ್‌ ಅವರ ವಕೀಲರ ವಾದಗಳನ್ನೂ ನ್ಯಾಯಾಲಯ ಇಂದು ಆಲಿಸಿತು. ನಿತೇಶ ಪರ ವಕೀಲ ವಿಜಯ್‌ ಅಗರ್ವಾಲ್‌ ಮತ್ತು ಫೀರೋಜ್‌ ಪರ ವಕೀಲ ನಿಖಿಲ್‌ ಮೆಂಗ್ಡೆ ವಾದಿಸಿದರು.

ಅಗರ್ವಾಲ್‌ ಅವರು ವಾದಿಸುತ್ತಿದ್ದ ಸಂದರ್ಭದಲ್ಲಿ ನ್ಯಾಯಪೀಠವು ಹೀಗೆ ಕೇಳಿತು:

“(ಇತರೆ) ಪರಿಹಾರಗಳು ಲಭ್ಯವಿರುವಾಗ ನಾವು ಪರಿಹಾರ ನೀಡಿದರೆ ಎಲ್ಲರೂ ಹೈಕೋರ್ಟ್‌ಗೆ ಬರುತ್ತಾರೆ ಎಂದೆನಿಸುವುದಿಲ್ಲವೇ? ಸೆಕ್ಷನ್‌ 439 ಅಸ್ತಿತ್ವದಲ್ಲಿರುವಾಗ, ರಿಟ್‌ ಅರ್ಜಿಯಡಿ ಏಕೆ ಬರಬೇಕು? ಇದು ತಪ್ಪು ಸಂದೇಶವನ್ನು ರವಾನಿಸುತ್ತದೆ. ಇದರಿಂದ ಕೆಳಹಂತದ ನ್ಯಾಯಾಲಯಗಳ ವ್ಯಾಪ್ತಿಗೆ ಚ್ಯುತಿಯಾಗುತ್ತದೆ.”
ಬಾಂಬೆ ಹೈಕೋರ್ಟ್‌

ತಂದೆಯ ಆತ್ಮಹತ್ಯೆ ಪ್ರಕರಣದ ಮರು ವಿಚಾರಣೆ ಕೋರಿರುವ ಮತ್ತು ಹಿಂದೆ ಪ್ರಕರಣದ ವಿಚಾರಣೆಯನ್ನು ದಯನೀಯವಾಗಿ ನಡೆಸಿರುವ ಪೊಲೀಸ್‌ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಕೋರಿರುವ ಅದ್ನ್ಯಾ ನಾಯಕ್‌ ಪರ ವಕೀಲ ಸುಬೋಧ್‌ ದೇಸಾಯಿ ವಾದಿಸಿರು.

ಅನ್ವಯ್‌ ನಾಯಕ್‌ ಪತ್ನಿ ಹಾಗೂ ಪ್ರಕರಣದಲ್ಲಿ ಮಾಹಿತಿದಾರರಾಗಿರುವ ಅಕ್ಷತಾ ನಾಯಕ್‌ ಅವರನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಶಿರೀಷ್‌ ಗುಪ್ತೆ ಅವರು ಗೋಸ್ವಾಮಿ ಅವರಿಗೆ ಮೂರು ದಿನಗಳ ವಿಚಾರಣೆ ನೀಡುವುದರ ಹಿಂದೆ ಯಾವ ತುರ್ತಿದೆ ಎಂದು ಪ್ರಶ್ನಿಸಿದರು. ಅರ್ನಾಬ್‌ಗೆ ಜಾಮೀನು ನೀಡಿದರೆ ಸಂತ್ರಸ್ತರ ಕುಟುಂಬಸ್ಥರಿಗೆ ಸಮಸ್ಯೆಯಾಗುವ ಆತಂಕ ವ್ಯಕ್ತಪಡಿಸಿದರು.

Also Read
ಅರ್ನಾಬ್ ಸೆರೆವಾಸ ಮುಂದುವರಿಕೆ; ಮಹಾರಾಷ್ಟ್ರ ಸರ್ಕಾರ ದ್ವೇಷದ ನಡೆ ಇರಿಸಿರುವುದು ಸ್ಪಷ್ಟ: ಹಿರಿಯ ವಕೀಲ ಸಾಳ್ವೆ

ಗೋಸ್ವಾಮಿ ಅವರ ಪರವಾಗಿ ಹಿರಿಯ ವಕೀಲ ಹರೀಶ್‌ ಸಾಳ್ವೆ ಅವರು ಹೆಚ್ಚುವರಿ ವಾದ ಮನವಿ ಸಲ್ಲಿಸಿದರು. ಅಲ್ಲದೇ ತಮ್ಮ ಕಕ್ಷಿದಾರರಿಗೆ ಜಾಮೀನು ನೀಡುವಂತೆ ಕೋರಿದರು. ಸಂವಿಧಾನದ 32ನೇ ವಿಧಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಅಧಿಕಾರ ಇರುವಂತೆ 226ನೇ ವಿಧಿಯಲ್ಲಿ ಹೈಕೋರ್ಟ್‌ಗಳಿಗೆ ಸಮಾನ ಅಧಿಕಾರವಿದೆ ಎಂದರು.

ಇತರೆ ಪಕ್ಷಕಾರರು ಸಲ್ಲಿಸಿರುವ ದಾಖಲೆಗಳು ಮತ್ತು ವಾದಗಳನ್ನು ಪರಿಗಣಿಸದೇ ಆದೇಶ ಹೊರಡಿಸಲಾಗದು ಎಂದು ಹೇಳಿದ ಪೀಠವು ಆದೇಶ ಕಾಯ್ದಿರಿಸಿ, ಪಕ್ಷಕಾರರಿಗೆ ಪ್ರತಿಕ್ರಿಯೆ ದಾಖಲಿಸಲು ನಾಲ್ಕು ವಾರಗಳ ಕಾಲಾವಕಾಶ ಮಂಜೂರು ಮಾಡಿತು.

Kannada Bar & Bench
kannada.barandbench.com