ಅರ್ನಾಬ್ ಸೆರೆವಾಸ ಮುಂದುವರಿಕೆ; ಮಹಾರಾಷ್ಟ್ರ ಸರ್ಕಾರ ದ್ವೇಷದ ನಡೆ ಇರಿಸಿರುವುದು ಸ್ಪಷ್ಟ: ಹಿರಿಯ ವಕೀಲ ಸಾಳ್ವೆ

“ನನ್ನ ಕಕ್ಷಿದಾರರು ಶೇ.90ಕ್ಕೂ ಹೆಚ್ಚು ಹಣವನ್ನು ಸಂದಾಯ ಮಾಡಿದ್ದಾರೆ. ಅರ್ನಾಬ್ ಗೋಸ್ವಾಮಿ ಹಾಗೂ ಅನ್ವಯ್ ನಾಯಕ್ ಅವರ ನಡುವೆ ಯಾವುದೇ ವೈಯಕ್ತಿ ಸಂಬಂಧವಿಲ್ಲ. ನಮಗೆ ಆತ್ಮಹತ್ಯೆಯ ಹಿಂದಿನ ನಿಗೂಢ ಸನ್ನಿವೇಶಗಳ ಬಗ್ಗೆ ತಿಳಿದಿಲ್ಲ.”
Arnab Goswami
Arnab Goswami
Published on

ಒಳಾಂಗಣ ವಿನ್ಯಾಸಕಾರ ಅನ್ವಯ್‌ ನಾಯಕ್‌ ಮತ್ತು ಅವರ ತಾಯಿ ಕುಮುದಾ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಎರಡು ದಿನಗಳ ಹಿಂದೆ ಬಂಧನಕ್ಕೆ ಒಳಗಾಗಿ ನ್ಯಾಯಾಂಗ ಬಂಧನದಲ್ಲಿರುವ ರಿಪಬ್ಲಿಕ್‌ ಟಿವಿ ಪ್ರಧಾನ ಸಂಪಾದಕ ಅರ್ನಾಬ್‌ ಗೋಸ್ವಾಮಿ ಅವರ ಹೇಬಿಯಸ್‌ ಕಾರ್ಪಸ್‌ ರಿಟ್‌ ಅರ್ಜಿ ಹಾಗೂ ಜಾಮೀನು ಅರ್ಜಿ ವಿಚಾರಣೆಯ ಶುಕ್ರವಾರ ಬಾಂಬೆ ಹೈಕೋರ್ಟ್‌ ನಡೆಸಿತು.

ನ್ಯಾಯಮೂರ್ತಿಗಳಾದ ಎಸ್‌ ಎಸ್‌ ಶಿಂಧೆ ಮತ್ತು ಎಂ ಎಸ್‌ ಕಾರ್ನಿಕ್‌ ಅವರಿದ್ದ ವಿಭಾಗೀಯ ಪೀಠವು ಅರ್ನಾಬ್‌ ಪ್ರತಿನಿಧಿಸುತ್ತಿರುವ ಹಿರಿಯ ವಕೀಲರಾದ ಹರೀಶ್‌ ಸಾಳ್ವೆ ಮತ್ತು ಆಬಾದ್‌ ಪೊಂಡಾ ಅವರ ವಾದವನ್ನು ಆಲಿಸಿದ್ದು, ಪ್ರಕರಣದ ವಿಚಾರಣೆಯನ್ನು ನಾಳೆ (ಶನಿವಾರ) 12 ಗಂಟೆಗೆ ಮುಂದೂಡಿದೆ.

ಹಿಂದಿನ ವಿಚಾರಣೆ ವೇಳೆ ಅರ್ನಾಬ್‌ ಅರ್ಜಿಯ ಸಂಬಂಧ ಪ್ರತಿವಾದಿಗಳ ಮನವಿಯನ್ನು ಆಲಿಸಬಯಸುವುದಾಗಿ ತಿಳಿಸಿದ ಪೀಠವು ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿತ್ತು. ಅಲ್ಲದೆ, ಅತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ದೂರು ಸಲ್ಲಿಸಿರುವ ಅನ್ವಯ್‌ ಅವರ ಪತ್ನಿ ಅಕ್ಷತಾ ನಾಯಕ್‌ ಕೂಡ ಪ್ರಕರಣದಲ್ಲಿ ತಮ್ಮನ್ನು ಪಕ್ಷಕಾರರನ್ನಾಗಿ ಆಲಿಸಬೇಕು ಎಂದು ನ್ಯಾಯಪೀಠಕ್ಕೆ ಕೋರಿಕೆ ಸಲ್ಲಿಸಿದ್ದರು.

ವಿಚಾರಣೆಯ ವೇಳೆ, ಮುಂಬೈ ಪೊಲೀಸ್‌ ಕಮಿಷನರ್ ಅವರ ವಿರುದ್ಧ ಯಾವುದೇ ಆರೋಪಗಳು ಇಲ್ಲದಿರುವ ಹಿನ್ನೆಲೆಯಲ್ಲಿ‌ ಅವರನ್ನು ಪ್ರತಿವಾದಿಗಳ ಪಟ್ಟಿಯಿಂದ ಕೈಬಿಡುವಂತೆ ಕಮಿಷನರ್ ಪರ ವಕೀಲರು ಪೀಠಕ್ಕೆ ಮನವಿ ಮಾಡಿದರು. ಈ ವೇಳೆ ಅರ್ನಾಬ್‌ ಪರ ಹಿರಿಯ ವಕೀಲ ಹರೀಶ್‌ ಸಾಳ್ವೆ ಅವರು ತಾವಿನ್ನೂ ವಾದ ಮಂಡಿಸಬೇಕಿರುವುದಾಗಿ ತಿಳಿಸಿದರು.

“ನಿಮ್ಮ ಹೆಸರನ್ನು ನಾನು ತೆಗೆದು ಹಾಕಲು ಸಾಧ್ಯವಿಲ್ಲ. ನಾನಿನ್ನೂ ಪ್ರಕರಣದ ಸಂಬಂಧ ವಾದಿಸಬೇಕಿದೆ” ಎಂದು ಸಾಳ್ವೆ ಹೇಳಿದರು. ತಮ್ಮ ವಾದಕ್ಕೂ ಮುನ್ನ ಅರ್ನಾಬ್‌ ರನ್ನು ನ್ಯಾಯಾಂಗ ವಶಕ್ಕೆ ನೀಡಿದ ಮರಾಠಿಯಲ್ಲಿರುವ ನ್ಯಾಯಾಲಯದ ಆದೇಶವನ್ನು ಓದುವಂತೆ ಕಿರಿಯ ವಕೀಲರಿಗೆ ಸಾಳ್ವೆ ಸೂಚಿಸಿದರು.

ಮರಾಠಿಯಲ್ಲಿನ ಆದೇಶವನ್ನು ಕಿರಿಯ ವಕೀಲರು ಓದಿದ ನಂತರ ಸಾಳ್ವೆ ಅವರು ಮನವಿ‌ ಅರ್ಜಿಯ ಜೊತೆಗೆ ಸೆಕ್ಷನ್‌ 438 ರ ಅಡಿ ಅರ್ಜಿಯೊಂದನ್ನು ಸಲ್ಲಿಸಿದ್ದೇನೆ. “ನನ್ನ ಮನವಿ ಅರ್ಜಿಯಲ್ಲಿ ಹೇಗೆ ದುರುದ್ದೇಶದಿಂದ ಇದಾಗಲೇ ಅಂತ್ಯಗೊಂಡಿರುವ ಪ್ರಕರಣವೊಂದಕ್ಕೆ ಮರುಚಾಲನೆ ನೀಡಲಾಗಿದೆ ಎನ್ನುವುದನ್ನು ವಿವರಿಸಿದ್ದೇನೆ” ಎಂದು ಪೀಠಕ್ಕೆ ವಿವರಿಸಿದರು.

ಅರ್ನಾಬ್ ವಿರುದ್ಧ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಹಕ್ಕುಚ್ಯುತಿಗೆ ಮುಂದಾಗಿರುವ ವಿಷಯದ ಪ್ರಕರಣವು ನ್ಯಾಯಾಲಯದ ವಿಚಾರಣೆಯಲ್ಲಿದ್ದು ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಪ್ರಕರಣವನ್ನು ಮರು ಆರಂಭಿಸಲಾಗಿದೆ. ಹಕ್ಕುಚ್ಯುತಿ ಪ್ರಕರಣದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಅರ್ನಾಬ್‌ಗೆ ರಕ್ಷಣೆ ನೀಡಿದ್ದು, ನೋಟಿಸ್‌ ಜಾರಿಗೊಳಿಸಲಾಗಿದೆ ಎಂದು ವಾದಿಸಿದ ಸಾಳ್ವೆ.

“ಅರ್ಜಿದಾರರನ್ನು ನಿರಂತರವಾಗಿ ಬೆದರಿಸುವ ಉದ್ದೇಶದಿಂದಲೇ ಇದೆಲ್ಲವನ್ನೂ ಮಾಡಲಾಗಿದೆ. ಪೊಲೀಸರು ಅರ್ನಾಬ್‌ರನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಇನ್ನಿಲ್ಲದಂತೆ ಪ್ರಯತ್ನಿಸಿದ್ದಾರೆ” ಎಂದು ಸಾಳ್ವೆ ವಾದಿಸಿದರು. ಸುಪ್ರೀಂಕೋರ್ಟಿನಲ್ಲಿರುವ ಪ್ರಕರಣದ ವಿವರ ಹಾಗೂ ಟಿಆರ್‌ಪಿ ಹಗರಣದ ಸಂಬಂಧ ದಾಖಲಾಗಿರುವ ದೂರಿನ ಬಗ್ಗೆಯೂ ನ್ಯಾಯಪೀಠಕ್ಕೆ ಸಾಳ್ವೆ ವಿವರಿಸಿದರು.

“ಪೊಲೀಸ್ ಕಮಿಷನರ್ ಮಾತ್ರ ತಾವು ಪ್ರಕರಣದಲ್ಲಿ ಭಾಗಿಯಲ್ಲ ಎನ್ನುತ್ತಾರೆ. ಇಂದು ಹನ್ಸ್‌ ಸಂಶೋಧನಾ ಸಮೂಹವು ನ್ಯಾಯಾಲಯದಲ್ಲಿ ಪೊಲೀಸರು ಸಂಸ್ಥೆಯ ಸಿಬ್ಬಂದಿಯನ್ನು ಬೆದರಿಸುತ್ತಿರುವ ಬಗ್ಗೆ, ರಿಪಬ್ಲಿಕ್‌ ಟಿವಿ ವಿರುದ್ಧ ಹೇಳಿಕೆ ನೀಡುವಂತೆ ಹೇಳಿರುವ ಬಗ್ಗೆ ವಿವರಿಸಿದೆ” ಎಂದರು.

Also Read
[ಬ್ರೇಕಿಂಗ್]‌ ಬಂಧನ ಪ್ರಶ್ನಿಸಿದ್ದ ಅರ್ನಾಬ್‌ ಮನವಿ ಆಧರಿಸಿ ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿದ ಬಾಂಬೆ ಹೈಕೋರ್ಟ್
“ನನ್ನ ಕಕ್ಷಿದಾರರು ಶೇ.90ಕ್ಕೂ ಹೆಚ್ಚು ಹಣವನ್ನು ಸಂದಾಯ ಮಾಡಿದ್ದಾರೆ. ಅರ್ನಾಬ್‌ ಗೋಸ್ವಾಮಿ ಹಾಗೂ ಅನ್ವಯ್‌ ನಾಯಕ್‌ ಅವರ ನಡುವೆ ಯಾವುದೇ ವೈಯಕ್ತಿ ಸಂಬಂಧವಿಲ್ಲ. ನಮಗೆ ಆತ್ಮಹತ್ಯೆಯ ಹಿಂದಿನ ನಿಗೂಢ ಸನ್ನಿವೇಶಗಳ ಬಗ್ಗೆ ತಿಳಿದಿಲ್ಲ. ಯಾವುದಾದರೂ ಸಂಗತಿಗಳನ್ನು ಮರೆಮಾಚಲಾಗಿದೆಯೇ ಎಂಬ ಬಗ್ಗೆ ಯಾರೂ ನಿರೂಪಿಸಿಯೂ ಇಲ್ಲ. ಹೀಗಿರುವಾಗ, ಅರ್ನಾಬ್‌ರನ್ನು ಅನಗತ್ಯವಾಗಿ ನ್ಯಾಯಾಂಗ ಬಂಧನದಲ್ಲಿ ಇರಿಸುವ ಅಗತ್ಯವಿಲ್ಲ. ನ್ಯಾಯಾಲಯವು ಪ್ರಕರಣದಲ್ಲ ಇತರರ ವಾದವನ್ನು ಆಲಿಸಬಯಸಿದರೆ ಅದಕ್ಕಾಗಿ ಅರ್ನಾಬ್ ಅವರನ್ನು ಬಂಧನದಲ್ಲಿರಿಸುವ ಅಗತ್ಯವಿಲ್ಲ” ಎಂದು ಹೇಳಿದರು.

ಈ ವೇಳೆ ಅರ್ನಾಬ್ ಪರ ಮತ್ತೋರ್ವ ವಕೀಲರಾದ ಪೊಂಡಾ ಅವರಿಂದ ಪೀಠವು, ಸೆಷನ್ಸ್‌‌ ಕೋರ್ಟ್‌ನಿಂದ ಜಾಮೀನು ಪಡೆಯುವ ಪ್ರಕ್ರಿಯೆಯ ಬದಲಿಗೆ ಮಧ್ಯಂತರ ಜಾಮೀನಿಗಾಗಿ ಹೈಕೋರ್ಟ್ಅನ್ನು ಎಡತಾಕಿರುವುದು ಏಕೆ ಎನ್ನುವ ಬಗ್ಗೆ ಮಾಹಿತಿ ಕೇಳಿತು. ಸೆಷನ್ಸ್‌ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ಜಾಮೀನು ಅರ್ಜಿ ವಿಳಂಬವಾಗುವ ಹಿನ್ನೆಲೆಯಲ್ಲಿ ಅದನ್ನು ಹಿಂಪಡೆದು ಹೈಕೋರ್ಟ್‌ನಲ್ಲಿ ಮಧ್ಯಂತರ ಜಾಮೀನಿಗೆ ಮುಂದಾದ ಬಗ್ಗೆ ಪೊಂಡಾ ವಿವರಿಸಿದರು.

ನಾಳಿನ ವಿಚಾರಣೆಯ ವೇಳೆ ಪ್ರಕರಣದ ಪಕ್ಷಕಾರರು ಕೇವಲ ಮದ್ಯಂತರ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಮಾತ್ರವೇ ತಮ್ಮ ವಾದವನ್ನು ಮಂಡಿಸುವಂತೆ ನ್ಯಾಯಾಲಯವು ಹೇಳಿದೆ.

Kannada Bar & Bench
kannada.barandbench.com