

ಚುನಾವಣಾ ಕರ್ತವ್ಯಕ್ಕೆ ನ್ಯಾಯಾಲಯದ ಸಿಬ್ಬಂದಿ ನೇಮಿಸದಂತೆ ಬೃಹನ್ಮುಂಬೈ ಮಹಾನಗರ ಪಾಲಿಕೆಗೆ (ಬಿಎಂಸಿ) ಬಾಂಬೆ ಹೈಕೋರ್ಟ್ ಆದೇಶಿಸಿದೆ [ಡಿಸೆಂಬರ್ 29 ರಂದು ಪುರಸಭೆ ಆಯುಕ್ತರು ಹೊರಡಿಸಿದ ಆದೇಶ ಕುರಿತಾದ ಸ್ವಯಂ ಪ್ರೇರಿತ ಪ್ರಕರಣ]
ಈ ಸಂಬಂಧ ಮಂಗಳವಾರ ರಾತ್ರಿ ತುರ್ತು ಕಲಾಪ ನಡೆಸಿದ ಪೀಠ ರಾತ್ರಿ 8 ಗಂಟೆ ಸುಮಾರಿಗೆ ಆದೇಶ ಹೊರಡಿಸಿದೆ. ಮಹಾನಗರ ಪಾಲಿಕೆ ಆಯುಕ್ತ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಭೂಷಣ್ ಗಗ್ರಾನಿ ಅವರು ಡಿಸೆಂಬರ್ 29ರಂದು ನ್ಯಾಯಾಲಯ ಸಿಬ್ಬಂದಿಗೆ ವಿನಾಯಿತಿ ನೀಡಲು ನಿರಾಕರಿಸಿ ಮಾಡಿದ್ದ ಆದೇಶವನ್ನು ಜಾರಿಗೊಳಿಸದಂತೆ ಹೈಕೋರ್ಟ್ ತನ್ನ ಆದೇಶದಲ್ಲಿ ತಡೆಹಿಡಿದಿದೆ.
ಡಿಸೆಂಬರ್ 22ರಂದು ಅಧೀನ ನ್ಯಾಯಾಲಯಗಳ ಸಿಬ್ಬಂದಿಗೆ ನೇರವಾಗಿ ಕಳುಹಿಸಿದ್ದ ಪತ್ರವನ್ನು ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಅಶ್ವಿನ್ ಡಿ. ಭೋಬೆ ಅವರಿದ್ದ ವಿಭಾಗೀಯ ಪೀಠ ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡಿತು. ಪತ್ರದಲ್ಲಿ ಡಿಸೆಂಬರ್ 30ರಂದು ಮಧ್ಯಾಹ್ನ 3ರಿಂದ 5ರ ನಡುವೆ ಚುನಾವಣಾ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿತ್ತು.
ಹೈಕೋರ್ಟ್ ಹಾಗೂ ಅಧೀನ ನ್ಯಾಯಾಲಯಗಳ ಯಾವುದೇ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲು ಅಥವಾ ಅದಕ್ಕಾಗಿ ಯಾವುದೇ ಸಂವಹನ ಕಳುಹಿಸಲು ಬಿಎಂಸಿಗೆ ನ್ಯಾಯಾಲಯ ತಡೆ ನೀಡಿತು.
“ಡಿಸೆಂಬರ್ 22ರಂದು ನ್ಯಾಯಾಲಯ ಸಿಬ್ಬಂದಿಗೆ ನೇರವಾಗಿ ಕಳುಹಿಸಿದ ಏಕಪಕ್ಷೀಯ ಸಂವಹನದ ಆಧಾರದಲ್ಲಿ ಯಾವುದೇ ಕ್ರಮ ಕೈಗೊಳ್ಳಬಾರದು. ಹೈಕೋರ್ಟ್ ಅಥವಾ ಅಧೀನ ನ್ಯಾಯಾಲಯಗಳ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸುವ ಉದ್ದೇಶದಿಂದ ಯಾವುದೇ ಸಂವಹನ ಹೊರಡಿಸುವುದನ್ನು ಮಹಾನಗರ ಪಾಲಿಕೆ ಆಯುಕ್ತರಿಗೆ ನಿಷೇಧಿಸಲಾಗಿದೆ” ಎಂದು ಆದೇಶ ವಿವರಿಸಿದೆ.
ನ್ಯಾಯಾಲಯ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲು ಯಾವ ಕಾನೂನು ವ್ಯಾಪ್ತಿಯಲ್ಲಿ ಅಧಿಕಾರ ಬಳಸಲಾಗಿದೆ ಎಂಬುದನ್ನು ವಿವರಿಸುವ ವೈಯಕ್ತಿಕ ಪ್ರಮಾಣಪತ್ರವನ್ನು, ಬಿಎಂಸಿ ಆಯುಕ್ತ ಭೂಷಣ್ ಗಗ್ರಾನಿ ಅವರು ಸಲ್ಲಿಸಬೇಕೆಂದು ವಿಭಾಗೀಯ ಪೀಠ ನಿರ್ದೇಶಿಸಿತು.
ಮುಂಬೈನ ಎಸ್‌ಪ್ಲೆನೇಡ್ ಕಾರ್ಯನಿರ್ವಹಣಾ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು ನ್ಯಾಯಾಲಯದ ಸಿಬ್ಬಂದಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡುವಂತೆ, 2008ರ ಆಡಳಿತ ನ್ಯಾಯಮೂರ್ತಿಗಳ ಸಮಿತಿಯ ತೀರ್ಮಾನ ಹಾಗೂ 2009ರ ಬಾಂಬೆ ಹೈಕೋರ್ಟ್ ಸಾಮಾನ್ಯ ಆದೇಶವನ್ನು ಉಲ್ಲೇಖಿಸಿ, ಮುಂಬೈ ನಗರ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿರುವುದನ್ನು ನ್ಯಾಯಾಲಯ ಗಮನಿಸಿತು.
ಇದಕ್ಕೆ ಅನುಗುಣವಾಗಿ, ಡಿಸೆಂಬರ್ 26ರಂದು ರಿಜಿಸ್ಟ್ರಾರ್ (ಇನ್ಸ್‌ಪೆಕ್ಷನ್–II) ಕೂಡಾ ಹೈಕೋರ್ಟ್‌ನ ಸಾಮಾನ್ಯ ಆದೇಶವನ್ನು ಲಗತ್ತಿಸಿ ಅದೇ ರೀತಿಯ ಪತ್ರ ಕಳುಹಿಸಿದ್ದರು. ಆದರೆ, ಇದರ ಹೊರತಾಗಿಯೂ ಬಿಎಂಸಿ ಆಯುಕ್ತರು ಡಿಸೆಂಬರ್ 29ರಂದು ಮುಂಬೈನ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರಿಗೆ ಪತ್ರ ಬರೆದು ವಿನಾಯಿತಿ ಕೋರಿಕೆ ತಿರಸ್ಕರಿಸಿದ್ದರು.
ಡಿಸೆಂಬರ್ 30ರಂದು ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಸಂವಿಧಾನದ ವಿಧಿ 235ರ ಪ್ರಕಾರ ಅಧೀನ ನ್ಯಾಯಾಲಯಗಳು ಮತ್ತು ಅವುಗಳ ಸಿಬ್ಬಂದಿಯ ಮೇಲೆ ಸಂಪೂರ್ಣ ನಿಯಂತ್ರಣ ಹಾಗೂ ಮೇಲ್ವಿಚಾರಣೆ ಹೈಕೋರ್ಟ್‌ಗೆ ಇದೆ ಎಂದು ಸ್ಪಷ್ಟಪಡಿಸಿತು.
ಸಂವಿಧಾನದ 243 ಕೆ ಮತ್ತು 243 ಜಡ್ ಎ ವಿಧಿಗಳು (ರಾಜ್ಯ ಚುನಾವಣಾ ಆಯೋಗದ ಅಧಿಕಾರಗಳು) ಹಾಗೂ ಜನಪ್ರತಿನಿಧಿಗಳ ಕಾಯಿದೆಯ ಸೆಕ್ಷನ್ 159 ಅನ್ನು ಉಲ್ಲೇಖಿಸಿ, ಚುನಾವಣಾ ಕರ್ತವ್ಯಕ್ಕೆ ಸಿಬ್ಬಂದಿಯನ್ನು ನಿಯೋಜಿಸುವ ವಿವಿಧ ಅಧಿಕಾರಿಗಳನ್ನು ಕಾನೂನು ಪರಿಗಣಿಸಿದರೂ, ಸೆಕ್ಷನ್ 159(2) ಅಡಿಯಲ್ಲಿ ಹೈಕೋರ್ಟ್ ಅಥವಾ ಅಧೀನ ನ್ಯಾಯಾಲಯಗಳ ಸಿಬ್ಬಂದಿಯನ್ನು ಒಳಪಡಿಸಲಾಗಿಲ್ಲ ಎಂದು ವಿವರಿಸಿತು.
ವಿಚಾರಣೆ ವೇಳೆ ಬಿಎಂಸಿ ಪರ ವಕೀಲರು ಡಿಸೆಂಬರ್ 29ರ ಪತ್ರವನ್ನು ಹಿಂಪಡೆಯುವ ಮನವಿ ಮಾಡಿದರೂ, ಪೀಠ ಅದನ್ನು ತಿರಸ್ಕರಿಸಿತು. ಬದಲಾಗಿ ಆಯುಕ್ತರಿಂದ ವಿವರವಾದ ವೈಯಕ್ತಿಕ ಪ್ರಮಾಣಪತ್ರ ಸಲ್ಲಿಸುವಂತೆ ತಾಕೀತು ಮಾಡಿತು. ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಚುನಾವಣಾ ಆಯೋಗ, ಭಾರತೀಯ ಚುನಾವಣಾ ಆಯೋಗ ಹಾಗೂ ಮಹಾರಾಷ್ಟ್ರ ಸರ್ಕಾರ ಕೂಡ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ ಜನವರಿ 5, 2026ಕ್ಕೆ ನಿಗದಿಯಾಗಿದೆ.
[ಆದೇಶದ ಪ್ರತಿ]