
ʼಮೆಡುಸಾʼ ಎಂದು ಗುರುತಿಸಿಕೊಂಡಿರುವ ಹ್ಯಾಕರ್ ಗುಂಪು ನಡೆಸಿದ ರ‍್ಯಾನ್ಸಮ್‌ವೇರ್ ದಾಳಿಗೆ ಒಳಗಾದ ಜನರಲಿ ಸೆಂಟ್ರಲ್ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್‌ಗೆ ಬಾಂಬೆ ಹೈಕೋರ್ಟ್ ತುರ್ತು ಮಧ್ಯಂತರ ಪರಿಹಾರ ನೀಡಿದೆ [ಜನರಲಿ ಸೆಂಟ್ರಲ್ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಹ್ಯಾಕ್‌ಗೆ ತುತ್ತಾದ ಎಲ್ಲಾ ಖಾತೆ, ಡೊಮೇನ್ ನೇಮ್ ಹಾಗೂ ಸಂವಹನ ಮಾರ್ಗಗಳನ್ನು ಕೂಡಲೇ ನಿರ್ಬಂಧಿಸುವಂತೆ ಹಾಗೂ ನಿಷ್ಕ್ರಿಯಗೊಳಿಸುವಂತೆ ನ್ಯಾಯಮೂರ್ತಿ ಆರಿಫ್ ಎಸ್ ಡಾಕ್ಟರ್ ಅವರು ಅಕ್ಟೋಬರ್ 16 ರಂದು ನೀಡಿದ ತೀರ್ಪಿನಲ್ಲಿ ತಿಳಿಸಿದ್ದಾರೆ.
ಅರ್ಜಿದಾರರ ಗೌಪ್ಯ ದತ್ತಾಂಶವನ್ನು ಬಹಿರಂಗಗೊಳಿಸಿದರೆ ಅಥವಾ ಮಾರಾಟ ಮಾಡಿದರೆ ಉಂಟಾಗುವ ಪರಿಣಾಮ ಅಗಾಧವಾದುದು. ಮಧ್ಯಂತರ ಪರಿಹಾರ ನೀಡುವಲ್ಲಿ ಅನುಕೂಲತೆಯ ಸಮತೋಲನವು ಅರ್ಜಿದಾರರ ಪರವಾಗಿ ಸ್ಪಷ್ಟವಾಗಿ ಇದೆ ಎಂದು ನ್ಯಾಯಾಲಯ ಹೇಳಿದೆ.
ವಿಮಾದಾರರ ಮತ್ತು ಗ್ರಾಹಕರ ಗೌಪ್ಯ ದತ್ತಾಂಶವನ್ನು ಹ್ಯಾಕ್ ಮಾಡಲಾಗಿದ್ದು ಅನಾಮಧೇಯ ಕಿಡಿಗೇಡಿ 500,000 ಅಮೆರಿಕನ್ ಡಾಲರ್ ಬೇಡಿಕೆ ಇರಿಸಿದ್ದಾನೆ ಎಂದು ಜನರಲಿ ನ್ಯಾಯಾಲಯಕ್ಕೆ ತಿಳಿಸಿತ್ತು. ಎಕ್ಸ್ ಖಾತೆ ಮೂಲಕ ಬೆದರಿಕೆ ಹಾಕಿದ್ದ ಆರೋಪಿ ಬೇಡಿಕೆ ಈಡೇರಿಸದಿದ್ದರೆ ಹಣ ಪಾವತಿಸಲು ಸಿದ್ಧರಿರುವ ಯಾರಿಗೆ ಬೇಕಾದರೂ ದತ್ತಾಂಶ ಸೋರಿಕೆಯಾಗುವಂತೆ ಮಾಡುವುದಾಗಿ ತಿಳಿಸಿದ್ದ.
ಅನಾಮಧೇಯ ಹ್ಯಾಕರ್ ತಾನು ಕಳವು ಮಾಡಿರುವ ಗೌಪ್ಯ ಮಾಹಿತಿ ಪ್ರಕಟಿಸದಂತೆ ವಿತರಿಸದಂತೆ ಇಲ್ಲವೇ ಮಾರಾಟ ಮಾಡದಂತೆ ತುರ್ತಾಗಿ ತಡೆಯಾಜ್ಞೆ ನೀಡುವಂತೆ ಜೆನೆರಲಿ ನ್ಯಾಯಾಲಯವನ್ನು ಕೋರಿತ್ತು.
ವಾದ ಆಲಿಸಿದ ನ್ಯಾಯಾಲಯ ದೂರ ಸಂಪರ್ಕ ಇಲಾಖೆ ಮತ್ತು ಸಂಬಂಧಪಟ್ಟ ಸಂಸ್ಥೆಗಳು ಹ್ಯಾಕರ್‌ಗಳಿಗೆ ಸಂಬಂಧಿಸಿದ ಡೊಮೇನ್‌ಗಳು, ಖಾತೆಗಳು, ಇಮೇಲ್‌ಗಳು, ಫೋನ್ ಸಂಖ್ಯೆಗಳು ಇತ್ಯಾದಿಗಳನ್ನು ತಕ್ಷಣ ನಿರ್ಬಂಧಿಸಬೇಕು ಅಥವಾ ಅಳಿಸಬೇಕು. ಜೆನೆರಲಿ ಕಂಪೆನಿ ಹೊಸ ದುರುಪಯೋಗದ ಬಗ್ಗೆ ತಿಳಿಸಿದರೆ 24 ಗಂಟೆಯೊಳಗೆ ಅದನ್ನೂ ತಡೆಗಟ್ಟಬೇಕು. ಕೈಗೊಂಡ ಕ್ರಮಗಳ ಬಗ್ಗೆ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.