ತನ್ನ ವಿರುದ್ಧ ಸುಳ್ಳು ವಿಷಯ ಪ್ರಕಟಿಸುತ್ತಿರುವ ಸಂಸ್ಥೆಗಳು ಮತ್ತು ವ್ಯಕ್ತಿಗಳು ₹ 100 ಕೋಟಿಗಳಷ್ಟು ನಷ್ಟ ಪರಿಹಾರ ನೀಡಬೇಕು ಎಂದು ಕೋರಿ ಕೋವಿಡ್ ಸಾಂಕ್ರಾಮಿಕ ಹರಡಿದ್ದ ವೇಳೆ ಸಾಕಷ್ಟು ಸುದ್ದಿಯಲ್ಲಿದ್ದ ಔಷಧ ತಯಾರತಿಕಾ ಕಂಪೆನಿ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಸೋಮವಾರ ಮಧ್ಯಂತರ ಪರಿಹಾರ ನೀಡಿದೆ.
ಇಂದು ತೀರ್ಪು ನೀಡಿದ ನ್ಯಾಯಮೂರ್ತಿ ಆರ್ ಐ ಚಾಗ್ಲಾ, “ಪ್ರತಿವಾದಿಗಳು ತಮ್ಮ ವೆಬ್‌ಸೈಟ್ ಅಥವಾ ಸಾಮಾಜಿಕ ಮಾಧ್ಯಮ ಖಾತೆಗಳಿಂದ ವಿಚಾರಗಳನ್ನು ತೆಗೆದುಹಾಕಬೇಕು, ಅವು ಮಾನಹಾನಿಕರವಾಗಿವೆ” ಎಂದರು.
ಎಸ್ಐಐ ಅಥವಾ ಅದರ ಉದ್ಯೋಗಿಗಳ ವಿರುದ್ಧ ಯಾವುದೇ ವಿಷಯ ಪ್ರಕಟಿಸದಂತೆ ಪ್ರತಿವಾದಿಗಳಾದ ಯೋಹಾನ್ ತೆಂಗ್ರಾ ಅವರ ಅನಾರ್ಕಿ ಫಾರ್ ಫ್ರೀಡಂ ಇಂಡಿಯಾ, ಮತ್ತು ಅಂಬರ್ ಕೊಯಿರಿ ಹಾಗೂ ಅವರ ಸಂಸ್ಥೆ ಅವೇಕನ್ ಇಂಡಿಯಾ ಮೂವ್‌ಮೆಂಟ್‌ಗೆ ಹೈಕೋರ್ಟ್ ತಾತ್ಕಾಲಿಕವಾಗಿ ನಿರ್ಬಂಧಿಸಿದೆ.
ಕೋವಿಡ್ ತಡೆಯಲು ಎಸ್‌ಐಐ ತಯಾರಿಸಿರುವ ಕೋವಿಶೀಲ್ಡ್ ಲಸಿಕೆಯ ಅಡ್ಡಪರಿಣಾಮಗಳಿಂದಾಗಿ ಅನೇಕ ವ್ಯಕ್ತಿಗಳು ಸಾವನ್ನಪ್ಪಿದ್ದಾರೆ ಎಂದು ಪ್ರತಿವಾದಿಗಳು ಪ್ರಕಟಿಸಿದ್ದಾರೆ ಎಂಬುದು ಎಸ್‌ಐಐನ ದೂರಾಗಿತ್ತು. ಈ ಪ್ರಕಟಣೆಗಳು ಕೇವಲ ಎಸ್‌ಐಐ ಮಾತ್ರವೇ ಅಲ್ಲದೆ ಅದರ ಸಿಇಒ ಆಧಾರ್ ಪೂನಾವಾಲಾ ಅವರನ್ನೂ ಗುರಿಯಾಗಿಸಿಕೊಂಡಿವೆ ಎನ್ನಲಾಗಿತ್ತು.
ಎಸ್‌ಐಐ ಭಾಗಿಯಾಗಿರುವ ಕಾನೂನು ವಿಚಾರಣೆಗಳ ಬಗ್ಗೆ ಕೂಡ ಪ್ರತಿವಾದಿಗಳು ತಪ್ಪು ಮಾಹಿತಿ ಪ್ರಕಟಿಸಿದ್ದಾರೆ ಎಂದು ಪರಿಣಾಮ್ ಅಸೋಸಿಯೇಟ್ಸ್ ಮೂಲಕ ಸಲ್ಲಿಸಲಾದ ಮೊಕದ್ದಮೆಯಲ್ಲಿ ಆರೋಪಿಸಲಾಗಿತ್ತು.