ೆಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಯಾಗಿದ್ದ ಪಾದ್ರಿ ಸ್ಟ್ಯಾನ್ ಸ್ವಾಮಿ ಅವರ ಆರೋಗ್ಯದ ವಿಷಯದಲ್ಲಿ ರಾಷ್ಟ್ರೀಯ ತನಿಖಾ ದಳ ಮತ್ತು ತಲೋಜಾ ಕೇಂದ್ರ ಕಾರಾಗೃಹ ನಿರ್ಲಕ್ಷ್ಯಧೋರಣೆ ತೋರಿದ್ದವು ಎನ್ನುವ ಆರೋಪಗಳ ಸತ್ಯಾಸತ್ಯತೆ ಪತ್ತೆ ಹಚ್ಚಲು ತನ್ನ ಪೇರೆನ್ಸ್ ಪೇಟ್ರಿಯಾ (ತಮ್ಮನ್ನು ರಕ್ಷಿಸಿಕೊಳ್ಳಲಾಗದ ಜನರ ಕಾನೂನು ರಕ್ಷಕ ಎಂದು ಹೇಳಲಾಗುವ ಸರ್ಕಾರ ಅಥವಾ ಯಾವುದೇ ಪ್ರಾಧಿಕಾರ) ಹಕ್ಕನ್ನು ಚಲಾಯಿಸುವಂತೆ ಬಾಂಬೆ ಹೈಕೋರ್ಟ್‌ಗೆ ಸ್ವಾಮಿ ಪರ ಹಿರಿಯ ವಕೀಲ ಮಿಹಿರ್ ದೇಸಾಯಿ ಮನವಿ ಮಾಡಿದ್ದಾರೆ.
ಮರಣೋತ್ತರವಾಗಿ ಜಾಮೀನು ಮನವಿಯ ವಿಚಾರಣೆ ಮುಂದುವರೆಸುವಂತೆ ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಎನ್ ಜೆ ಜಮಾದಾರ್ ಅವರನ್ನು ಕೋರಿರುವ ದೇಸಾಯಿ ಅವರು ಸಾವನ್ನಪ್ಪಿದ ವ್ಯಕ್ತಿಗೆ ಸಂಬಂಧಿಸಿದಂತೆ ಪೇರೆನ್ಸ್ ಪೇಟ್ರಿಯಾ ಅಧಿಕಾರ ಚಲಾಯಿಸುವುದಲ್ಲದೇ ತನಿಖೆಯ ನಿಗಾವಹಿಸುವಂತೆ ಕೋರಿದ್ದಾರೆ.
ವ್ಯಕ್ತಿಗಳ ರಕ್ಷಣೆ, ವಿಶೇಷವಾಗಿ ಮಕ್ಕಳು, ವಿಶೇಷಚೇತರು, ವೈಕಲ್ಯಕ್ಕೆ ತುತ್ತಾದವರು ಹಾಗೂ ತಮ್ಮ ಬಗ್ಗೆ ನಿರ್ಧಾರ ಕೈಗೊಳ್ಳಲಾಗದವರ ಪರವಾಗಿ ಸರ್ಕಾರದ ಅಂಗಗಳು ಮಧ್ಯಪ್ರವೇಶಿಸಿ ರಕ್ಷಿಸುವುದನ್ನು ಪೇರೆನ್ಸ್ ಪೇಟ್ರಿಯಾ ವ್ಯಾಪ್ತಿ ಎನ್ನಲಾಗುತ್ತದೆ. ಸ್ವಾಮಿ ಅವರ ನಿಧನಕ್ಕೂ ಮುನ್ನ ಸಲ್ಲಿಸಲಾಗಿದ್ದ ಜಾಮೀನು ಮನವಿಯ ವಿಚಾರಣೆಯನ್ನು ಪೀಠ ನಡೆಸಿತು.
ಸ್ವಾಮಿ ಅವರ ಕಸ್ಟಡಿ ಸಾವಿಗೆ ಸಂಬಂಧಿಸಿದಂತೆ ಸಿಆರ್‌ಪಿಸಿ ಸೆಕ್ಷನ್ 176ರ ಅಡಿ ಪ್ರಾಥಮಿಕ ತನಿಖೆಯಲ್ಲಿ ಪಾಲ್ಗೊಳ್ಳಲು ಫಾದರ್ ಫ್ರೇಸರ್ ಮಸ್ಕರ್‌ಹೇನಸ್ ಅವರಿಗೆ ಅನುಮತಿಸಬೇಕು.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾರ್ಗಸೂಚಿಯ ಅನುಸಾರ ತನಿಖೆ ನಡೆಸಬೇಕು.
ಮುಂಬೈನಲ್ಲಿ ಸಾವು ಸಂಭವಿಸಿರುವುದರಿಂದ ಮುಂಬೈನ ಮ್ಯಾಜಿಸ್ಟ್ರೇಟ್ ನೇಮಿಸಬೇಕು.
ಮ್ಯಾಜಿಸ್ಟ್ರೇಟ್ ನಡೆಸುವ ತನಿಖೆಯ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಬೇಕು. ಹೀಗಾದಲ್ಲಿ ತನಿಖೆಯ ಉಸ್ತುವಾರಿಯನ್ನು ಹೈಕೋರ್ಟ್ ನಡೆಸಿದಂತಾಗುತ್ತದೆ.
ಕಾನೂನಿನ ಅನುಸಾರ ನಡೆಯುವ ತನಿಖೆಗೆ ಯಾವುದೇ ಆಕ್ಷೇಪ ಮಾಡುವುದಿಲ್ಲ. ಹೈಕೋರ್ಟ್‌ಗೆ ಸಲ್ಲಿಸುವ ವರದಿಯ ಬಗ್ಗೆಯೂ ಯಾವುದೇ ತಕಾರರು ಇಲ್ಲ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ವಾದಿಸಿದ್ದಾರೆ. ಸಿಆರ್‌ಪಿಸಿ ಸೆಕ್ಷನ್ 346ರ ಪ್ರಕಾರ ಮೇಲ್ಮನವಿದಾರರ ಸಾವಿನ ಬಳಿಕ ಅದಕ್ಕೆ ಸಂಬಂಧಿಸಿದ ಮನವಿಯು ಮುಕ್ತಾಯವಾಗುತ್ತದೆ ಎಂದು ಅನಿಲ್ ಸಿಂಗ್ ಹೇಳಿದ್ದಾರೆ.
ಜಾಮೀನು ಮನವಿ ವಜಾ ಮಾಡಿರುವುದನ್ನು ಪ್ರಶ್ನಿಸಿ ಸ್ವಾಮಿ ಮೇಲ್ಮನವಿ ಸಲ್ಲಿಸಿದ್ದು, ಅವರ ಸಾವಿನ ಬಳಿಕ ಯಾವುದೇ ಪ್ರಕ್ರಿಯೆ ಬಾಕಿ ಇಲ್ಲದಿರುವುದರಿಂದ ಹೈಕೋರ್ಟ್ ತನ್ನ ವ್ಯಾಪ್ತಿಯ ಹಕ್ಕನ್ನು ಚಲಾಯಿಸಲಾಗದು ಎಂದು ಅವರು ಹೇಳಿದ್ದಾರೆ.
ಮುಖ್ಯ ಸರ್ಕಾರಿ ಅಭಿಯೋಜಕರು ಎಎಸ್‌ಜಿ ವಾದವನ್ನು ಒಪ್ಪಿದ್ದಾರೆ. ಎಎಸ್‌ಜಿ ವಾದವನ್ನು ಪುರಸ್ಕರಿಸಿರುವ ನ್ಯಾಯಾಲಯವು ಈ ಸಂಬಂಧ ಸ್ಪಷ್ಟನೆ ನೀಡುವಂತೆ ದೇಸಾಯಿ ಅವರಿಗೆ ಆದೇಶಿಸಿದೆ.
ಕಾನೂನಿನ ವಿಚಾರದಲ್ಲಿ ಎಎಸ್‌ಜಿ ವಾದವನ್ನು ಒಪ್ಪುವುದಾಗಿ ಹೇಳಿರುವ ದೇಸಾಯಿ ಅವರು ಸಾಂವಿಧಾನಿಕ ವ್ಯಾಪ್ತಿಗೆ ಒಳಪಡುವ ಹೈಕೋರ್ಟ್‌ನ ಮೇಲ್ವಿಚಾರಣಾ ವ್ಯಾಪ್ತಿಯನ್ನು ಪ್ರಸ್ತಾಪಿಸಿರುವುದಾಗಿ ಹೇಳಿದ್ದಾರೆ. ತನ್ನ ಕೋರಿಕೆಯು ಮೇಲ್ಮನವಿ ವ್ಯಾಪ್ತಿಗೆ ಸೇರಿದ್ದಲ್ಲ ಎಂಬುದನ್ನು ದೇಸಾಯಿ ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.
ಚರಣ್ ಲಾಲ್ ಸಾಹು ವರ್ಸಸ್ ಭಾರತ ಸರ್ಕಾರ ಮತ್ತು ಇತರರು ಹಾಗೂ ಅರುಣಾ ರಾಮಚಂದ್ರ ಶಾನಭಾಗ್ ವರ್ಸಸ್ ಭಾರತ ಸರ್ಕಾರ ಪ್ರಕರಣದಲ್ಲಿ ಅರ್ಜಿದಾರರ ಪರವಾಗಿ ಹೈಕೋರ್ಟ್ ಪೇರೆನ್ಸ್ ಪೇಟ್ರಿಯಾ ಎಂದು ಸುಪ್ರೀಂ ಕೋರ್ಟ್ ಹೇಳಿದೆ. “ಹೈಕೋರ್ಟ್ ನಿಧನರಾದವರ ಪೋಷಕನಾಗಿಯೂ ಮುಂದುವರೆಯುತ್ತದೆ” ಎಂದು ದೇಸಾಯಿ ಹೇಳಿದ್ದಾರೆ.
ಈ ವಾದದ ಹಿನ್ನೆಲೆಯಲ್ಲಿ ತಮ್ಮ ವಾದಕ್ಕೆ ಪೂರಕವಾಗಿ ಸಂಬಂಧಪಟ್ಟ ತೀರ್ಪುಗಳನ್ನು ಲಿಖಿತವಾಗಿ ಸಲ್ಲಿಸುವಂತೆ ದೇಸಾಯಿ ಅವರಿಗೆ ನ್ಯಾಯಾಲಯ ಆದೇಶಿಸಿದ್ದು, ಈ ಸಂಬಂಧ ಪ್ರತಿಕ್ರಿಯೆ ದಾಖಲಿಸಲು ಅನುಕೂಲವಾಗಲು ಪ್ರತಿವಾದಿಗಳಿಗೂ ಒಂದು ಪ್ರತಿ ಸಲ್ಲಿಸುವಂತೆ ಪೀಠ ಸೂಚಿಸಿದೆ.
“ಸಂವಿಧಾನದ 215ನೇ ವಿಧಿಯ ಅಡಿ ನಮಗೆ ಅಧಿಕಾರವಿದೆ (ಮೇಲುಸ್ತುವಾರಿ ವ್ಯಾಪ್ತಿ) ಎಂಬುದು ತಿಳಿದಿದೆ. ಆದರೆ, ಮೇಲ್ಮನವಿಯನ್ನು ನೀವು ಮಾರ್ಪಾಡು ಮಾಡಲಾಗುತ್ತದೆಯೇ. ರಿಟ್ ಮನವಿ ನಿರ್ವಹಣೆಗೆ ಅರ್ಹವೇ” ಎಂದು ಪೀಠ ಪ್ರಶ್ನಿಸಿದ್ದು, ವಿಚಾರಣೆಯನ್ನು ಆಗಸ್ಟ್ 4ಕ್ಕೆ ಮುಂದೂಡಿದೆ.