ಮುಂಬೈ ಕಡಲ ತೀರದಲ್ಲಿ ಆತಂಕ ಹುಟ್ಟಿಸುವಷ್ಟು ಕಸ ಸಂಗ್ರಹವಾಗುತ್ತಿರುವುದು ಅದರಲ್ಲೂ ಮನುಷ್ಯರು ಸೇವಿಸುವ ಮೀನಿನ ಮಾಂಸದಲ್ಲಿ ಮೈಕ್ರೋಪ್ಲಾಸ್ಟಿಕ್ ಪತ್ತೆಯಾಗಿರುವ ಸಂಬಂಧ ಬಾಂಬೆ ಹೈಕೋರ್ಟ್ ಶುಕ್ರವಾರ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಲಿದೆ.
ಸಮುದ್ರ ಜೀವಿಗಳ ಮೇಲೆ ಇಂತಹ ಮಾಲಿನ್ಯ ಉಂಟುಮಾಡುವ ಗಂಭೀರ ಪರಿಣಾಮಗಳನ್ನು ಮುಖ್ಯ ನ್ಯಾಯಮೂರ್ತಿ ಡಿ ಕೆ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಎಂ ಎಂ ಸಥಾಯೆ ಅವರಿದ್ದ ಪೀಠ ಎತ್ತಿ ತೋರಿಸಿದೆ.
ಕೇಂದ್ರೀಯ ಮೀನುಗಾರಿಕಾ ಸಂಶೋಧನಾ ಸಂಸ್ಥೆ ನಡೆಸಿದ್ದ ಅಧ್ಯಯನ ಆಧರಿಸಿ ಆಂಗ್ಲ ದೈನಿಕ ʼಟೈಮ್ಸ್ ಆಫ್ ಇಂಡಿಯಾʼ ಪ್ರಕಟಿಸಿದ್ದ ವರದಿ ಪರಿಗಣಿಸಿದ ನ್ಯಾಯಾಲಯ ಪ್ರಕರಣ ದಾಖಲಿಸಿಕೊಂಡಿದೆ.
ಮಾನವ ಸೇವಿಸುವ ಮೀನಿನ ಕರುಳಿನಲ್ಲಿ ಮೈಕ್ರೋ ಪಾಲಿಥಿನ್ ಇರುವುದನ್ನು ಅಧ್ಯಯನ ಬಹಿರಂಗಪಡಿಸಿತ್ತು.
ಮೈಕ್ರೊಪ್ಲಾಸ್ಟಿಕ್‌ಗೆ ಹೇರಿರುವ ನಿಷೇಧ ಪರಿಣಾಮ ರಹಿತವಾಗಿರುವುದನ್ನು ನ್ಯಾಯಾಲಯ ಖಂಡಿಸಿತು. ಕಸ ಉಂಟು ಮಾಡುವ ಪ್ರವಾಹದ ಬಗ್ಗೆಯೂ ಅದು ಕಳವಳ ವ್ಯಕ್ತಪಡಿಸಿತು.
ಸ್ವಾಭಾವಿಕ ಇಳಿಜಾರು ಇರುವ ಕಡೆ ಕಸ ತುಂಬಿಕೊಂಡು ಅಡ್ಡಿ ಉಂಟಾಗುತ್ತದೆ. ಇದರಿಂದ ಪ್ರವಾಹದ ನೀರು ಇಳಿಯಲು ಸಾಕಷ್ಟು ಸಮಯ ಹಿಡಿಯುತ್ತದೆ. ಇದು ಮುಂಬೈ ನಿವಾಸಿಗಳಗೆ ಸಾಕಷ್ಟು ಹಾನಿ ಉಂಟುಮಾಡಬಹುದು ಎಂದು ನ್ಯಾಯಾಲಯ ಹೇಳಿದೆ.
ತ್ಯಾಜ್ಯ ತಂದೊಡ್ಡುವ ಮಾಲಿನ್ಯ ಸಮುದ್ರ ಜೀವಿಗಳಿಗೆ ಮಾತ್ರವಲ್ಲದೆ ಮನುಷ್ಯರಿಗೂ ಅಪಾಯ ಉಂಟುಮಾಡುತ್ತದೆ ಎಂದ ಅದು ಕೇಂದ್ರೀಯ ಉತ್ತರ ಪೆಸಿಫಿಕ್ ಸಮುದ್ರದಲ್ಲಿ ಕಸದಿಂದಲೇ ಸೃಷ್ಟಿಯಾಗಿರುವ ತ್ಯಾಜ್ಯ ದ್ವೀಪ ಗ್ರೇಟ್ ಪೆಸಿಫಿಕ್ ಗಾರ್ಬೇಜ್ ಪ್ಯಾಚ್ ಬಗ್ಗೆ ಪ್ರಸ್ತಾಪಿಸಿತು. ಈ ಕಸದ ದ್ವೀಪ ಫ್ರಾನ್ಸ್ ದೇಶಕ್ಕಿಂತಲೂ ಮೂರು ಪಟ್ಟುದೊಡ್ಡದಾಗಿದ್ದು ಇದು ಮೈಕ್ರೋಪ್ಲಾಸ್ಟಿಕ್‌ನ ಭಾರೀ ಸಮೂಹ ಎಂದಿತು.
ನ್ಯಾಯಾಲಯದ ಆತಂಕಗಳಿಗೆ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್ ಬೀರೇಂದ್ರ ಸರಾಫ್ ಅವರು ನ್ಯಾಯಾಲಯಕ್ಕೆ ರಾಜ್ಯ ಸರ್ಕಾರದ ಸಹಕಾರ ನೀಡಲಿದೆ ಎಂದು ಭರವಸೆ ಇತ್ತರು.
“ಸಂಬಂಧಿತ ಇಲಾಖೆಗಳ ಮೂಲಕ ನಾವು ಎಲ್ಲಾ ನೆರವು ನೀಡುತ್ತೇವೆ. (ಮುಂಬೈನ ಪ್ರಸಿದ್ಧ ತಾಣವಾದ) ಮರೀನ್ ಡ್ರೈವ್‌ನಲ್ಲಿ ಕೆಲವೊಮ್ಮೆ ಟನ್‌ಗಳಷ್ಟು ಕಸ ಇರುತ್ತದೆ. ನಾವು ಕೊಡುವುದನ್ನೇ ಸಮುದ್ರ ನಮಗೆ ಮರಳಿಸುತ್ತದೆ ”ಎಂದು ಅವರು ಹೇಳಿದರು.
ಕಡಲತೀರದ ಮಾಲಿನ್ಯ ಮತ್ತು ಸಮುದ್ರ ಜೀವಿಗಳು ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಅದು ಬೀರುವ ಪ್ರಭಾವದ ಬಗ್ಗೆ ಇರುವ ತುರ್ತು ಆತಂಕಗಳನ್ನು ಪರಿಹರಿಸಲು ಮೀನುಗಾರಿಕಾ ಸಂಸ್ಥೆ, ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕೇಂದ್ರ ಪರಿಸರ ಸಚಿವಾಲಯದಿಂದ ನೆರವು ಪಡೆಯುವಂತೆ ನ್ಯಾಯಾಲಯ ಹೇಳಿದೆ.
ಮಹಾರಾಷ್ಟ್ರದ ಕರಾವಳಿಯಲ್ಲಿ ಮಾಲಿನ್ಯದ ಬಗ್ಗೆ 2021ರಲ್ಲಿ, ಆಗಿನ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ (ಈಗ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು) ಮತ್ತು ನ್ಯಾಯಮೂರ್ತಿ ಜಿ ಎಸ್ ಕುಲಕರ್ಣಿ ನೇತೃತ್ವದ ಪೀಠ ಇದೇ ರೀತಿಯ ಕಳವಳ ವ್ಯಕ್ತಪಡಿಸಿತ್ತು.