ಮುಂಬೈ ಮತ್ತದರ ಉಪನಗರಗಳಲ್ಲಿ ಹದಗೆಡುತ್ತಿರುವ ವಾಯು ಗುಣಮಟ್ಟ ಮತ್ತು ಹೆಚ್ಚುತ್ತಿರುವ ವಾಯುಮಾಲಿನ್ಯದ ಕುರಿತಾಗಿ ಬಾಂಬೆ ಹೈಕೋರ್ಟ್ ಮಂಗಳವಾರ ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ಪರಿಗಣಿಸಿದೆ.
ಮೆಟ್ರೋ ನಗರಿಯಲ್ಲಿನ ವಾಯು ಗುಣಮಟ್ಟ ಸೂಚ್ಯಂಕದಲ್ಲಿ (AQI) ತೀವ್ರ ಇಳಿಮುಖವಾಗಿರುವ ಬಗ್ಗೆ ಪತ್ರಿಕಾ ವರದಿಗಳು ಪ್ರಕಟವಾಗಿರುವುದನ್ನು ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಆರಿಫ್ ಡಾಕ್ಟರ್ ಅವರಿದ್ದ ವಿಭಾಗೀಯ ಪೀಠ ಉಲ್ಲೇಖಿಸಿದೆ.
“ಎಕ್ಯೂಐ ಕುರಿತಂತೆ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಮುಂದಾಗಿದ್ದೇವೆ. ಪ್ರತಿ ದಿನವೂ ಎಲ್ಲೆಡೆ ವಾಯು ಗುಣಮಟ್ಟ ಕುಸಿಯುತ್ತಿದೆ. ಮುಂಬೈನಲ್ಲಿ (ಉತ್ತಮ ಹವೆ ಇರುವಂತಹ) ಒಂದೇ ಒಂದು ಪ್ರದೇಶವೂ ಉಳಿದಿಲ್ಲ. ಮಹಾನಗರ ಪಾಲಿಕೆ ಮತ್ತಿತರ ಸಂಸ್ಥೆಗಳಿಗೆ ನೋಟಿಸ್ ನೀಡುತ್ತಿದ್ದು ಅವುಗಳಿಂದ ಪ್ರತಿಕ್ರಿಯೆ ಕೇಳುತ್ತಿದ್ದೇವೆ” ಎಂದು ನ್ಯಾಯಾಲಯ ಹೇಳಿದೆ.
ಸಮಸ್ಯೆ ನಿಭಾಯಿಸಲು ಕೈಗೊಂಡ ಕ್ರಮಗಳ ಬಗ್ಗೆ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(BMC), ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿ (MPCB) ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರತಿಕ್ರಿಯೆ ನೀಡಬೇಕೆಂದು ನ್ಯಾಯಾಲಯ ಸೂಚಿಸಿದೆ.
ಮುಂಬೈ ನಿವಾಸಿಗಳಾದ ಅಮರ್ ಟಿ ಕೆ, ಆನಂದ್ ಝಾ ಮತ್ತು ಸಂಜಯ್ ಸುರ್ವೆ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸುವ ನಿರ್ಧಾರ ಕೈಗೊಂಡಿತು. ಮುಂಬೈನಲ್ಲಿ ವಾಯುಮಾಲಿನ್ಯ ನಿಯಂತ್ರಿಸುವಂತೆ ಮಹಾರಾಷ್ಟ್ರ ಸರ್ಕಾರ ಮತ್ತು ಬಿಎಂಸಿಗೆ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಕೋರಿದ್ದರು.
ಸಾರ್ವಜನಿಕ ಸ್ಥಳಗಳಲ್ಲಿ ವೇಗವಾಗಿ ಬೆಳೆಯುವ ಮರಗಳನ್ನು ನೆಡುವ ಮೂಲಕ ಹಸಿರು ಹೊದಿಕೆಯನ್ನು ಹೆಚ್ಚಿಸಲು ಅಧಿಕಾರಿಗಳು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಬಜೆಟ್ ಹಂಚಿಕೆ ಮತ್ತು ಬಳಕೆಯ ವಿವರಗಳನ್ನು ಒಳಗೊಂಡಂತೆ ಕಳೆದ 10 ವರ್ಷಗಳಲ್ಲಿ BMC ಯ ಉದ್ಯಾನ ಮತ್ತು ವೃಕ್ಷ ಇಲಾಖೆಯ ಕೆಲಸಗಳ ಬಗ್ಗೆ ತನಿಖೆ ನಡೆಸಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು. ಈ ಅರ್ಜಿ ಮತ್ತು ಸ್ವಯಂ ಪ್ರೇರಿತ ಅರ್ಜಿಗಳೆರಡರ ವಿಚಾರಣೆಯನ್ನು ನ್ಯಾಯಾಲಯವು ನವೆಂಬರ್ 6ಕ್ಕೆ ಮುಂದೂಡಿದೆ.