
ಅಲಾಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ದೆಹಲಿ ಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಅವರ ನಿವಾಸದಲ್ಲಿ ಅಪಾರ ಪ್ರಮಾಣದ ಸುಟ್ಟು ಕರಕಲಾದ ನಗದು ರಾಶಿ ಪತ್ತೆಯಾದ ಆರೋಪಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಅನುಮತಿಸುವಂತೆ ಬಾಂಬೆ ವಕೀಲರ ಸಂಘ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರನ್ನು ಔಪಚಾರಿಕವಾಗಿ ಕೋರಿದೆ.
ಮಾರ್ಚ್ 14ರ ಸಂಜೆ ಅಗ್ನಿ ಅವಘಡಕ್ಕೆ ತುತ್ತಾದ ನ್ಯಾ.ವರ್ಮಾ ಅವರ ದೆಹಲಿ ನಿವಾಸದಲ್ಲಿ ಅಗ್ನಿಶಾಮಕ ದಳ ಬೆಂಕಿ ನಂದಿಸುವಾಗ ಸುಟ್ಟ ನೋಟಿನ ಕಂತೆಗಳು ಪತ್ತೆಯಾಗಿದ್ದು ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು.
ಭ್ರಷ್ಟಾಚಾರ ತಡೆ ಕಾಯಿದೆ- 1988 ಮತ್ತು ಭಾರತೀಯ ನ್ಯಾಯ ಸಂಹಿತೆ- 2023ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲು ಅನುಮತಿ ನೀಡುವಂತೆ ಸಂಘ ಸಿಜೆಐ ಅವರನ್ನು ಜೂನ್ 2, 2025ರಂದು ಬರೆದಿರುವ ಪತ್ರದಲ್ಲಿ ವಿನಂತಿಸಿದೆ.
ಸಂಘದ ಅಧ್ಯಕ್ಷ ಅಹ್ಮದ್ ಅಬ್ದಿ ಮತ್ತು ಕಾರ್ಯದರ್ಶಿ ಏಕನಾಥ್ ಆರ್ ಧೋಕಲೆ ಸಹಿ ಮಾಡಿರುವ ಪತ್ರದ ಪ್ರಮುಖಾಂಶಗಳು ಇಂತಿವೆ:
ಭ್ರಷ್ಟಾಚಾರ ತಡೆ ಕಾಯಿದೆ- 1988 ಮತ್ತು ಭಾರತೀಯ ನ್ಯಾಯ ಸಂಹಿತೆ- 2023ರ ಅಡಿಯಲ್ಲಿ ನ್ಯಾ. ವರ್ಮಾ ವಿರುದ್ಧ ಎಫ್ಐಆರ್ ದಾಖಲಿಸಲು ಸಿಜೆಐ ಅವರು ಅನುಮತಿ ನೀಡಬೇಕು.
ಕಾನೂನಿನ ಎದುರು ಎಲ್ಲರೂ ಸಮಾನರು. ಸಾಂಸ್ಥಿಕ ಉತ್ತರದಾಯಿತ್ವ ಎಂಬುದು ಮಹತ್ವದ್ದು.
ಕಾನೂನು ಜಾರಿ ಅಧಿಕಾರಿಗಳು ಹಂಚಿಕೊಂಡ ಛಾಯಾಚಿತ್ರಗಳು ಮತ್ತು ವಿಡಿಯೋ ದೃಶ್ಯಾವಳಿಗಳು ಸೇರಿದಂತೆ ವಿಶ್ವಾಸಾರ್ಹ ಪುರಾವೆಗಳು ಸಂಜ್ಞೇಯ ಅಪರಾಧದತ್ತ ಬೆರಳು ಮಾಡುತ್ತಿವೆ.
ಪ್ರಕರಣದ ಗಂಭೀರತೆಯ ಹೊರತಾಗಿಯೂ ಇನ್ನೂ ಎಫ್‌ಐಆರ್ ದಾಖಲಾಗಿಲ್ಲ. ಅಧಿಕೃತ ಮುಟ್ಟುಗೋಲು ಅಥವಾ ಪಂಚನಾಮೆ ನಡೆದಿಲ್ಲ.
ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ನ್ಯಾಯಮೂರ್ತಿಗಳು ಕೂಡ 'ಸಾರ್ವಜನಿಕ ಸೇವಕ'ರಾಗಿದ್ದು ಸಿಜೆಐ ಅವರಿಂದ ಅನುಮತಿ ದೊರೆತರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬಹುದು ಎಂದು ಕೆ ವೀರಸ್ವಾಮಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಎಫ್‌ಐಆರ್ ದಾಖಲಾಗುವುದು ವಿಳಂಬವಾಗುತ್ತಿರುವುದರಿಂದ ಸಾಕ್ಷ್ಯಗಳನ್ನು ತಿರುಚುವ ಸಾಧ್ಯತೆ ಇದೆ. ಆದ್ದರಿಂದ ಕೂಡಲೇ ಎಫ್‌ಐಆರ್ ದಾಖಲಿಸಲು ಸಿಜೆಐ ಅನುಮತಿಸಬೇಕು.
ಘಟನೆಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ರಕ್ಷಿಸುವಂತೆ ದೆಹಲಿ ಪೊಲೀಸ್ ಅಥವಾ ಸಿಬಿಐಗೆ ಸಿಜೆಐ ಅವರು ನಿರ್ದೇಶನ ನೀಡಬೇಕು.
ದೂರು ದಾಖಲಿಸಲು ಅನುವಾಗುವಂತೆ ನ್ಯಾ. ವರ್ಮಾ ವಿರುದ್ಧ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನೇಮಿಸಿದ್ದ ಆಂತರಿಕ ಸಮಿತಿಯ ವರದಿಯ ಪ್ರತಿಯನ್ನು ತನಗೆ ಒದಗಿಸಬೇಕು.
[ಪತ್ರದ ಪ್ರತಿ]