ಕರ್ನಾಟಕದ ಹೆಮ್ಮೆಯ ಲೇಖಕಿ, ವಕೀಲೆ ಬಾನು ಮುಷ್ತಾಕ್‌ಗೆ ಬೂಕರ್ ಪ್ರಶಸ್ತಿಯ ಗೌರವ

ಕೆಲ ವರ್ಷಗಳ ಹಿಂದೆ ಬಾನು ಮುಷ್ತಾಕ್ ಅವರ ವೃತ್ತಿಜೀವನ, ಸಾಹಿತ್ಯದ ಒಡನಾಟ, ಪತ್ರಕರ್ತೆಯ ದಿನಗಳ ಕುರಿತು ʼಬಾರ್ ಅಂಡ್ ಬೆಂಚ್ʼ ಸಂದರ್ಶಿಸಿತ್ತು. ಸಂದರ್ಶನದ ಲಿಂಕ್‌ ಇಲ್ಲಿದೆ.
Banu Mushtaq and Deepa Bhasth and Chair of Booker judges Max Porter
Banu Mushtaq and Deepa Bhasth and Chair of Booker judges Max Porter The Booker Prize Foundation
Published on

ಕನ್ನಡದ ಮಹತ್ವದ ಲೇಖಕಿ, ಪತ್ರಕರ್ತೆ ಹಾಗೂ ವಕೀಲೆ ಬಾನು ಮುಷ್ತಾಕ್‌ ಅವರು ಅಂತಾರಾಷ್ಟ್ರೀಯ ಬೂಕರ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಲಂಡನ್‌ನ ಟೇಟ್‌ ಮಾಡರ್ನ್‌ನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಲೇಖಕಿ ಬಾನು ಮುಷ್ತಾಕ್‌ ಹಾಗೂ ಕೃತಿಯ ಅನುವಾದಕಿ ದೀಪಾ ಭಸ್ತಿ ಅವರು ಪ್ರಶಸ್ತಿ ಸ್ವೀಕರಿಸಿದರು.

ಬಾನು ಅವರ ಕನ್ನಡದ ಕೃತಿಯ ಇಂಗ್ಲಿಷ್‌ ಅನುವಾದ ʼಹಾರ್ಟ್‌ ಲ್ಯಾಂಪ್‌ʼಗೆ ಈ ಪ್ರತಿಷ್ಠಿತ ಪ್ರಶಸ್ತಿ ದೊರೆತಿರುವುದು ವಿಶೇಷ. ಇದೇ ಅನುವಾದಿತ ಕೃತಿಗೆ ಈ ಹಿಂದೆ ‘ಪೆನ್ ಟ್ರಾನ್ಸ್‌ಲೇಟ್ಸ್’ ಪ್ರಶಸ್ತಿಯೂ ದೊರೆತಿತ್ತು ಎಂಬುದು ಮತ್ತೊಂದು ಹೆಗ್ಗಳಿಕೆ. ಕರ್ನಾಟಕದ ಅರವಿಂದ ಅಡಿಗ ಅವರ ಇಂಗ್ಲಿಷ್‌ ಕೃತಿ 'ದ ವೈಟ್‌ ಟೈಗರ್‌'ಗೆ ಈ ಹಿಂದೆ ಬೂಕರ್‌ ಪ್ರಶಸ್ತಿ ದೊರೆತಿತ್ತು ಎನ್ನುವುದನ್ನು ಇಲ್ಲಿ ನೆನೆಯಬಹುದು.

ಬಾನು ಮುಷ್ತಾಕ್‌ ಅವರು 1990ರಿಂದ 2023ರ ವರೆಗಿನ ಅವಧಿಯಲ್ಲಿ ಕನ್ನಡದಲ್ಲಿ ಬರೆದಿರುವ ಹನ್ನೆರಡು ಕತೆಗಳನ್ನು ಅನುವಾದಕಿ ಕೊಡಗಿನ ದೀಪಾ ಭಸ್ತಿ ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದರು. ಮುಸ್ಲಿಂ ಸಮುದಾಯದ ಮಹಿಳೆಯರ ಬದುಕು, ತಲ್ಲಣಗಳು ಇಲ್ಲಿನ ಕತೆಗಳ ಜೀವಾಳ.

ಪ್ರಶಸ್ತಿಯ ಅಂತಿಮ ಸುತ್ತಿಗೆ ಜಪಾನೀಸ್‌, ಇಟ್ಯಾಲಿಯನ್‌, ಡ್ಯಾನಿಷ್‌ ಭಾಷೆಯ ತಲಾ ಒಂದು ಕೃತಿಗಳು ಆಯ್ಕೆಯಾಗಿದ್ದವು. ಅವುಗಳನ್ನು ಹಿಂದಿಕ್ಕಿ 'ಹಾರ್ಟ್‌ ಲ್ಯಾಂಪ್‌' ಕೃತಿಯು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಬೂಕರ್ ಪ್ರಶಸ್ತಿಯು 50 ಸಾವಿರ ಪೌಂಡ್‌ (ಅಂದಾಜು ರೂ. 57.28 ಲಕ್ಷ) ಬಹುಮಾನದ ಮೊತ್ತವನ್ನು ಒಳಗೊಂಡಿದೆ.

ಪ್ರಶಸ್ತಿ ಘೋ‍‍‍ಷಣೆ ಮಾಡಿದ ಆಯ್ಕೆ ಸಮಿತಿಯ ಅಧ್ಯಕ್ಷರಾದ ಮ್ಯಾಕ್ಸ್‌ ಪೋರ್ಟರ್‌ ಅವರು ಅನುವಾದದ 'ಕ್ರಾಂತಿಕಾರಕ' ಸೆಳೆತದ ಬಗ್ಗೆಯೂ ಮೆಚ್ಚುಗೆ ಸೂಚಿಸಿದರು. "ಕನ್ನಡದ ಈ ಸುಂದರವೂ, ಜೀವಪರವೂ ಆದ ಕತೆಗಳು ತಮ್ಮೊಳಗಿನ ಸಾಮಾಜಿಕ-ರಾಜಕೀಯ ವೈಶಿಷ್ಟ್ಯತೆಯ ಶ್ರೀಮಂತಿಕೆಯ ಮೂಲಕ ಇತರೆ ಭಾಷೆ, ಭಾಷಾ ವೈವಿಧ್ಯತೆಗಳನ್ನು ತೆರೆದಿಡುತ್ತವೆ. ಈ ಕತೆಗಳು ಮಹಿಳೆಯರ ಹಕ್ಕುಗಳು, ಸಂತಾನದ ಹಕ್ಕು, ಧರ್ಮ, ಜಾತಿ, ಅಧಿಕಾರ ಹಾಗೂ ಶೋಷಣೆಗಳ ಸ್ವರೂಪಗಳನ್ನು ಹಿಡಿದಿಡುತ್ತವೆ," ಎಂದು ವ್ಯಾಖ್ಯಾನಿಸಿದರು.

ಕೆಲ ವರ್ಷಗಳ ಹಿಂದೆ ಬಾನು ಮುಷ್ತಾಕ್‌ ಅವರ ವಕೀಲಿಕೆಯ ವೃತ್ತಿ ಜೀವನ, ಸಾಹಿತ್ಯದ ಒಡನಾಟ, ಪತ್ರಿಕೋದ್ಯಮ, ಸಾಮಾಜಿಕ ಹೋರಾಟದ ದಿನಗಳ ಕುರಿತು ʼಬಾರ್‌ ಅಂಡ್‌ ಬೆಂಚ್‌ʼ ಸಂದರ್ಶಿಸಿತ್ತು. ‌ಆಸಕ್ತರ ಮರು ಓದಿಗಾಗಿ ಸಂದರ್ಶನ ಲಿಂಕ್‌ ಈ ಕೆಳಗಿದೆ:

[ಅನುಸಂಧಾನ] ವಕೀಲಿಕೆ ಎಂಬುದು ವಿಚಿತ್ರ, ವಿಶಿಷ್ಟ ಅನುಭವ ಕೊಡುವ ವೃತ್ತಿ: ನ್ಯಾಯವಾದಿ, ಲೇಖಕಿ ಬಾನು ಮುಷ್ತಾಕ್

ಬೂಕರ್ ಪ್ರಶಸ್ತಿ ಘೋಷಣೆಯ ಕ್ಷಣಗಳು...

Kannada Bar & Bench
kannada.barandbench.com