ಬಂಧನಕ್ಕೂ 3 ದಿನ ಮುನ್ನ ಸಮೀರ್ ವಾಂಖೆಡೆಗೆ ನೋಟಿಸ್ ನೀಡಲಾಗುವುದು: ಬಾಂಬೆ ಹೈಕೋರ್ಟ್‌ಗೆ ಮುಂಬೈ ಪೊಲೀಸರ ಭರವಸೆ

“ಮುಂಬೈ ಪೊಲೀಸರು ಇಂದು ನನ್ನನ್ನು ಬಂಧಿಸುತ್ತಾರೆ ಎಂಬುದು ನನ್ನ ಆತಂಕವಾಗಿದೆ. ಸರ್ಕಾರ ನನ್ನ ಹಕ್ಕುಗಳನ್ನು ಕಸಿದುಕೊಳ್ಳುವವರೆಗೆ ನ್ಯಾಯಮೂರ್ತಿಗಳು ಕಾಯಬಾರದು” ಎಂದು ವಾಂಖೆಡೆ ಪರವಾಗಿ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು.
Sameer Wankhede and Bombay HC
Sameer Wankhede and Bombay HC

ವಿಲಾಸಿ ಹಡಗು ಮಾದಕವಸ್ತು ಪ್ರಕರಣಕ್ಕೆ ತಳಕು ಹಾಕಿಕೊಂಡಿರುವ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕವಸ್ತು ನಿಯಂತ್ರಣ ದಳದ (ಎನ್‌ಸಿಬಿ) ವಲಯ ನಿರ್ದೇಶಕ ಸಮೀರ್‌ ವಾಂಖೆಡೆ ಅವರನ್ನು ಬಂಧಿಸುವ ಮೂರು ದಿನಗಳಿಗೂ ಮುನ್ನ ಅವರಿಗೆ ನೋಟಿಸ್‌ ನೀಡಲಾಗುವುದು ಎಂದು ಮುಂಬೈ ಪೊಲೀಸರು ಗುರುವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಪೊಲೀಸರು ನೀಡಿದ ಭರವಸೆಯನ್ನು ದಾಖಲಿಸಿಕೊಂಡ ನ್ಯಾಯಮೂರ್ತಿಗಳಾದ ನಿತಿನ್ ಜಾಮ್‌ದಾರ್ ಮತ್ತು ಎಸ್‌ ವಿ ಕೊತ್ವಾಲ್ ಅವರಿದ್ದ ಪೀಠ ಸಿಬಿಐ ಅಥವಾ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಪ್ರಕರಣದ ತನಿಖೆ ವರ್ಗಾಯಿಸುವಂತೆ ಕೋರಿ ವಾಂಖೆಡೆ ಅವರು ಸಲ್ಲಿಸಿದ್ದ ಮನವಿಯನ್ನು ವಿಲೇವಾರಿ ಮಾಡಿತು.

ಬಂಧನಕ್ಕೆ ಮೂರು ಕೆಲಸದ ಅವಧಿಯ ದಿನಗಳು ಇರುವಂತೆ ನೋಟಿಸ್‌ ನೀಡಲಾಗುವುದು ಎಂದು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಭರವಸೆ ನೀಡಿರುವುದಾಗಿ ಕೋರ್ಟ್‌ ತಿಳಿಸಿದೆ. ಬಳಿಕ ಅರ್ಜಿ ವಿಲೇವಾರಿ ಮಾಡಲು ಮುಂದಾದ ನ್ಯಾಯಾಲಯ ಪ್ರಕರಣದ ಅರ್ಹತೆಯ ಕುರಿತಾಗಿ ತಾನು ಯಾವುದೇ ತೀರ್ಪು ನೀಡಿಲ್ಲ ಎಂದು ಸ್ಪಷ್ಟಪಡಿಸಿತು.

ವಾಂಖೆಡೆ ವಿರುದ್ಧ ಕೇಳಿಬಂದಿರುವ ಸುಲಿಗೆ ಮತ್ತು ಭ್ರಷ್ಟಾಚಾರ ಆರೋಪಗಳ ತನಿಖೆಗಾಗಿ ಮುಂಬೈ ಪೊಲೀಸರು ಇಂದು ಬೆಳಿಗ್ಗೆಯಷ್ಟೇ 4 ಸದಸ್ಯರ ತಂಡ ರಚಿಸಿದ್ದರು.

Also Read
ಸಮೀರ್ ವಾಂಖೆಡೆ ವಿರುದ್ಧದ ಸುಲಿಗೆ ಆರೋಪ: ತನಿಖೆಗೆ ಆದೇಶಿಸಿದ ಮುಂಬೈ ಪೊಲೀಸ್‌

ವಾಂಖೆಡೆ ಪರ ಹಾಜರಾದ ಹಿರಿಯ ವಕೀಲ ಅತುಲ್ ನಂದಾ, ವಕೀಲರಾದ ಸುಜಯ್ ಕಾಂತಾವಾಲಾ ಹಾಗೂ ರಮೀಜಾ ಹಕೀಮ್ ಅವರು "ಹೈಕೋರ್ಟ್‌ನಲ್ಲಿ ವಿಷಯ ಪ್ರಸ್ತಾಪಿಸಿ ವಾಂಖೆಡೆ ಅವರನ್ನು ಮುಂಬೈ ಪೊಲೀಸರು ಬಂಧಿಸಲಿದ್ದಾರೆ" ಎಂದು ಹೇಳಿದ್ದರು.

“ಮುಂಬೈ ಪೊಲೀಸರು ಇಂದು ನನ್ನನ್ನು ಬಂಧಿಸುತ್ತಾರೆ ಎಂಬುದು ನನ್ನ ಆತಂಕವಾಗಿದೆ. ಸರ್ಕಾರ ನನ್ನ ಹಕ್ಕುಗಳನ್ನು ಕಸಿದುಕೊಳ್ಳುವವರೆಗೆ ನ್ಯಾಯಮೂರ್ತಿಗಳು ಕಾಯಬಾರದು” ಎಂದು ವಾಂಖೆಡೆ ಪರವಾಗಿ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

"ನ್ಯಾಯಮೂರ್ತಿಗಳು ನನ್ನ ಹಕ್ಕುಗಳನ್ನು ರಕ್ಷಿಸಬೇಕು. ನಾನು ಮಾದಕವಸ್ತು ಸಾಗಾಟಗಾರನಲ್ಲ. ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಅಥವಾ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವರ್ಗಾಯಿಸಬೇಕು. ಪೊಲೀಸ್ ಕಾಯಿದೆ ಉಲ್ಲಂಘಿಸಿ ತನಿಖೆ ಆರಂಭಿಸಲಾಗಿದೆ" ಎಂದು ಅವರು ವಾದಿಸಿದರು.

ಇದನ್ನು ಪಬ್ಲಿಕ್‌ ಪ್ರಾಸಿಕ್ಯೂಟರ್‌ ವಿರೋಧಿಸಿದರು. “ಮುಂಬೈ ಪೊಲೀಸರು ಈಗಷ್ಟೇ ವಿಚಾರಣೆ ಆರಂಭಿಸಿದ್ದು ವಾಂಖೆಡೆ ಅವರ ಮನವಿ ಅಕಾಲಿಕವಾಗಿದೆ. ನಾವು ಸ್ವೀಕರಿಸಿದ ದೂರು ವ್ಯಕ್ತಿಗಳ ವಿರುದ್ಧವಾಗಿಲ್ಲ. ಇಂದಿನವರೆಗೆ ಮುಂಬೈ ಪೊಲೀಸರು ಎನ್‌ಸಿಬಿ ಅಧಿಕಾರಿ ವಿರುದ್ಧ ಎಫ್‌ಐಆರ್‌ ದಾಖಲಿಸಿಲ್ಲ” ಎಂದು ಹೇಳಿದರು.

ಅಧಿಕಾರಿಯ ವಿರುದ್ಧ ಯಾವುದೇ ಒತ್ತಾಯಪೂರ್ವಕ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿಕೆ ನೀಡುವಂತೆ ನ್ಯಾಯಾಲಯ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅವರನ್ನು ಕೇಳಿತು. ಅದರಂತೆ ಯಾವುದೇ ಕ್ರಮ ತೆಗೆದುಕೊಳ್ಳುವ 3 ದಿನಗಳ ಮೊದಲು ನೋಟಿಸ್‌ ನೀಡಲಾಗುವುದು ಎಂದು ಅವರು ಭರವಸೆ ನಿಡಿದರು. ಇದನ್ನು ದಾಖಲಿಸಿಕೊಂಡ ನ್ಯಾಯಾಲಯ ಅರ್ಜಿಯನ್ನು ವಿಲೇವಾರಿ ಮಾಡಿತು.

Related Stories

No stories found.
Kannada Bar & Bench
kannada.barandbench.com