ಮಾದಕವಸ್ತು ನಿಯಂತ್ರಣ ದಳದ (ಎನ್‌ಸಿಬಿ) ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧದ ಸುಲಿಗೆ ಮತ್ತು ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಮುಂಬೈ ಪೊಲೀಸರು ನಾಲ್ಕು ಅಧಿಕಾರಿಗಳ ತಂಡ ರಚಿಸಿದ್ದಾರೆ.
ಇಬ್ಬರು ಮೇಲ್ವಿಚಾರಕರು ಹಾಗೂ ನಾಲ್ವರು ಸದಸ್ಯರನ್ನು ತಂಡ ಒಳಗೊಂಡಿದ್ದು ವಾಂಖೆಡೆ ವಿರುದ್ಧದ ಸುಲಿಗೆ ಮತ್ತು ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ನಾಲ್ಕು ದೂರುಗಳ ಕುರಿತು ತಂಡವು ತನಿಖೆ ನಡೆಸಲಿದೆ. ಈ ಕುರಿತಂತೆ ಬುಧವಾರ ಆದೇಶ ಹೊರಡಿಸಲಾಗಿದೆ. ತಂಡವು ಸಹಾಯಕ ಪೊಲೀಸ್ ಆಯುಕ್ತ ಮಿಲಿಂದ್ ಖೇಟ್ಲೆ, ಇನ್ಸ್‌ಪೆಕ್ಟರ್ ಅಜಯ್ ಸಾವಂತ್, ಸಹಾಯಕ ಇನ್ಸ್‌ಪೆಕ್ಟರ್ ಶ್ರೀಕಾಂತ್ ಕರ್ಕರ್ ಹಾಗೂ ಸಬ್ ಇನ್ಸ್‌ಪೆಕ್ಟರ್ ಪ್ರಕಾಶ್ ಗಾವ್ಳಿ ಅವರನ್ನು ಒಳಗೊಂಡಿದೆ.
ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಆರೋಪಿಯಾಗಿರುವ ವಿಲಾಸಿ ಹಡಗು ಮಾದಕವಸ್ತು ಪ್ರಕರಣದ ಸ್ವತಂತ್ರ ಸಾಕ್ಷಿ ಪ್ರಭಾಕರ್ ಸೈಲ್, ನಿತಿನ್ ದೇಶಮುಖ್, ಮುಂಬೈ ವಕೀಲರಾದ ಸುಧಾ ದ್ವಿವೇದಿ ಹಾಗೂ ಕನಿಷ್ಕಾ ಜೈನ್ ಅವರು ಸಲ್ಲಿಸಿದ ದೂರುಗಳ ತನಿಖೆ ನಡೆಯಲಿದೆ.
ಎನ್‌ಸಿಬಿ ಖಾಲಿ ಹಾಳೆಗಳಿಗೆ ಸಹಿ ಹಾಕಿಸಿಕೊಂಡಿದೆ ಎಂದು ಸೈಲ್ ಅವರು ಸಲ್ಲಿಸಿದ್ದ ಅಫಿಡವಿಟ್ ಕಳೆದ ಭಾನುವಾರ ಸುದ್ದಿಗೆ ಗ್ರಾಸವಾಗಿತ್ತು. ಆರ್ಯನ್ ಖಾನ್ ಪ್ರಕರಣವನ್ನು ಇತ್ಯರ್ಥಪಡಿಸಲು ₹25 ಕೋಟಿಗೆ ಬೇಡಿಕೆಯಿಟ್ಟಿದ್ದ ದೂರವಾಣಿ ಸಂಭಾಷಣೆಯನ್ನು ಆಲಿಸಿದ ಬಗ್ಗೆಯೂ ಅಫಿಡವಿಟ್‌ನಲ್ಲಿ ತಿಳಿಸಲಾಗಿತ್ತು.