ತನಿಖೆಗೆ ಅಡ್ಡಿಪಡಿಸುವ ಯತ್ನಗಳನ್ನು ತಡೆಯಲು ನಿರ್ದೇಶಿಸುವಂತೆ ಕೋರಿ ಆರ್ಯನ್ ಖಾನ್ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಸಿಬಿ ಹಾಗೂ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೇಡೆ ಮುಂಬೈ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಯಾವುದೇ ಸಾಕ್ಷ್ಯ ಅಥವಾ ತನಿಖೆ ಹಾಳುಗೆಡವಬಾರದು ಎಂದು ಎನ್‌ಸಿಬಿ ಪ್ರಾರ್ಥಿಸಿದ್ದರೆ ವಾಂಖೆಡೆ ಅವರು ತನ್ನ ವಿರುದ್ಧ ಎತ್ತಿರುವ ವೈಯಕ್ತಿಕ ಆರೋಪಗಳ ವಿರುದ್ಧ ಅಹವಾಲು ಸಲ್ಲಿಸಿದ್ದಾರೆ. ಸೋಮವಾರ ನ್ಯಾಯಾಲಯಕ್ಕೆ ಖುದ್ದು ಹಾಜರಾದ ವಾಂಖೆಡೆ ತಮ್ಮ ಹಾಗೂ ಕುಟುಂಬದ ಸದಸ್ಯರ ವಿರುದ್ಧ ವೈಯಕ್ತಿಕ ಆರೋಪ ಮಾಡಲಾಗುತ್ತಿದೆ ಎಂದು ತಿಳಿಸಿದರು.
"ನನ್ನ ಕುಟುಂಬದ ಸದಸ್ಯರ ಮೇಲೆ ಏಕೆ ಆರೋಪ ಮಾಡಲಾಗುತ್ತಿದೆ? ನನ್ನ ಮೇಲ್ವಿಚಾರಣೆ ಹುದ್ದೆಯಲ್ಲಿರುವ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆಯೇ? ನನ್ನನ್ನು ದಿಕ್ಕು ತಪ್ಪಿಸಲು ಮತ್ತು ನ್ಯಾಯಾಲಯದಲ್ಲಿ ನನ್ನನ್ನು ವಿಫಲಗೊಳಿಸಲೆಂದೇ ಹೀಗೆ ಮಾಡಲಾಗುತ್ತಿದೆ" ಎಂದು ಅವರು ಹೇಳಿದರು.
ನ್ಯಾಯಾಲಯದ ಮುಂದೆ ಸಲ್ಲಿಸಲಾಗಿರುವ ಎರಡು ಪುಟಗಳ ಅಫಿಡವಿಟ್‌ನಲ್ಲಿ ವಾಂಖೆಡೆ ಅವರು, "ತಮ್ಮನ್ನು ಬಂಧಿಸುವ ಹಾಗೂ ಸೇವೆಯಿಂದ ಹೊರಗೆ ಹಾಕುವ ಬೆದರಿಕೆಗಳಿವೆ. ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ದಾಳಿಗಳು ನಡೆಯುತ್ತಿವೆ" ಎಂದಿದ್ದಾರೆ. "ಪ್ರಾಮಾಣಿಕ ಹಾಗೂ ಪಕ್ಷಪಾತ ರಹಿತ ತನಿಖೆಯನ್ನು ಕೈಗೊಳ್ಳುವುದು ಕೆಲ ಹಿತಾಸಕ್ತಿಗಳಿಗೆ ಬೇಕಿಲ್ಲದೆ ಇರುವುದರಿಂದ ತಮಗೆ ಬಂಧನದ ಭೀತಿ ಎದುರಾಗಿದೆ" ಎಂದು ಅವರು ಹೇಳಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ರೂ. 25 ಕೋಟಿ ವಸೂಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಪ್ರಭಾಕರ್ ಸೈಲ್ ಎಂಬ ವ್ಯಕ್ತಿ ಸ್ಫೋಟಕ ಹೇಳಿಕೆ ಬಹಿರಂಗಪಡಿಸಿದ್ದರು. ಎನ್‌ಸಿಬಿ ಅಧಿಕಾರಿಗಳು ಖಾಲಿ ಪೇಪರ್ ಮೇಲೆ ಸಹಿ ಹಾಕಿಸಿಕೊಂಡ ಬಗ್ಗೆಯೂ ಹೇಳಿದ್ದರು. "25 ಕೋಟಿ ರೂಪಾಯಿಯಲ್ಲಿ ರೂ 18 ಕೋಟಿ ರೂಪಾಯಿ ಕೊಡುವುದೆಂದು ಮಾತುಕತೆಯಾಗಿತ್ತು. ಖಾಸಗಿ ಪತ್ತೇದಾರ ಹಾಗೂ ಪ್ರಕರಣದ ಸ್ವತಂತ್ರ ಸಾಕ್ಷಿಯಾದ ಕೆ ಪಿ ಗೋಸಾವಿ ಹಾಗೂ ಸ್ಯಾಂ ಡಿಸೋಜಾ ನಡುವಿನ ರೂ 18 ಕೋಟಿ ವ್ಯವಹಾರದ ಬಗೆಗೆ ಕೇಳಿದ್ದೇನೆ. ಅದರಲ್ಲಿ ರೂ 8 ಕೋಟಿ ಸಮೀರ್ ವಾಂಖೆಡೆಗೆ ಪಾವತಿಸಬೇಕಿತ್ತು. ಗೋಸಾವಿ ಅವರಿಂದ ನಗದು ಪಡೆದು ಸ್ಯಾಂ ಅವರಿಗೆ ನೀಡಿರುವುದಾಗಿ ಗೋಸಾವಿ ಅವರ ಖಾಸಗಿ ಅಂಗರಕ್ಷಕ ಎಂದು ಹೇಳಿಕೊಂಡ ಸೈಲ್ ತಿಳಿಸಿದ್ದರು.
ಈ ಆರೋಪದ ಬೆನ್ನಿಗೇ ಮಾದಕವಸ್ತು ನಿಯಂತ್ರಣ ದಳ (ಎನ್‌ಸಿಬಿ) ಮತ್ತು ವಾಂಖೆಡೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. "ಯಾವುದೇ ರೀತಿಯ ತನಿಖೆ ಅಥವಾ ವಿಚಾರಣೆಗೆ ಬದ್ಧ. ನನಗೆ 15 ವರ್ಷಗಳ ಸೇವೆಯ ಅನುಭವವಿದೆ. ಆದರೆ ಕೇವಲ ನನ್ನ ವೈಯಕ್ತಿಕ ಜೀವನ ಮತ್ತು ಕೆಲಸವನ್ನು ಗುರಿಯಾಗಿಸಿ ಅಂತಹ ಆರೋಪ ಮಾಡಬಾರದು" ಇತ್ಯಾದಿ ಅಂಶಗಳನ್ನು ವಾಂಖೆಡೆ ಎರಡು ಪುಟಗಳ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಈ ಮಧ್ಯೆ ಇಂತಹ (ಸೈಲ್ ಅವರ) ದಾಖಲೆ ಬಿಡುಗಡೆ ಮಾಡುವುದರಿಂದ ಬಾಂಬೆ ಹೈಕೋರ್ಟ್‌ನಲ್ಲಿ ನಾಳೆ ನಡೆಯಲಿರುವ ಆರ್ಯನ್ ಖಾನ್ ಅವರ ಜಾಮೀನು ವಿಚಾರಣೆ ಸೇರಿದಂತೆ ಆರೋಪಿಗಳ ಪ್ರಕರಣಗಳ ಮೇಲೆ ಇದು ಪರಿಣಾಮ ಬೀರುತ್ತದೆ ಎಂದು ಎಸ್‌ಪಿಪಿ ಅದ್ವೈತ್ ಸೇಠ್ನಾ ನ್ಯಾಯಾಲಯಕ್ಕೆ ತಿಳಿಸಿದರು. ಎಲ್ಲಿಯೂ ಸಲ್ಲಿಸದ ಅಫಿಡವಿಟ್ ಬಳಸಿ ವಾಂಖೆಡೆ ಅವರ ಮೇಲೆ ದಾಳಿ ನಡೆಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಇತ್ತ ಎನ್‌ಸಿಬಿ ಕೂಡ ಅರ್ಜಿ ಸಲ್ಲಿಸಿದ್ದು,, ಅಫಿಡವಿಟ್‌ನಲ್ಲಿರುವ ವಿಷಯಗಳು ಸಂಪೂರ್ಣವಾಗಿ ಸುಳ್ಳು. ಎನ್‌ಸಿಬಿ ಎಂತಹ ಸ್ವತಂತ್ರ ತನಿಖಾ ಸಂಸ್ಥೆಯ ಹೆಸರಿಗೆ ಕಳಂಕ ತರುವ, ಧಕ್ಕೆ ತರುವ ಪ್ರಯತ್ನ ಭಾಗವಾಗಿ ಕಿಡಿಗೇಡಿತನದಿಂದ ಕೂಡಿದ್ದ ದಾರಿ ತಪ್ಪಿಸುವಂತಿವೆ" ಎಂದಿದೆ. ಅಲ್ಲದೆ, ಅಫಿಡವಿಟ್‌ನಲ್ಲಿ ಮಹಿಳೆಯೊಬ್ಬರು ಪಂಚ ಸಾಕ್ಷ್ಯಗಳಲ್ಲಿ ಒಬ್ಬರನ್ನು ಭೇಟಿ ಮಾಡಿ ಪ್ರಭಾವ ಬೀರಲು ಯತ್ನಿಸಿದ್ದಾರೆ ಎಂದಿರುವುದು ಸಹ ತನಿಖೆಯನ್ನು ದಾರಿ ತಪ್ಪಿಸುವ ಭಾಗವಾಗಿದೆ ಎಂದು ಎನ್‌ಸಿಬಿ ಹೇಳಿದೆ. ಹೀಗೆ ಉಲ್ಲೇಖವಾಗಿರುವ ಮಹಿಳೆ ಶಾರುಖ್ ಖಾನ್ ಅವರ ಮ್ಯಾನೇಜರ್ ಆಗಿರುವ ಪೂಜಾ ದದ್ಲಾನಿ ಆಗಿದ್ದು ಅಕೆ ಗೋಸಾವಿ ಮತ್ತು ಸೈಲ್ ಅವರನ್ನು ಭೇಟಿಯಾಗಿದ್ದರು ಎಂದು ಅಫಿಡವಿಟ್‌ನಲ್ಲಿದೆ.
ಸೈಲ್ ಅವರ ಅಫಿಡವಿಟ್ ಅನ್ನು ನ್ಯಾಯಾಲಯವು ಅಧಿಕೃತವಾಗಿ ಪರಿಗಣಿಸಬೇಕು. ನ್ಯಾಯಾಲಯದ ನಿರ್ದೇಶನವಿಲ್ಲದೆ ಯಾವುದೇ ರೀತಿಯ ಅಫಿಡವಿಟ್‌ಗಳನ್ನು ಪರಿಗಣಿಸಬಾರದು ಅಥವಾ ಬಳಸಬಾರದು ಇತ್ಯಾದಿ ಅಂಶಗಳನ್ನು ಎನ್‌ಸಿಬಿ ಪ್ರಸ್ತಾಪಿಸಿದೆ.
ವಾದ ಆಲಿಸಿದ ವಿಶೇಷ ನ್ಯಾಯಾಧೀಶ ವಿ.ವಿ. ಪಾಟೀಲ್ ಅವರು ಆದೇಶ ಕಾಯ್ದಿರಿಸಿದ್ದು ಇಂದು ಮಧ್ಯಾಹ್ನ ಅದು ಪ್ರಕಟವಾಗುವ ಸಾಧ್ಯತೆ ಇದೆ.