ಪಶ್ಚಿಮ ಬಂಗಾಳದ ಏಳು ಜಿಲ್ಲೆಗಳಲ್ಲಿ ಮಾರ್ಚ್ 7 ರಿಂದ ಮಾರ್ಚ್ 16 ರ ನಡುವೆ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ಹೊರಡಿಸಿದ ಆದೇಶಕ್ಕೆ ಕಲ್ಕತ್ತಾ ಹೈಕೋರ್ಟ್ ಗುರುವಾರ ತಡೆ ನೀಡಿದೆ [ಆಶ್ಲೇಷ್ ಬಿರಾದಾರ್ ಮತ್ತು ಪಶ್ಚಿಮ ಬಂಗಾಳ ಸರ್ಕಾರ ನಡುವಣ ಪ್ರಕರಣ].
ಸರ್ಕಾರದ ಆದೇಶಕ್ಕೆ ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ರಾಜರ್ಷಿ ಭಾರದ್ವಾಜ್ ಅವರಿದ್ದ ಪೀಠ ತಡೆಯಾಜ್ಞೆ ನೀಡಿತು.
ಮುಂಬರುವ ರಾಜ್ಯ ಬೋರ್ಡ್ ಪರೀಕ್ಷೆಗಳಲ್ಲಿ ಸಾಮೂಹಿಕ ನಕಲು ತಡೆಯುವ ದೃಷ್ಟಿಯಿಂದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿತ್ತು ಎನ್ನಲಾಗಿದೆ. ಮಾಲ್ಡಾ, ಮುರ್ಷಿದಾಬಾದ್, ಉತ್ತರ ದಿನಾಜ್‌ಪುರ್, ಕೂಚ್‌ಬೆಹಾರ್, ಜಲ್‌ಪಾಯ್‌ಗುರಿ, ಬೀರ್‌ಭೂಮ್ ಮತ್ತು ಡಾರ್ಜಿಲಿಂಗ್‌ನಲ್ಲಿ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಲು ಅದು ಮುಂದಾಗಿತ್ತು.
ಇಂಟರ್ನೆಟ್ ಸ್ಥಗಿತಗೊಳಿಸುವಿಕೆಯನ್ನು ಇಂಟರ್‌ನೆಟ್ ಫ್ರೀಡಂ ಫೌಂಡೇಶನ್ ಆಫ್ ಇಂಡಿಯಾದ (ಐಎಫ್‌ಎಫ್‌ಐ) ಆಶ್ಲೇಷ್ ಬಿರಾದಾರ್ ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 144 ರ ಅಡಿಯಲ್ಲಿ ಸರ್ಕಾರ ಇಂತಹ ಅಧಿಸೂಚನೆ ಹೊರಡಿಸಲು ಸಾಧ್ಯವಿಲ್ಲ ಎಂಬುದು ಅವರ ವಾದವಾಗಿತ್ತು.
ಅನುರಾಧಾ ಭಾಸಿನ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿಗೆ ಸರ್ಕಾರದ ಆದೇಶ ವಿರುದ್ಧವಾಗಿದೆ. ಅಲ್ಲದೆ ಯಾವುದೇ ವೃತ್ತಿ, ವ್ಯಾಪಾರ ವ್ಯವಹಾರದಲ್ಲಿ ತೊಡಗುವ ಅಥವಾ ಯಾವುದೇ ಉದ್ಯೋಗ ಕೈಗೊಳ್ಳುವ ಸ್ವಾತಂತ್ರ್ಯ ಒದಗಿಸುವ ಸಂವಿಧಾನದ ಮೂಲಭೂತ ಹಕ್ಕನ್ನು ನೀಡುವ 19(1)(ಜಿ) ವಿಧಿಯನ್ನು ಇದು ಉಲ್ಲಂಘಿಸುತ್ತದೆಎಂದು ಅರ್ಜಿದಾರರು ದೂರಿದ್ದರು. ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಎಸ್ ಎನ್ ಮುಖರ್ಜಿ ವಾದ ಮಂಡಿಸಿದ್ದರು.