ನ್ಯಾಯಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇಮಕ ಮಾಡದಿದ್ದರೆ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಸರ್ಕಾರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಬಳಿಕ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಮತ್ತು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಗೆ (ಐಟಿಎಟಿ) ನ್ಯಾಯಾಂಗ ಮತ್ತು ತಾಂತ್ರಿಕ ಸದಸ್ಯರ ನೇಮಕಾತಿಗೆ ಕೇಂದ್ರ ಸರ್ಕಾರ ಅಂಗೀಕಾರದ ಮುದ್ರೆಯೊತ್ತಿದೆ.
ಎನ್‌ಸಿಎಲ್‌ಟಿಗೆ ಹದಿನೆಂಟು ಸದಸ್ಯರನ್ನು ನೇಮಿಸುವ ಪ್ರಸ್ತಾವನೆಯನ್ನು ಕೇಂದ್ರವು ಅನುಮೋದಿಸಿದ್ದು ಅದರಲ್ಲಿ ಎಂಟುಮಂದಿ ನ್ಯಾಯಾಂಗ ಸದಸ್ಯರು ಮತ್ತು ಹತ್ತು ತಾಂತ್ರಿಕ ಸದಸ್ಯರಿದ್ದಾರೆ.
ನ್ಯಾಯಾಂಗ ಸದಸ್ಯರ ವಿವರ ಹೀಗಿದೆ:
- ನ್ಯಾ. ತೆಲಪ್ರೊಲು ರಜನಿ (ಆಂಧ್ರ ಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿಗಳು)
- ನ್ಯಾ. ಪ್ರದೀಪ್ ನರಹರಿ ದೇಶಮುಖ್ (ಬಾಂಬೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು)
- ನ್ಯಾ. ಎಸ್ ರಾಮತಿಲಕಂ (ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು)
- ಧರ್ಮೀಂದರ್ ಸಿಂಗ್ (ಅಧ್ಯಕ್ಷರು, ಡಿಆರ್‌ಟಿ -3 (ದೆಹಲಿ)
- ಹರನಮ್ ಸಿಂಗ್ ಠಾಕೂರ್ (ನಿವೃತ್ತ ರಿಜಿಸ್ಟ್ರಾರ್ ಜನರಲ್, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್)
- ಪಿ ಮೋಹನ್ ರಾಜ್ (ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಸೇಲಂ, ತಮಿಳುನಾಡು)
- ರೋಹಿತ್ ಕಪೂರ್ (ವಕೀಲರು)
- ದೀಪ್ಚಂದ್ರಜೋಶಿ (ಜಿಲ್ಲಾನ್ಯಾಯಾಧೀಶರು)
ನೇಮಕಾತಿಯ ಅವಧಿ ಐದು ವರ್ಷ ಅಥವಾ ಸದಸ್ಯರ ವಯೋಮಿತಿ ಅರವತ್ತೈದು ವರ್ಷ ಮೀರದಂತೆ ಇರುತ್ತದೆ.
ಐಟಿಎಟಿಯಲ್ಲಿ, ಹದಿಮೂರು ಹೊಸ ನೇಮಕಾತಿಗಳನ್ನು ಮಾಡಲಾಗಿದ್ದು ಆರು ನ್ಯಾಯಾಂಗ ಸದಸ್ಯರು ಮತ್ತು ಏಳು ಅಕೌಂಟೆಂಟ್ ಸದಸ್ಯರು ಇದ್ದಾರೆ. ನಾಲ್ವರು ನ್ಯಾಯಾಂಗ ಸದಸ್ಯರನ್ನು ಮೀಸಲಾತಿ ರಹಿತ ವರ್ಗದಿಂದ ಹಾಗೂ ತಲಾ ಒಬ್ಬರನ್ನು ಇತರ ಹಿಂದುಳಿದ ವರ್ಗ (ಒಬಿಸಿ) ಮತ್ತು ಪರಿಶಿಷ್ಟ ಜಾತಿ (ಎಸ್‌ಸಿ) ವರ್ಗದಿಂದ ನೇಮಕ ಮಾಡಲಾಗಿದೆ.
ಮೀಸಲಾತಿ ಇಲ್ಲದ ವರ್ಗದಿಂದ ಐವರು ಅಕೌಂಟೆಂಟ್ ಸದಸ್ಯರು, ಒಬಿಸಿ ಮತ್ತು ಎಸ್‌ಸಿ ವರ್ಗದವರಿಂದ ತಲಾ ಒಬ್ಬರು ಸದಸ್ಯರನ್ನು ನೇಮಕ ಮಾಡಲಾಗಿದೆ. ನೇಮಕಾತಿಯ ಅವಧಿ ನಾಲ್ಕು ವರ್ಷ ಅಥವಾ ಸದಸ್ಯರ ವಯೋಮಿತಿ ಅರವತ್ತೇಳು ವರ್ಷ ಮೀರುವಂತಿಲ್ಲ.
ನ್ಯಾಯಾಂಗ ಸದಸ್ಯರು:
- ಸೊಂಜೊಯ್ ಶರ್ಮಾ (ವಕೀಲ)
- ಎಸ್ ಸೀತಾಲಕ್ಷ್ಮಿ (ವಕೀಲೆ)
- ಶತಿನ್ ಗೋಯಲ್ (ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು)
- ಅನುಭವ ಶರ್ಮಾ (ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು)
- ಟಿಆರ್ ಸೆಂಥಿಲ್ ಕುಮಾರ್ (ವಕೀಲ)
- ಮನೋಮೋಹನ್ದಾಸ್ ( ಎಸ್‌ಬಿಐನಲ್ಲಿ ಕಾನೂನು ಅಧಿಕಾರಿ )
ನ್ಯಾಯಮಂಡಳಿಗಳಲ್ಲಿನ ಖಾಲಿ ಹುದ್ದೆ ಭರ್ತಿ ಮಾಡುವಲ್ಲಿ ಕೇಂದ್ರ ಸರ್ಕಾರದ ನಿಷ್ಕ್ರಿಯತೆ ಮತ್ತು ತನ್ನ ತೀರ್ಪು ಉಲ್ಲಂಘಿಸಿ 2021ರ ನ್ಯಾಯಾಧಿಕರಣ ಸುಧಾರಣಾ ಕಾಯಿದೆಯನ್ನು ಜಾರಿಗೊಳಿಸಿದ್ದಕ್ಕಾಗಿ ಸಿಜೆಐ ಎನ್ ವಿ ರಮಣ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಕೇಂದ್ರ ಸರ್ಕಾರದ ವಿರುದ್ಧ ಇತ್ತೀಚೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಸುಪ್ರೀಂಕೋರ್ಟ್‌ನಲ್ಲಿರುವ ಪ್ರಕರಣದ ವಿಚಾರಣೆ ಸೋಮವಾರ ನಡೆಯಲಿದೆ.