ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶ ತೊರೆಯದಂತೆ ಜಾರಿ ನಿರ್ದೇಶನಾಲಯ ಪತ್ರಕರ್ತೆ ರಾಣಾ ಅಯ್ಯೂಬ್‌ಗೆ ನೀಡಿದ್ದ ಲುಕ್ ಔಟ್ ಸುತ್ತೋಲೆ (ಎಲ್‌ಒಸಿ) ಬದಿಗೆ ಸರಿಸಿ ಆಕೆಯ ವಿದೇಶ ಪ್ರಯಾಣಕ್ಕೆ ದೆಹಲಿ ಹೈಕೋರ್ಟ್ ಸೋಮವಾರ ಅನುಮತಿಸಿದೆ.
ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಚಂದ್ರ ಧಾರಿ ಸಿಂಗ್ ಅವರು ರಾಣಾ ಸಲ್ಲಿಸಿದ ರಿಟ್ ಅರ್ಜಿಯನ್ನು ಪುರಸ್ಕರಿಸಿ ಅದಕ್ಕೆ ಕಾರಣಗಳನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ತಿಳಿಸಿದರು.
ಅಯ್ಯೂಬ್ ಪರ ವಾದ ಮಂಡಿಸಿದ ವಕೀಲೆ ವೃಂದಾ ಗ್ರೋವರ್, ತಮ್ಮ ಕಕ್ಷಿದಾರರು ಜಾರಿ ನಿರ್ದೇಶನಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಯಾವಾಗ ಬೇಕಾದರೂ ವಿಚಾರಣೆಗೆ ಹಾಜರಾಗಲು ಸಿದ್ಧರಾಗಿದ್ದಾರೆ ಎಂದು ಹೇಳಿದರು. ಅಯ್ಯೂಬ್ ತನಿಖೆ ಎದುರಿಸಲು ಸಿದ್ಧರಿಲ್ಲ ಎಂಬ ಇ ಡಿ ವಾದವನ್ನೂ ಅವರು ನಿರಾಕರಿಸಿದರು. ವಿದೇಶ ಪ್ರವಾಸಕ್ಕೆ ಅವಕಾಶ ನೀಡಿದರೆ ಪತ್ರಕರ್ತೆ ಭಾರತಕ್ಕೆ ಹಿಂತಿರುಗುವುದಿಲ್ಲ ಎಂಬ ಆತಂಕವನ್ನು ವೃಂದಾ ಹೋಗಲಾಡಿಸಿದರು.
ವಿಚಾರಣೆಯ ಆರಂಭದಲ್ಲಿ, ಜಾರಿ ನಿರ್ದೇಶನಾಲಯದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರು ಕಳೆದ ವಿಚಾರಣೆಯಲ್ಲಿ ನ್ಯಾಯಾಲಯ ಕೇಳಿದ್ದ ಸ್ಥಿತಿಗತಿ ವರದಿಯನ್ನು ಸಲ್ಲಿಸಿದರು.
ರಾಣಾ ವಿರುದ್ಧ ಲುಕ್ ಔಟ್ ಸುತ್ತೋಲೆ (LOC) ಹೊರಡಿಸಿದ ನಂತರ ಮಾರ್ಚ್ 29ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಆಕೆ ಪ್ರಯಾಣ ಮಾಡದಂತೆ ತಡೆಹಿಡಿಯಲಾಗಿತ್ತು.