ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯು (ಎನ್‌ಎಲ್‌ಎಸ್‌ಐಯು) ಪ್ರವೇಶಾತಿಗಾಗಿ ಶನಿವಾರ ಮೂರು ಸೆಷನ್ ಗಳಲ್ಲಿ ನಡೆಸಲಾದ ಕಾನೂನು ಪ್ರವೃತ್ತಿ ಪರೀಕ್ಷೆ (ಎನ್‌ಎಲ್ಎಟಿ) ಸಂದರ್ಭದಲ್ಲಿ ಹಲವು ವಿದ್ಯಾರ್ಥಿಗಳು ತಾಂತ್ರಿಕ ಸಮಸ್ಯೆ ಎದುರಿಸಿರುವುದರಿಂದ ಅಂಥ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ತಾಂತ್ರಿಕ ಪರಿಶೀಲನಾ ಸಮಿತಿ ಶಿಫಾರಸು ಮಾಡಿದೆ. ಇಂದು ಮಧ್ಯಾಹ್ನ 12.30ಕ್ಕೆ ಪರೀಕ್ಷೆ ನಡೆಸಲಾಗುವುದು ಎಂದು ಎನ್‌ಎಲ್‌ಎಸ್‌ಐಯುನ ಪ್ರವೇಶಾತಿ ತಂಡ ಈಮೇಲ್ ನಲ್ಲಿ ತಿಳಿಸಿದೆ.
ಎನ್‌ಎಲ್‌ಎಸ್‌ಐಯು ನಡೆಸಿದ್ದ ಪರೀಕ್ಷೆಯಲ್ಲಿ ತಾಂತ್ರಿಕ ಸಮಸ್ಯೆಗಳ ಮೂಲಕ ಗಮನಸೆಳೆದಿದ್ದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವ ಮಾಹಿತಿಯನ್ನು ರವಾನಿಸಲಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯನ್ನು (ಸಿಎಲ್‌ಎಟಿ) ಹಲವು ಬಾರಿ ಮುಂದೂಡಿದ್ದರಿಂದ ಎನ್‌ಎಲ್‌ಎಸ್‌ಐಯು ಪ್ರತ್ಯೇಕ ಪ್ರವೇಶ ಪರೀಕ್ಷೆಯ ಮೂಲಕ ಪ್ರವೇಶಾತಿ ಕಲ್ಪಿಸುವ ನಿರ್ಧಾರ ಕೈಗೊಂಡಿದೆ.
ತಾಂತ್ರಿಕ ಪರಿಹಾರ ಕೋರದ ವಿದ್ಯಾರ್ಥಿಗಳೂ ಸೇರಿದಂತೆ ಹಲವು ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯ ಸಂಬಂಧದ ಈಮೇಲ್ ಕಳುಹಿಸಲಾಗಿದೆ ಎನ್ನಲಾಗಿದೆ.
ಪರೀಕ್ಷೆ ಬರೆಯಲು ತಾಂತ್ರಿಕ ಸಮಸ್ಯೆ ಎದುರಾಗಿತ್ತು ಎಂದು ಆರೋಪಿಸಿದ್ದ ಅಭ್ಯರ್ಥಿಗಳಿಗೆ ಕಳುಹಿಸಲಾದ ಸಂದೇಶದ ಆಯ್ದ ಅಂಶಗಳು ಇಂತಿವೆ.
ಮಧ್ಯಾಹ್ನ 12 ಗಂಟೆಗೆ ಎನ್‌ಎಲ್‌ಎಟಿ 2020 ಪರೀಕ್ಷೆಯ ಅಂತಿಮ ಪ್ರಕ್ರಿಯೆ ಆರಂಭವಾಗಲಿದೆ. ಪರಿಶೀಲನೆಯ ಬಳಿಕ ಮಧ್ಯಾಹ್ನ 12.30ಕ್ಕೆ ಪರೀಕ್ಷೆ ಆರಂಭವಾಗಲಿದ್ದು, ನಿಗದಿತ ಸಮಯದವರೆಗೆ ಪರೀಕ್ಷೆ ನಡೆಯಲಿದೆ.
ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಲಾಗ್ ಇನ್ ಆಯ್ಕೆ ಮಾಡಿಕೊಂಡ ಬಳಿಕ ಪರೀಕ್ಷೆಯ ಹಿಂದಿನ ಅಂಕ ಮತ್ತು ಉತ್ತರಗಳು ಅಳಿಸಿ ಹೋಗಲಿದೆ.
ಮರು ಪರೀಕ್ಷೆಯಲ್ಲಿ ಅಭ್ಯರ್ಥಿ ಭಾಗವಹಿಸದಿದ್ದರೆ ಸೆಪ್ಟೆಂಬರ್ 12ರಂದು ಬರೆದ ಪರೀಕ್ಷೆಯ ಅಂಕಗಳನ್ನು ಅಂತಿಮ ಅಂಕಗಳು ಎಂದು ಪರಿಗಣಿಸಲಾಗುವುದು.
ತಾಂತ್ರಿಕ ಅರ್ಹತೆಗಳನ್ನು ಪೂರೈಸಬಲ್ಲ ಯಂತ್ರಗಳನ್ನು ಸಿದ್ಧಪಡಿಸಿಕೊಳ್ಳುವುದು ಅಭ್ಯರ್ಥಿಗಳ ಜವಾಬ್ದಾರಿ. ಮಾನ್ಯ ಮಾಡಲ್ಪಟ್ಟ ಸರ್ಕಾರಿ ಐಡಿ ಮತ್ತು ಪರೀಕ್ಷೆ ಬರೆಯಲು ಅಗತ್ಯವಾದ ಇಂಟರ್‌ನೆಟ್ ಸಂಪರ್ಕ ಖಾತರಿಪಡಿಸಿಕೊಳ್ಳಬೇಕು. ಪರೀಕ್ಷೆ ಬರೆಯಲು ಇದು ಕೊನೆಯ ಅವಕಾಶ. ಮತ್ತೊಂದು ಅವಕಾಶ ಕಲ್ಪಿಸಲಾಗುವುದಿಲ್ಲ.
ಲಾಗಿನ್ ದಾಖಲೆಗಳನ್ನು ಪಡೆದು ಕೀಯನ್ನು ರಾತ್ರಿಯ ಬಳಿಕ admissions.nls.ac.in ಗೆ ಲಾಗಿನ್ ಆಗಿ ಕಳುಹಿಸುವುದು.