ಈದ್ಗಾ ಮೈದಾನದಲ್ಲಿ ಆ. 31ರಿಂದ ಸೀಮಿತ ಅವಧಿಗೆ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆ ನಡೆಸಲು ಅನುಮತಿಸಿದ ಹೈಕೋರ್ಟ್‌

ಮಧ್ಯಂತರ ಕೋರಿಕೆ ಪರಿಗಣಿಸುವುದಕ್ಕಾಗಿ ಮಾತ್ರ ಈ ಆದೇಶದಲ್ಲಿ ಪ್ರಸ್ತಾಪಿಸಿರುವ ವಿಚಾರಗಳು ಸೀಮಿತವಾಗಿದ್ದು, ಇದು ಮೇಲ್ಮನವಿ ಅಥವಾ ಏಕಸದಸ್ಯ ಪೀಠದ ಮುಂದಿರುವ ರಿಟ್‌ ಮನವಿಯ ಅರ್ಹತೆಯ ಮೇಲೆ ಯಾವುದೇ ಪರಿಣಾಮ ಉಂಟು ಮಾಡುವುದಿಲ್ಲ ಎಂದಿರುವ ಪೀಠ.
Chamrajpet idgah masjid and Karnataka HC
Chamrajpet idgah masjid and Karnataka HC

ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಆಗಸ್ಟ್‌ 31ರ ನಂತರ ಸೀಮಿತ ಅವಧಿಗೆ ಧಾರ್ಮಿಕ ಮತ್ತು ಸಾಂಸ್ಕೃತಿ ಚಟುವಟಿಕೆ ಹಮ್ಮಿಕೊಳ್ಳಲು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಅನುಮತಿಸುವ ಮೂಲಕ ಮಹತ್ವದ ಮಧ್ಯಂತರ ಆದೇಶ ಮಾಡಿದೆ. ಹೀಗಾಗಿ, ಗಣೇಶೋತ್ಸವಕ್ಕೆ ಹಾದಿ ಸುಗಮವಾಗಿದೆ.

“ಈದ್ಗಾ ಮೈದಾನವು ಆಟದ ಮೈದಾನವಾಗಿದ್ದು, ಪಕ್ಷಕಾರರು ಯಥಾಸ್ಥಿತಿ ಕಾಪಾಡಬೇಕು. ರಮ್ಜಾನ್ ಮತ್ತು ಬಕ್ರೀದ್‌ನಲ್ಲಿ ಮಾತ್ರ ಪಾರ್ಥನೆ ಸಲ್ಲಿಸಲು ಮುಸ್ಲಿಮ್‌ ಸಮುದಾಯಕ್ಕೆ ಅವಕಾಶ ಇರುತ್ತದೆ. ಇದನ್ನು ಹೊರತುಪಡಿಸಿ ಯಾವುದೇ ದಿನ ಪ್ರಾರ್ಥನೆಗೆ ಅವಕಾಶವಿಲ್ಲ” ಎಂದು ಗುರುವಾರ ಮಧ್ಯಂತರ ಆದೇಶ ಮಾಡಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ಮತ್ತು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶದಲ್ಲಿ ಮಾರ್ಪಾಡು ಮಾಡಿದೆ.

“ಭಾರತೀಯ ಸಮಾಜವು ಧಾರ್ಮಿಕ, ಭಾಷಿಕ, ಸ್ಥಳೀಯ ವೈವಿಧ್ಯತೆ ಹೊಂದಿದೆ. ವಿವಿಧ ಸಮುದಾಯಗಳ ನಡುವೆ ಸೋದರತೆಯನ್ನು ನಮ್ಮ ಸಮಾಜ ಪ್ರತಿಪಾದಿಸುತ್ತದೆ. ಭಾರತೀಯ ನಾಗರಿಕತೆಯ ವೈಶಿಷ್ಟ್ಯವು ಧಾರ್ಮಿಕ ಸಹಿಷ್ಣುತೆಯ ತತ್ವವಾಗಿದೆ. ಹೀಗಾಗಿ, 2022ರ ಆಗಸ್ಟ್ 25ರಂದು ಏಕಸದಸ್ಯ ಪೀಠವು ಮಾಡಿರುವ ಆದೇಶದಲ್ಲಿ ಮಾರ್ಪಾಡು ಮಾಡಿದ್ದು, 2022ರ ಆಗಸ್ಟ್ 31ರಿಂದ ಮುಂದಕ್ಕೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಬರುವ ಕೋರಿಕೆಗಳನ್ನು ಪರಿಗಣಿಸಿ ಸೂಕ್ತ ಆದೇಶ ಹೊರಡಿಸಲು ರಾಜ್ಯ ಸರ್ಕಾರಕ್ಕೆ ಅನುಮತಿಸಲಾಗಿದೆ” ಎಂದು ಪೀಠ ಆದೇಶದಲ್ಲಿ ಹೇಳಿದೆ.

ಅಲ್ಲದೇ, “2022ರ ಆಗಸ್ಟ್‌ 25ರಂದು ಏಕಸದಸ್ಯ ಪೀಠ ನೀಡಿರುವ ನಿರ್ದೇಶನಗಳಲ್ಲಿ ಇನ್ನಿತರ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಮಧ್ಯಂತರ ಕೋರಿಕೆಯನ್ನು ಪರಿಗಣಿಸುವುದಕ್ಕಾಗಿ ಮಾತ್ರ ಈ ಆದೇಶದಲ್ಲಿ ಪ್ರಸ್ತಾಪಿಸಿರುವ ವಿಚಾರಗಳು ಸೀಮಿತವಾಗಿದ್ದು, ಇದು ಮೇಲ್ಮನವಿ ಅಥವಾ ಏಕಸದಸ್ಯ ಪೀಠದ ಮುಂದಿರುವ ರಿಟ್‌ ಮನವಿಯ ಅರ್ಹತೆಯ ಮೇಲೆ ಯಾವುದೇ ಪರಿಣಾಮ ಉಂಟು ಮಾಡುವುದಿಲ್ಲ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದ್ದು, ವಿಚಾರಣೆಯನ್ನು ಸೆಪ್ಟೆಂಬರ್‌ 12ಕ್ಕೆ ಮುಂದೂಡಿದೆ.

ಬೆಂಗಳೂರಿನ ಚಾಮರಾಜಪೇಟೆಯ ಸರ್ವೆ ನಂ. 40ರಲ್ಲಿ ಇರುವ 2.05 ಗುಂಟೆ ಭೂಮಿಯನ್ನು ಖಾತೆ ಮಾಡಿಕೊಡುವಂತೆ ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿ ಸಲ್ಲಿಸಿದ್ದ ಕೋರಿಕೆಯನ್ನು ಬಿಬಿಎಂಪಿಯ ಪಶ್ಚಿಮ ವಲಯ ಜಂಟಿ ಆಯುಕ್ತರು 2022ರ ಆಗಸ್ಟ್‌ 6ರಂದು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ವಕ್ಫ್‌ ಮಂಡಳಿಯು ಹೈಕೋರ್ಟ್‌ ಮೆಟ್ಟಿಲೇರಿತ್ತು. 2022ರ ಆಗಸ್ಟ್‌ 25ರಂದು ಏಕಸದಸ್ಯ ಪೀಠವು ಈದ್ಗಾ ಮೈದಾನವನ್ನು ಆಟಕ್ಕೆ ಸೀಮಿತಗೊಳಿಸಿ, ಯಥಾಸ್ಥಿತಿ ಕಾಪಾಡುವಂತೆ ಪಕ್ಷಕಾರರಿಗೆ ಆದೇಶಿಸಿ, ಮಧ್ಯಂತರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೂಲಕ ಮೇಲ್ಮನವಿ ಸಲ್ಲಿಸಿತ್ತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು “ಈದ್ಗಾ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ವಿವಾದವಿದ್ದು, ಆಕ್ಷೇಪಿತ ಸ್ಥಳದಲ್ಲಿ ಆಗಸ್ಟ್‌ 31ರಂದು ಸೀಮಿತ ಅವಧಿಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಚುಟುವಟಿಕೆ ನಡೆಸಲು ಕೋರಿ ಐದು ಅರ್ಜಿಗಳನ್ನು ವಿವಿಧ ಸಂಘಟನೆಗಳು ಮನವಿ ಸಲ್ಲಿಸಿವೆ. ಈ ಅರ್ಜಿಗಳ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಅವಕಾಶ ಮಾಡಿಕೊಡಬೇಕು” ಎಂದು ಕೋರಿದರು.

Also Read
[ಈದ್ಗಾ ಮೈದಾನ ವಿವಾದ] ಯಥಾಸ್ಥಿತಿ ಕಾಪಾಡಿ; ರಮ್ಜಾನ್ ಮತ್ತು ಬಕ್ರೀದ್‌ನಲ್ಲಿ ಮಾತ್ರ ಪಾರ್ಥನೆಗೆ ಅವಕಾಶ: ಹೈಕೋರ್ಟ್‌

“ಏಕಸದಸ್ಯ ಪೀಠದ ಮುಂದಿರುವ ಪ್ರಕರಣಕ್ಕೆ ಬಿಬಿಎಂಪಿ ಮಾತ್ರ ಆಕ್ಷೇಪಣೆ ಸಲ್ಲಿಸಿದೆ. ರಾಜ್ಯ ಸರ್ಕಾರವು ಸಮಗ್ರವಾದ ಆಕ್ಷೇಪಣೆ ಸಲ್ಲಿಸುವುದಕ್ಕೂ ಮುನ್ನ ಆಕ್ಷೇಪಿತ ಸ್ಥಳವನ್ನು ಸಾರ್ವಜನಿಕ ಹಿತಕ್ಕೆ ಬಳಸದಂತೆ ತಡೆದಿದೆ. ಇಲ್ಲಿ ಏಕಸದಸ್ಯ ಪೀಠವು ಬ್ಲಾಂಕೆಟ್‌ ಆದೇಶ ಮಾಡಿದ್ದು, ಇದು ಕಾನೂನುಬಾಹಿರ” ಎಂದು ವಾದಿಸಿದ್ದರು.

ವಕ್ಫ್‌ ಮಂಡಳಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಜಯಕುಮಾರ್‌ ಎಸ್‌. ಪಾಟೀಲ್‌ ಅವರು ಸರ್ಕಾರದ ಕೋರಿಕೆ ಆಕ್ಷೇಪಿಸಿದರು. ಬಿಬಿಎಂಪಿ ಜಂಟಿ ವಲಯ ಆಯುಕ್ತರು ಮತ್ತು ಕರ್ನಾಟಕ ಕೇಂದ್ರೀಯ ಮುಸ್ಲಿಮ್‌ ಮಂಡಳಿಯ ಪರವಾಗಿ ವಕೀಲ ವಿ ಶ್ರೀನಿಧಿ ವಾದ ಮಂಡಿಸಿದ್ದರು.

Related Stories

No stories found.
Kannada Bar & Bench
kannada.barandbench.com