ತನ್ನ ವಿರುದ್ಧ ಜಾರಿ ನಿರ್ದೇಶನಾಲಯ ಹೂಡಿದ್ದ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಜಿಯಾಬಾದ್ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಪತ್ರಕರ್ತೆ ರಾಣಾ ಅಯ್ಯೂಬ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ವಕೀಲೆ ವೃಂದಾ ಗ್ರೋವರ್ ಅವರು ತುರ್ತು ವಿಚಾರಣೆಯನ್ನು ಕೋರಿದರು. ಆಗ ಸಿಜೆಐ ಪ್ರಕರಣವನ್ನು ಜನವರಿ 23ರಂದು ವಿಚಾರಣೆ ನಡೆಸಲು ಸಮ್ಮತಿ ಸೂಚಿಸಿದರು.
ಜಾರಿ ನಿರ್ದೇಶನಾಲಯ ಅಕ್ಟೋಬರ್ 12, 2022ರಂದು ಸಲ್ಲಿಸಿದ್ದ ಪ್ರಾಸಿಕ್ಯೂಷನ್ ದೂರಿಗೆ ಸಂಬಂಧಿಸಿದಂತೆ ಗಾಜಿಯಾಬಾದ್ ವಿಚಾರಣಾ ನ್ಯಾಯಾಲಯ ಅಯೂಬ್ ಅವರಿಗೆ ಸಮನ್ಸ್ ನೀಡಿತ್ತು. ರಾಣಾ ಅವರ ವಿರುದ್ಧ ಅಪರಾಧವನ್ನು ಪರಿಗಣಿಸಲು ಮೇಲ್ನೋಟಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ವಿಶೇಷ ನ್ಯಾಯಾಧೀಶ ವತ್ಸಲ್ ಶ್ರೀವಾಸ್ತವ ಅವರು ನವೆಂಬರ್ 29 ರಂದು ನೀಡಿದ ಆದೇಶದಲ್ಲಿ ತಿಳಿಸಿದ್ದರು.
ಐಪಿಸಿ, ಮಾಹಿತಿ ತಂತ್ರಜ್ಞಾನ ತಿದ್ದುಪಡಿ ಕಾಯಿದೆ ಮತ್ತು ಕಪ್ಪುಹಣ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಗಾಜಿಯಾಬಾದ್‌ನ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 2021 ರಲ್ಲಿ ರಾಣಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಇದನ್ನು ಆಧರಿಸಿ ಜಾರಿ ನಿರ್ದೇಶನಾಲಯ ರಾಣಾ ವಿರುದ್ಧ ಅಕ್ರಮ ಹಣ ವರ್ಗಾವಣೆ ಕುರಿತ ತನಿಖೆ ಆರಂಭಿಸಿತ್ತು.
ರಾಣಾ ಅಯ್ಯೂಬ್ ಮೇಲಿರುವ ಆಪಾದನೆಯೇನು?
ಜಾರಿ ನಿರ್ದೇಶನಾಲಯದ ಪ್ರಕಾರ, ಅಯ್ಯೂಬ್ ಅವರು ಆನ್‌ಲೈನ್ ವೇದಿಕೆಯಾದ ಕೆಟ್ಟೊದಲ್ಲಿ ನಿಧಿಸಂಗ್ರಹ ಅಭಿಯಾನ ಪ್ರಾರಂಭಿಸುವ ಮೂಲಕ ದತ್ತಿನಿಧಿ ಹೆಸರಿನಲ್ಲಿ ಸಾರ್ವಜನಿಕರಿಂದ ಅಕ್ರಮ ಹಣ ಸಂಪಾದಿಸಿದ್ದಾರೆ. ಮೂರು ವಿವಿಧ ಆನ್‌ಲೈನ್ ಅಭಿಯಾನಗಳ ಮೂಲಕ ವಿವಿಧ ಅವಘಡಗಳ ಸಂತ್ರಸ್ತರ ನೆರವಿಗೆಂದು ರಾಣಾ ಅಯ್ಯೂಬ್ ಒಟ್ಟು ರೂ. 2.69 ಕೋಟಿ ಚಂದಾ ಸಂಗ್ರಹಿಸಿದ್ದರು. ಇದರಲ್ಲಿ ಕೇವಲ ರೂ. 29 ಲಕ್ಷವನ್ನು ಮಾತ್ರವೇ ಅವರು ಉದ್ದೇಶಿತ ಪರಿಹಾರ ಚಟುವಟಿಕೆಗಳಿಗೆ ವಿನಿಯೋಗಿಸಿದ್ದು ಉಳಿದ ಹಣವನ್ನು ವೈಯಕ್ತಿಕ ಬಳಕೆಗೆ ಇರಿಸಿಕೊಂಡಿದ್ದರು ಎನ್ನುವುದು ಇ ಡಿ ಆಪಾದನೆ.
ರಾಣಾ ಅವರು ರೂ. 50 ಲಕ್ಷ ಹಣವನ್ನು ತಮ್ಮ ಹೆಸರಿನಲ್ಲಿ ಸ್ಥಿರ ಠೇವಣಿಯಾಗಿ ಇರಿಸಿಕೊಂಡಿದ್ದು, ರೂ. 50 ಲಕ್ಷ ಹಣವನ್ನು ತಮ್ಮ ಮತ್ತೊಂದು ಹೊಸ ಖಾತೆಗೆ ವರ್ಗಾಯಿಸಿಕೊಂಡಿದ್ದರು ಎಂದು ಇ ಡಿ ಹೇಳಿದೆ. ರಾಣಾ ಅವರ ಬ್ಯಾಂಕ್ ಖಾತೆಗಳಲ್ಲಿದ್ದ ಒಟ್ಟು ರೂ. 1.7 ಕೋಟಿ ಹಣವನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.