ಸುದರ್ಶನ್ ಟಿವಿ ಯುಪಿಎಸ್ಸಿ ಜಿಹಾದ್ ಪ್ರಕರಣ: ಮೊದಲಿಗೆ ಡಿಜಿಟಲ್ ಮಾಧ್ಯಮ ನಿಯಂತ್ರಿಸಬೇಕು ಎಂದ ಕೇಂದ್ರ

ವಾಕ್ ಸ್ವಾತಂತ್ರ್ಯ ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮವನ್ನು ಸಮತೋಲನಗೊಳಿಸಬೇಕಾದ ಜಾಗವನ್ನು ಈಗಾಗಲೇ ಶಾಸನಬದ್ಧ ನಿಬಂಧನೆಗಳು ಮತ್ತು ಹಿಂದಿನ ತೀರ್ಪುಗಳು ನಿಯಂತ್ರಿಸುತ್ತಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
Sudarshan TV
Sudarshan TV

ಮಾಧ್ಯಮ ನಿಯಂತ್ರಣಕ್ಕೆ ನ್ಯಾಯಾಲಯ ಕ್ರಮ ಕೈಗೊಳ್ಳುವುದಾದರೆ ಮೊದಲು ಡಿಜಿಟಲ್ ಮಾಧ್ಯಮವನ್ನು ಹತೋಟಿಗೆ ತರಬೇಕು ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಕೆ ಎಂ ಜೋಸೆಫ್ ಹಾಗೂ ಇಂದೂ ಮಲ್ಹೋತ್ರಾ ಅವರಿದ್ದ ತ್ರಿಸದಸ್ಯ ಪೀಠಕ್ಕೆ 33 ಪುಟಗಳ ಅಫಿಡವಿಟ್ ಸಲ್ಲಿಸಿರುವ ಕೇಂದ್ರ ಸರ್ಕಾರ ಮೊದಲು ನ್ಯಾಯಾಲಯ ಡಿಜಿಟಲ್ ಮಾಧ್ಯಮದತ್ತ ಗಮನ ಹರಿಸಬೇಕು. ನಂತರ ಕಾಯ್ದೆಗಳು ಮತ್ತು ತೀರ್ಪುಗಳಿಂದ ನಿಯಂತ್ರಣಕ್ಕೊಳಗಾಗಿರುವ ಟಿವಿ ಅಥವಾ ಇಲೆಕ್ಟ್ರಾನಿಕ್ ಮಾಧ್ಯಮದತ್ತ ಗಮನಹರಿಸಬೇಕು” ಎಂದು ತಿಳಿಸಿದೆ.

“ಮುಖ್ಯವಾಹಿನಿ ಮಾಧ್ಯಮದಲ್ಲಿ (ಇಲೆಕ್ಟ್ರಾನಿಕ್ ಅಥವಾ ಮುದ್ರಣ ಮಾಧ್ಯಮ) ಮುದ್ರಣ ಅಥವಾ ಪ್ರಸಾರ ಎಂಬುದು ಒಂದು ಬಾರಿ ನಡೆಯುವಂಥದ್ದು. ಡಿಜಿಟಲ್ ಮಾಧ್ಯಮಕ್ಕೆ ವ್ಯಾಪಕವಾದ ವೀಕ್ಷಕ ಅಥವಾ ಓದುಗ ವರ್ಗ ಇದ್ದು ವೇಗವಾಗಿ ತಲುಪುತ್ತದೆ. ಇಲೆಕ್ಟ್ರಾನಿಕ್ ಅಪ್ಲಿಕೇಶನ್‌ಗಳಾದ ವಾಟ್ಸಪ್, ಟ್ವಿಟರ್, ಫೇಸ್‌ಬುಕ್ ಗಳಿಂದಾಗಿ ವೈರಲ್ ಆಗುವ ಸಾಧ್ಯತೆ ಇರುತ್ತದೆ. ಗೌರವಾನ್ವಿತ ನ್ಯಾಯಾಲಯ ಮಾಧ್ಯಮ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದಾದರೆ ಮೊದಲು ಡಿಜಿಟಲ್ ಮಾಧ್ಯಮವನ್ನು ಹತೋಟಿಗೆ ತರಬೇಕಿದ್ದು ಇಲೆಕ್ಟ್ರಾನಿಕ್ ಮಾಧ್ಯಮಕ್ಕೆ ಈಗಾಗಲೇ ಸಾಕಷ್ಟು ಕಾಯ್ದೆ ಮತ್ತು ತೀರ್ಪುಗಳ ಚೌಕಟ್ಟು ವಿಧಿಸಲಾಗಿದೆ”
ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಮಾಧ್ಯಮ ನಿಯಂತ್ರಣಕ್ಕೆ ಮಾನದಂಡಗಳನ್ನು ರೂಪಿಸಬೇಕು ಎಂದು ನ್ಯಾಯಾಲಯ ಬಯಸುವುದಾದರೆ ಕೇವಲ ಮುಖ್ಯವಾಹಿನಿ ಇಲೆಕ್ಟ್ರಾನಿಕ್ ಮಾಧ್ಯಮಗಳಿಗಷ್ಟೇ ಅದನ್ನು ಸೀಮಿತಗೊಳಿಸುವುದು ಸಮರ್ಥನೀಯವಲ್ಲ ಎಂದು ಸಚಿವಾಲಯ ತಿಳಿಸಿದೆ.

Also Read
ವಿವಾದಿತ ಸುದರ್ಶನ್ ಟಿವಿಗೆ ಖಡಕ್ ಎಚ್ಚರಿಕೆ; “ಯುಪಿಎಸ್‌ಸಿ ಜಿಹಾದ್” ಪ್ರಸಾರ ಮುಂದೂಡಲು ಸುಪ್ರೀಂ ಕೋರ್ಟ್ ಆದೇಶ

ವಾಕ್ ಸ್ವಾತಂತ್ರ್ಯ ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮವನ್ನು ಸಮತೋಲನಗೊಳಿಸಬೇಕಾದ ಜಾಗವನ್ನು ಈಗಾಗಲೇ ಶಾಸನಬದ್ಧ ನಿಬಂಧನೆಗಳು ಮತ್ತು ಹಿಂದಿನ ತೀರ್ಪುಗಳು ನಿಯಂತ್ರಿಸುತ್ತಿವೆ ಎಂದು ಕೇಂದ್ರ ಸಮರ್ಥಿಸಿಕೊಂಡಿದೆ.

ಪ್ರಸ್ತುತ ಅರ್ಜಿಯು ಸುದರ್ಶನ್ ಟಿವಿಗೆ ಮಾತ್ರ ಸೀಮಿತವಾಗಿರುವುದರಿಂದ, ಕೋರ್ಟ್ ಅಮಿಕಸ್ ಕ್ಯೂರಿ (ನ್ಯಾಯಾಲಯಕ್ಕೆ ಸಹಕರಿಸುವ ವಕೀಲ) ಅಥವಾ ಅಮಿಕಸ್ ರೂಪದಲ್ಲಿ ವ್ಯಕ್ತಿಗಳ ಸಮಿತಿಯನ್ನು ನೇಮಿಸಿಕೊಳ್ಳಲು ಮುಂದಾಗಬಾರದು’ ಎಂದು ಅದು ಕೋರಿದೆ.

Also Read
ಬ್ರೇಕಿಂಗ್: ಸುದರ್ಶನ್ ಟಿವಿಯ “ಯುಪಿಎಸ್‌ಸಿ ಜಿಹಾದ್” ಕಾರ್ಯಕ್ರಮಕ್ಕೆ ಒಪ್ಪಿಗೆ ನೀಡಿದ ಕೇಂದ್ರ ಸರ್ಕಾರಕ್ಕೆ ನೋಟಿಸ್

ಜವಾಬ್ದಾರಿಯುತ ಪತ್ರಿಕೋದ್ಯಮಕ್ಕಾಗಿ ಈಗಾಗಲೇ ವಿಶಾಲ ಮಾನದಂಡಗಳನ್ನು ರೂಪಿಸಲಾಗಿದ್ದು ಸುದರ್ಶನ್ ಟಿವಿಯಂತಹ ವಾಹಿನಿಗಳಲ್ಲಿ ಪ್ರಕಟವಾದ ಒಂದು ಕಂತು ಅಥವಾ ಕೆಲವು ಕಂತುಗಳನ್ನು ಆಧರಿಸಿ ಸಾಮಾನ್ಯ ಕ್ರಮ ಕೈಗೊಳ್ಳುವ ಅಗತ್ಯ ಇಲ್ಲ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್ (​​ಎನ್ ಬಿ ಎ) ಕೂಡ ಪ್ರಮಾಣಪತ್ರ ಸಲ್ಲಿಸಿದ್ದು ಸುದ್ದಿಗೆ ಸಂಬಂಧಿಸಿದಂತೆ ಇರುವ ನಿಯಂತ್ರಕ ಕ್ರಮಗಳನ್ನು ಕೋರ್ಟಿಗೆ ವಿವರಿಸಿದೆ. ಆಕ್ಷೇಪಾರ್ಹ ಸುದ್ದಿಗಳನ್ನು ಪ್ರಸಾರ ಮಾಡಿದರೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ ಮುಂತಾದ ಸಂಗತಿಗಳನ್ನು ವಿವರಿಸಿದೆ.

ಸರ್ಕಾರಿ ಸೇವೆಯಲ್ಲಿ ಮುಸ್ಲಿಮರು ಒಳನುಸುಳುತ್ತಿರುವ ಪಿತೂರಿಯನ್ನು ಬಹಿರಂಗಪಡಿಸಲಾಗುವುದು ಎಂದು ಘೋಷಿಸಿಕೊಂಡಿದ್ದ ವಿವಾದಿತ ಸುದರ್ಶನ್ ಟಿವಿಯ “ಯುಪಿಎಸ್‌ಸಿ ಜಿಹಾದ್‌” ಕಾರ್ಯವನ್ನು ಇತ್ತೀಚೆಗೆ ತಡೆಹಿಡಿದಿದ್ದ ಸುಪ್ರೀಂಕೋರ್ಟ್ ಕಾರ್ಯಕ್ರಮಕ್ಕೆ ಒಪ್ಪಿಗೆ ನೀಡಿದ್ದ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿತ್ತು.

Related Stories

No stories found.
Kannada Bar & Bench
kannada.barandbench.com