ಬ್ರೇಕಿಂಗ್: ನೀಟ್ ಮುಂದೂಡಿಕೆ ಕೋರಿದ್ದ ಹೊಸ ಅರ್ಜಿಗಳ ವಿಚಾರಣೆಯಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಕಾರ

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಸುಭಾಷ್ ರೆಡ್ಡಿ ಮತ್ತು ಎಂ ಆರ್ ಶಾ ನೇತೃತ್ವದ ತ್ರಿಸದಸ್ಯ ಪೀಠದಿಂದ ಅರ್ಜಿಗಳ ವಜಾ.
Supreme Court and NEET
Supreme Court and NEET

ಕೋವಿಡ್ ಸೋಂಕು ವ್ಯಾಪಿಸುತ್ತಿದ್ದು ಮತ್ತು ಲಾಕ್‌ಡೌನ್ ನಿಯಮಗಳ ನಿರ್ಬಂಧದಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 13ರಂದು ನಡೆಸಲು ಉದ್ದೇಶಿಸಲಾಗಿರುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ನಡೆಸುವ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಹೊಸ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿತು.

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಸುಭಾಷ್ ರೆಡ್ಡಿ ಮತ್ತು ಎಂ ಆರ್ ಷಾ ನೇತೃತ್ವದ ಪೀಠವು ವಕೀಲ ಅಲಖ್ ಅಲೋಕ್ ಶ್ರೀವಾಸ್ತವ ಅವರು ಕೇಶವ್ ಮಹೇಶ್ವರಿ ಪರವಾಗಿ ಮತ್ತು ಅನುಭ ಶ್ರೀವಾಸ್ತವ ಸಹಾಯ್ ಅವರು ಅರ್ಜಿತ್ ಸಾಹು ಮತ್ತು ಪ್ರಗ್ಯಾ ಪ್ರಾಂಜಲ್ ಪರವಾಗಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿತು.

ಹಿರಿಯ ವಕೀಲರಾದ ಅರವಿಂದ್ ದಾತಾರ್ ಮತ್ತು ಕೆ ಟಿ ಎಸ್ ತುಳಸಿ, ವಕೀಲರಾದ ಶೋಯಿಬ್ ಆಲಂ ಮತ್ತು ನೀಲಾ ಗೋಖಲೆ ಅವರು ತಮ್ಮ ಅರ್ಜಿದಾರರ ಪರ ವಾದಿಸಿದರು.

ರಾಜ್ಯಗಳಲ್ಲಿ ಆರಂಭಿಸಲು ಉದ್ದೇಶಿಸಿರುವ ಕಡಿಮೆ ಪರೀಕ್ಷಾ ಕೇಂದ್ರಗಳ ಬಗ್ಗೆ ಆತಂಕ ವ್ಯಕ್ತಪಡಿಸಲಾಯಿತು. ಬಿಹಾರದಲ್ಲಿ ಕೇವಲ ಎರಡು ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ ಎಂದು ಹಿರಿಯ ವಕೀಲ ದಾತಾರ್ ಅವರು ನ್ಯಾಯಾಲಯದ ಗಮನಸೆಳೆದರು. ಬೇರೆಬೇರೆ ರಾಜ್ಯಗಳಿಗೆ ಬೇರೆ ಬೇರೆ ಪರೀಕ್ಷಾ ದಿನಾಂಕ ನಿಗದಿಗೊಳಿಸಲಾಗದು ಎಂದು ನ್ಯಾಯಾಲಯ ಪ್ರತಿಕ್ರಿಯಿಸಿತು.

ಮೂರು ವಾರಗಳ ಪರೀಕ್ಷೆ ಮುಂದೂಡಬೇಕು ಎಂದು ದಾತಾರ್ ಆಗ್ರಹಿಸಿದರು. ಆದರೆ, ತೀರ್ಪು ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಾಲಯ ಹೇಳಿತು.

ದೇಶದಲ್ಲಿ ಪ್ರತಿದಿನ 90 ಸಾವಿರ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ ಎಂದ ಹಿರಿಯ ನ್ಯಾಯವಾದಿ ತುಳಸಿ ಅವರು ಕೋವಿಡ್ ಹಿನ್ನೆಲೆಯಲ್ಲಿ ಪ್ರವೇಶ ಪರೀಕ್ಷೆಗೆ ಗೈರಾಗುವ ಅಭ್ಯರ್ಥಿಗಳಿಗೆ ಸೂಕ್ತ ಅವಕಾಶ ಕಲ್ಪಿಸುವಂತೆ ಆದೇಶಿಸಿರುವ ಬಾಂಬೆ ಹೈಕೋರ್ಟ್ ಆದೇಶವನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದರು.

ಈ ವಿಚಾರಗಳು ಪರೀಕ್ಷಾ ಪ್ರಾಧಿಕಾರಕ್ಕೆ ಸಂಬಂಧಿಸಿದ್ದಾಗಿದ್ದು, ನ್ಯಾಯಾಲಯವು ಈ ವಿಚಾರದಲ್ಲಿ ನಿರ್ದೇಶನ ನೀಡಲಾಗದು ಎಂದಿತು. ಪರೀಕ್ಷೆ ನಡೆಸಲು ಜಾರಿಗೊಳಿಸಲಾಗಿರುವ ಮಾರ್ಗಸೂಚಿಗಳು ಮತ್ತು ಎಸ್‌ಒಪಿಯಲ್ಲಿ ಕೆಲವೊಂದು ದೋಷಗಳಿವೆ ಎಂದು ವಕೀಲ ಆಲಂ ವಾದಿಸಿದರು. ವಿದ್ಯಾರ್ಥಿಗಳ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಸಂಬಂಧಪಟ್ಟ ಪ್ರಾಧಿಕಾರಗಳು ಅಗತ್ಯವಾದ ಮುಂಜಾಗ್ರತಾ ಕ್ರಮಕೈಗೊಳ್ಳಲಿವೆ ಎಂದು ನ್ಯಾಯಪೀಠ ಹೇಳಿತು.

ಮಾರ್ಗಸೂಚಿಗಳನ್ನು ಜಾರಿಗೊಳಿಸುವಂತೆ ಸ್ಥಳೀಯ ಆಡಳಿತಕ್ಕೆ ನಿರ್ದೇಶಿಸುವಂತೆ ನ್ಯಾಯಾಲಯಕ್ಕೆ ಆಲಂ ಮನವಿ ಮಾಡಿದರು. “ಅದೆಲ್ಲವನ್ನೂ ಮಾಡಲಾಗುತ್ತದೆ” ಎಂದು ನ್ಯಾಯಾಲಯ ಪ್ರತಿಕ್ರಿಯಿಸಿತು.

Also Read
ಬ್ರೇಕಿಂಗ್: ನೀಟ್, ಜೆಇಇ ಮುಂದೂಡುವಂತೆ ಕೋರಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

“ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಮಾವೇಶಗೊಳ್ಳುವುದಕ್ಕೆ ನಿರ್ಬಂಧ ವಿಧಿಸಿರುವ ಈ ಸಂದರ್ಭದಲ್ಲಿ ನೂರಾರು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಾರೆ. ಈ ಸಂದರ್ಭದಲ್ಲಿ ತಾವು ನೀಡುವ ಆದೇಶವು ಬಹಳ ಪ್ರಾಮುಖ್ಯತೆ ಹೊಂದಿದೆ” ಎಂದು ಆಲಂ ನ್ಯಾಯಾಲಯದ ನಿರ್ದೇಶನಕ್ಕೆ ಮನವಿ ಮಾಡಿದರು.
ವಕೀಲೆ ಗೋಖಲೆ ಅವರು ತಮ್ಮ ವಾದ ಮಂಡಿಸಲು ಮುಂದಾದರು. ಆದರೆ, ಅವರ ವಾದವನ್ನು ಅರ್ಧಕ್ಕೆ ತಡೆದ ನ್ಯಾಯಾಲಯವು ಅರ್ಜಿಗಳ ವಿಚಾರಣೆ ಮುಂದುವರಿಸಲು ಇಚ್ಛೆಯಿಲ್ಲ ಎಂದಿತು. ಆ ಬಳಿಕ ಅರ್ಜಿಗಳನ್ನು ವಜಾಗೊಳಿಸಲಾಯಿತು.

ದೇಶದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುವವರೆಗೆ ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ಮುಂದೂಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಆಗಸ್ಟ್ 17ರಂದು ವಜಾ ಮಾಡಿದ್ದ ನ್ಯಾಯಾಲಯವು ಅನಿರ್ದಿಷ್ಟಾವಧಿಗೆ ಪರೀಕ್ಷೆಗಳನ್ನು ಮುಂದೂಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯವನ್ನು ಅತಂತ್ರತೆಯಲ್ಲಿ ಇಡಲಾಗದು ಎಂದಿತ್ತು.

ತೀರ್ಪಿನಿಂದ ತೃಪ್ತರಾಗದ ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳ ಆರು ಸಂಪುಟ ದರ್ಜೆ ಸಚಿವರು ಆಗಸ್ಟ್‌ 17ರ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದನ್ನೂ ನ್ಯಾಯಾಲಯವು ವಜಾಗೊಳಿಸಿತ್ತು. ಜೆಇಇಯನ್ನು ಸೆಪ್ಟೆಂಬರ್ 1-6 ರವರೆಗೆ ನಡೆಸಲಾಗಿದ್ದು, ಸೆಪ್ಟೆಂಬರ್ 13ರಂದು ನೀಟ್ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com