ನೋಟು ಅಮಾನ್ಯೀಕರಣ ಕ್ರಮ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌; 4:1 ಬಹುಮತದ ತೀರ್ಪು

ನೋಟು ಅಮಾನ್ಯೀಕರಣದ ಕೇಂದ್ರ ಸರ್ಕಾರದ 2016ರ ನಿರ್ಧಾರವನ್ನು 4:1 ಬಹುಮತದ ತೀರ್ಪಿನ ಮೂಲಕ ಎತ್ತಿ ಹಿಡಿದ ಸಾಂವಿಧಾನಿಕ ಪೀಠ. ನ್ಯಾ. ನಾಗರತ್ನ ಅವರಿಂದ ಭಿನ್ನ ತೀರ್ಪು.
Supreme Court and Demonetisation
Supreme Court and Demonetisation

ಕೇಂದ್ರ ಸರ್ಕಾರವು 2016ರಲ್ಲಿ ಕೈಗೊಂಡಿದ್ದ ರೂ.500 ಮತ್ತು ರೂ.1000 ಮುಖಬೆಲೆಯ ನೋಟುಗಳ ರದ್ದತಿ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠ ಸೋಮವಾರ ವಜಾಗೊಳಿಸಿದ್ದು, 4:1 ಬಹುಮತದ ತೀರ್ಪಿನ ಮೂಲಕ ಕೇಂದ್ರ ಕ್ರಮವನ್ನು ಎತ್ತಿಹಿಡಿದಿದೆ [ವಿವೇಕ್ ನಾರಾಯಣ ಶರ್ಮಾ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್, ಬಿ ಆರ್ ಗವಾಯಿ, ಎ ಎಸ್ ಬೋಪಣ್ಣ, ವಿ ರಾಮಸುಬ್ರಮಣಿಯನ್ ಹಾಗೂ ಬಿವಿ ನಾಗರತ್ನ ಅವರಿದ್ದ ಸಾಂವಿಧಾನಿಕ ಪೀಠ ಈ ತೀರ್ಪು ನೀಡಿದೆ. ಬಹುಮತದ ಅಭಿಪ್ರಾಯವನ್ನು ಮಂಡಿಸಿದ ನ್ಯಾ. ಗವಾಯಿ ಅವರು " ಆರ್ಥಿಕ ಕ್ರಮಗಳ ವಿಚಾರದಲ್ಲಿ ಮಧ್ಯಪ್ರವೇಶಿಸುವಾಗ ಗಣನೀಯ ನಿಯಂತ್ರಣವಿರಬೇಕು. ಅಂತಹ ಕ್ರಮಗಳ ಹಿಂದಿನ ನಿರ್ಧಾರವನ್ನು ನಾವು ನ್ಯಾಯಿಕ ದೃಷ್ಟಿಯಿಂದ ನೋಡಲಾಗದು” ಎಂದರು.

Supreme Court Demonetisation Bench
Supreme Court Demonetisation Bench

ಮುಂದುವರೆದು ಅವರು ನೋಟು ಅಮಾನ್ಯೀರಣದ ಕ್ರಮಕ್ಕೆ ಸಂಬಂಧಿಸಿದಂತೆ, "ಕೇಂದ್ರ ಮತ್ತು ಆರ್‌ಬಿಐ ನಡುವೆ 6 ತಿಂಗಳ ಅವಧಿಯ ಸಮಾಲೋಚನೆ ನಡೆದಿದೆ. ಅಂತಹ ಕ್ರಮವನ್ನು ತರಲು ಸಮಂಜಸವಾದ ಸಂಬಂಧವಿದೆ ಎಂದು ನಾವು ಭಾವಿಸುತ್ತೇವೆ ಮತ್ತು ಅನುಪಾತದ ಸಿದ್ಧಾಂತಕ್ಕೆ ವಿರುದ್ಧವಾಗಿ ನೋಟು ಅಮಾನ್ಯೀಕರಣವಿಲ್ಲ" ಎಂದು ತಿಳಿಸಿದರು. ಅಂತಿಮವಾಗಿ,  ನೋಟು ಅಮಾನ್ಯಗೊಳಿಸಲು ಆರ್‌ಬಿಐಗೆ ಯಾವುದೇ ಸ್ವತಂತ್ರ ಅಧಿಕಾರವಿಲ್ಲ ಎಂದು ಅವರು ತೀರ್ಪು ನೀಡಿದರು.

“ಹೀಗಾಗಿ, ಕೇಂದ್ರಕ್ಕೆ ಲಭ್ಯವಿರುವ ಅಧಿಕಾರ ನಿರ್ದಿಷ್ಟ ಸರಣಿಯ ಬ್ಯಾಂಕ್ ನೋಟುಗಳಿಗೆ ಮಾತ್ರ ಸಂಬಂಧಿಸಿದ್ದಾಗಿತ್ತು ಎಂದು ಅರ್ಥವಲ್ಲ. ಇದು ಎಲ್ಲಾ ನೋಟು ಸರಣಿಗಳಿಗೆ ಸಂಬಂಧಿಸಿದ್ದಾಗಿತ್ತು… ಆರ್‌ಬಿಐ ಕಾಯಿದೆಯ ಸೆಕ್ಷನ್ 26 (2) ರ ಅಡಿಯಲ್ಲಿ ಯಾವುದೇ ಹೆಚ್ಚಿನ ಅಧಿಕಾರವಿಲ್ಲ. ಹೀಗಾಗಿ ಅದನ್ನು ರದ್ದುಗೊಳಿಸಲಾಗುವುದಿಲ್ಲ. ಅಧಿಸೂಚನೆ ಮಾನ್ಯವಾಗಿದ್ದು ಅನುಪಾತದ ಪರೀಕ್ಷೆಯನ್ನು ತೃಪ್ತಿಪಡಿಸುತ್ತದೆ. ನೋಟುಗಳ ವಿನಿಮಯದ ಅವಧಿ ಅಸಮಂಜಸವೆಂದು ಹೇಳಲಾಗುವುದಿಲ್ಲ” ಎಂದರು.

Also Read
ನೋಟು ಅಮಾನ್ಯೀಕರಣ ಪ್ರಕರಣ: ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ಮುಂದೆ ಪಿ ಚಿದಂಬರಂ ಮಂಡಿಸಿದ ವಾದವೇನು?

ಅಮಾನ್ಯೀಕರಣದ ಕುರಿತು ವ್ಯತಿರಿಕ್ತ ತೀರ್ಪು ನೀಡಿದ ನ್ಯಾ.  ನಾಗರತ್ನ ಅವರು ನೋಟು ಅಮಾನ್ಯೀಕರಣಕ್ಕೆ ಸಂಬಂಧಿಸದಂತೆ ಅರ್ಜಿದಾರರರು ಎತ್ತಿದ್ದು ವಿವಿಧ  ಪ್ರಶ್ನೆಗಳಿಗೆ ಉತ್ತರಿಸಿದರು. ನೋಟು ಅಮಾನ್ಯೀಕರಣದ ವೇಳೆ ಆರ್‌ಬಿಐ ಸ್ವಂತ ವಿವೇಚನೆಯನ್ನು ಬಳಸಿಲ್ಲ ಎಂದು ಭಿನ್ನ ತೀರ್ಪು ನೀಡಿದರು.

"ಕೇಂದ್ರ ಸರ್ಕಾರದ ಆದೇಶದ ಮೇರೆಗೆ ನೋಟು ಅಮಾನ್ಯೀಕರಣವು ಬ್ಯಾಂಕ್‌ಗಳು ಮಾಡುವುದಕ್ಕಿಂತ ನಾಗರಿಕರ ಮೇಲೆ ಪರಿಣಾಮ ಬೀರುವ ಗಂಭೀರ ಸಮಸ್ಯೆಯಾಗಿದೆ. ಆದ್ದರಿಂದ, ನನ್ನ ದೃಷ್ಟಿಯಲ್ಲಿ, ಕೇಂದ್ರದ ಅಧಿಕಾರವು ವಿಶಾಲವಾಗಿದ್ದು, ಇದನ್ನು ಪೂರ್ಣ ಕಾಯಿದೆಯ ಮೂಲಕ ಮಾಡಬೇಕಿತ್ತು." ಎಂದು ಹೇಳಿದರು.

ಬಹಳ ಮುಖ್ಯವಾಗಿ ಅವರು "[ಆರ್‌ಬಿಐ ಕಾಯಿದೆಯ] ಸೆಕ್ಷನ್ 26(2) ನಿಯಮಾವಳಿಯಲ್ಲಿಯೇ ಒಂದು ಅಂತರ್ಗತ ವಿರೋಧಾಭಾಸವಿದೆ. ಆರ್‌ಬಿಐ ಸಲ್ಲಿಸಿದ ದಾಖಲೆಗಳನ್ನು ನೋಡಿದಾಗ, ಕೇಂದ್ರ ಸರ್ಕಾರವು ನೋಟು ಅಮಾನ್ಯೀಕರಣವನ್ನು ಶಿಫಾರಸು ಮಾಡಿದೆ ಎಂಬುದು ಗಮನಕ್ಕೆ ಬರುತ್ತದೆ. ಇದು ಆರ್‌ಬಿಐ ಸ್ವಂತ ವಿವೇಚನೆಯಿಂದ ಈ ಕ್ರಮವನ್ನು ಕೈಗೊಂಡಿಲ್ಲ ಎಂಬುದನ್ನು ತೋರಿಸುತ್ತದೆ” ಎಂಬುದಾಗಿ ತಿಳಿಸಿದರು.

Related Stories

No stories found.
Kannada Bar & Bench
kannada.barandbench.com