ಲಂಚ ಪಡೆಯುವಾಗ ಸಿಕ್ಕಿಬಿದ್ದು, ಅಮಾನತುಗೊಂಡಿದ್ದ ಅಧಿಕಾರಿಯನ್ನು ಮತ್ತೆ ಅದೇ ಹುದ್ದೆಗೆ ನೇಮಕ ಮಾಡಲು ಸಹಕರಿಸಿರುವ ಆರೋಪಿಯಾದ ವಿರಾಜಪೇಟೆ ಶಾಸಕ ಬೋಪಯ್ಯ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯಕಾರಿ ಎಂಜಿನಿಯರ್ ಎನ್ ಶ್ರೀಕಂಠಯ್ಯ ಮತ್ತು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಖಾಸಗಿ ದೂರು ದಾಖಲಿಸಿ, ಸ್ಥಿತಿಗತಿ ವರದಿ ಸಲ್ಲಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಈಚೆಗೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶಿಸಿದೆ.
ಮಡಿಕೇರಿಯ ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ ಎ ರವಿ ಚೆಂಗಪ್ಪ ಅವರ ದೂರಿನ ವಿಚಾರಣೆ ನಡೆಸಿದ 81ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ಹಾಗೂ ಜನಪ್ರನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣೆಗಾಗಿ ಇರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಬಿ ಜಯಂತ ಕುಮಾರ್ ಆದೇಶ ಮಾಡಿದ್ದಾರೆ.
ದೂರುದಾರರು 2022ರ ಏಪ್ರಿಲ್ 20ರಂದು ನೀಡಿರುವ ದೂರಿಗೆ ಸಂಬಂಧಿಸಿದಂತೆ ಎಸಿಬಿಯು ಜುಲೈ 8ರ ಒಳಗೆ ಸ್ಥಿತಿಗತಿ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಪ್ರಕರಣದ ಹಿನ್ನೆಲೆ: ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕಾರ್ಯಕಾರಿ ಎಂಜಿನಿಯರ್ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಉಸ್ತುವಾರಿ ಕಾರ್ಯಕಾರಿ ಎಂಜಿನಿಯರ್ ಆಗಿದ್ದ ಎನ್ ಶ್ರೀಕಂಠಯ್ಯ ಅವರು ಅರ್ಜಿದಾರರು ನಡೆಸಿದ್ದ ಎರಡು ಪ್ರತ್ಯೇಕ ಕೆಲಸಗಳಿಗೆ ಹಣ ಬಿಡುಗಡೆ ಮಾಡಲು ಕ್ರಮವಾಗಿ 1.92 ಲಕ್ಷ ಮತ್ತು 75 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಅರ್ಜಿದಾರರ ದೂರಿನ ಹಿನ್ನೆಲೆಯಲ್ಲಿ ಮಡಿಕೇರಿ ಎಸಿಬಿ ಅಧಿಕಾರಿಗಳಿಗೆ ಶ್ರೀಕಂಠಯ್ಯ ಅವರು 2021ರ ಸೆಪ್ಟೆಂಬರ್ 18ರಂದು ಬಹಿರಂಗವಾಗಿ ಲಂಚ ಪಡೆಯುವಾಗ ಸಿಕ್ಕಿ ಬಿದ್ದಿದ್ದರು. ಹೀಗಾಗಿ, ಭ್ರಷ್ಟಚಾರ ನಿಯಂತ್ರಣ ಕಾಯಿದೆ ಅಡಿ ಪ್ರಕರಣ ದಾಖಲಾಗಿದ್ದು, ವಿಶೇಷ ನ್ಯಾಯಾಲಯವು ಶ್ರೀಕಂಠಯ್ಯ ಅವರನ್ನು 2021ರ ಅಕ್ಟೋಬರ್ 1ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಇದರ ಬೆನ್ನಿಗೇ ಆರೋಪಿಯನ್ನು 2021ರ ಅಕ್ಟೋಬರ್ 28ರಿಂದ ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿತ್ತು. 2019ರಲ್ಲಿಯೂ ಶ್ರೀಕಂಠಯ್ಯ ಸೇವೆಯಿಂದ ಅಮಾನತಾಗಿದ್ದರು ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಈ ನಡುವೆ ವಿರಾಜಪೇಟೆ ಶಾಸಕ ಕೆ ಜಿ ಬೋಪಯ್ಯ ಅವರು ಆರೋಪಿ ಶ್ರೀಕಂಠಯ್ಯ ಬೆನ್ನಿಗೆ ನಿಂತಿದ್ದು, ಭ್ರಷ್ಟಾಚಾರದಲ್ಲಿ ತೊಡಗಲು ನೆರವು ನೀಡಿದ್ದಾರೆ. ಭ್ರಷ್ಟಾಚಾರದ ಹಣದಲ್ಲಿ ಬೋಪಯ್ಯನವರೂ ಪಾಲು ಪಡೆಯುತ್ತಿದ್ದಾರೆ. ಹಾಲಿ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದಿರುವ ಶ್ರೀಕಂಠಯ್ಯನವರು ಬೋಪಯ್ಯ ಜೊತೆಗೂಡಿ ಅಂದಿನ ಸಚಿವ ಈಶ್ವರಪ್ಪ ಅವರ ಮೇಲೆ ಪ್ರಭಾವ ಬೀರಿ ಅಮಾನತಿಗೂ ಮುನ್ನ ಇದ್ದ ಹುದ್ದೆಗೆ 2022ರ ಫೆಬ್ರವರಿ 18ರಂದು ಮರಳಿದ್ದಾರೆ. ಇದಕ್ಕಾಗಿ ಬೋಪಯ್ಯ ಮತ್ತು ಈಶ್ವರಪ್ಪ ಅವರಿಗೆ 2.5 ಕೋಟಿ ರೂಪಾಯಿ ಲಂಚವನ್ನು ಶ್ರೀಕಂಠಯ್ಯ ಪಾವತಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.